ADVERTISEMENT

ಅಂತರಂಗ: ಹೆಚ್ಚು ತಿನ್ನುವ ಬಯಕೆ ನಿಯಂತ್ರಣದಲ್ಲಿರಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 22:30 IST
Last Updated 14 ನವೆಂಬರ್ 2025, 22:30 IST
   
ನನಗೀಗ 40 ವರ್ಷ. ಅತಿಯಾಗಿ ತಿನ್ನುತ್ತೇನೆ. ಕಡಿಮೆ ತಿಂದರೆ ಹಸಿವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಬಿ.ಪಿ., ಶುಗರ್‌ ಬಂದರೆ ಎಂದು ಭಯವಾಗುತ್ತದೆ. ಹೆಚ್ಚು ತಿನ್ನುವ ಬಯಕೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?. –ರಾಗಿಣಿ, ಮಲೇಬೆನ್ನೂರು

ಹಿರಿಯರು ಒಂದು ಮಾತು ಹೇಳಿದ್ದಾರೆ. ‘ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ ಮತ್ತು ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ’ ಅಂತ. ಆರಂಭದಲ್ಲಿ ನನಗೂ ಈ ಮಾತಿನ ಬಗ್ಗೆ ಪ್ರಶ್ನೆಗಳು ಮೂಡುತ್ತಿದ್ದವು. ಈ ಮಾತಿನ ಆಳ ನನಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಮಾಮೂಲಾಗಿ ನಾವು ಮೂರು ಹೊತ್ತು ತಿನ್ನುವುದು ರೂಢಿಯಲ್ಲಿ ಬಂದಿರುವ ಅಭ್ಯಾಸ. ಹಾಗಿರುವಾಗ ‘ನಾವೆಲ್ಲರೂ ರೋಗಿಗಳಾ?! ನಾವು ಆರೋಗ್ಯವಾಗಿಯೇ ಇದ್ದೇವಲ್ಲಾ’ ಅಂತ ಯೋಚನೆಗಳು ಬರುತ್ತಿದ್ದವು. ಆದರೆ ಬುದ್ಧಿ ಬೆಳೆಯುತ್ತಾ ಹೋದಂತೆ, ಈ ಮಾತಿನ ನಿಜಾರ್ಥವೇನು ಎಂಬುದು ಅರಿವಾಯಿತು. ನಾವು ಆಹಾರವನ್ನು ಸೇವಿಸುವ ಅಗತ್ಯವೇನು ಎಂಬ ಮೂಲಭೂತವಾದ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಇಲ್ಲೂ ಒಂದು ಜಿಜ್ಞಾಸೆಯ ಪ್ರಶ್ನೆಯನ್ನು ಹಲವರು ಎತ್ತುತ್ತಾರೆ. ಅದೇನೆಂದರೆ, ‘ನಾವು ಬದುಕುವುದಕ್ಕೋಸ್ಕರ ತಿನ್ನುವುದೋ ಅಥವಾ ತಿನ್ನುವುದಕ್ಕೋಸ್ಕರ ಬದುಕುವುದೋ?!’

ಮೊದಲು ನಾವು ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ಯಾಕೆಂದರೆ, ನೀವು ಬದುಕುವುದಕ್ಕೋಸ್ಕರ ತಿನ್ನುವುದಾದರೆ, ಶರೀರಕ್ಕೆ ಎಷ್ಟು ಬೇಕೋ ಅಷ್ಟು ತಿಂದರೆ ಸಾಕು. ಯಾವತ್ತಾದರೂ ಸಾಯುವುದಂತೂ ಇದ್ದದ್ದೇ. ಹಾಗಾಗಿ, ನಮಗೆ ಬೇಕಾದದ್ದನ್ನೆಲ್ಲಾ ತಿನ್ನುವುದೇ ಸರಿ ಅನ್ನುವಂತಹ ದೃಷ್ಟಿಕೋನವನ್ನು ಇಟ್ಟುಕೊಂಡು, ತಿನ್ನುವುದಕ್ಕಾಗಿಯೇ ಬದುಕುವವರಾದರೆ, ಅಂತಹವರಿಗೆ ನನ್ನ ಮಾತುಗಳು ಪಥ್ಯವಾಗಲಿಕ್ಕಿಲ್ಲ. ಅವರಿಗೆ ಈ ರೀತಿಯ ಪ್ರಶ್ನೆಗಳೂ ಮೂಡುವುದಿಲ್ಲವೆನ್ನಿ!

ಹಸಿವಿನ ವಿಚಾರ ಬಂದಾಗ, ನಾವು ಅರ್ಥ ಮಾಡಿಕೊಳ್ಳ
ಬೇಕಾದ ಒಂದು ವಿಚಾರ ಏನೆಂದರೆ, ನಾವು ನಿರಂತರವಾಗಿ ಕೆಲಸ ಮಾಡುವಾಗ ನಮ್ಮೊಳಗಿರುವ ಇಂಧನ ಮುಗಿಯುವುದು ಸಹಜ. ಆದರೆ ನಮ್ಮ ಶರೀರದಲ್ಲಿ ನಾವು ತಿಂದ ಆಹಾರದ ಪ್ರಮಾಣವಷ್ಟೇ ಅಲ್ಲದೆ, ಕೊಬ್ಬಿನಂಶದ ರೂಪದಲ್ಲಿ ಶೇಖರಿಸಲ್ಪಟ್ಟ ಇಂಧನವೂ ಇರುತ್ತದೆ. ಆದರೆ, ನಾವು ಆವಾಗಾವಾಗ ಆಹಾರವನ್ನು ತಿನ್ನುತ್ತಲೇ ಇರುವ ಕಾರಣ, ಶೇಖರಿಸಲ್ಪಟ್ಟ ಇಂಧನ ಬಳಕೆಯಾಗುವುದೇ ಇಲ್ಲ. ಬದಲಾಗಿ ಅದು ಮತ್ತೂ ಮತ್ತೂ ಶೇಖರಣೆ ಆಗುತ್ತಲೇ ಇರುತ್ತದೆ. ಹಾಗಾಗಿಯೇ ಅನೇಕರಿಗೆ ಕೊಬ್ಬಿನಂಶ ಜಾಸ್ತಿ ಆಗುತ್ತದೆ. ಆಹಾರವನ್ನು ಸರಿಯಾದ ಸಮಯಕ್ಕೆ ತಿನ್ನದ ಕಾರಣದಿಂದಲೂ ನಮ್ಮ ಶರೀರವು ಕೊಬ್ಬಿನಂಶವನ್ನು ಆಪತ್ಕಾಲಕ್ಕೆ ಬೇಕಾದರೆ ಎಂದು ಶೇಖರಿಸಿ ಇಡುತ್ತದೆ. ಈ ಎರಡೂ ಸಮಸ್ಯೆಗಳಿಗೆ ಪರಿಹಾರವೇನು? ಸರಿಯಾದ ಸಮಯಕ್ಕೆ ನಿಯಮಿತ ಆಹಾರವನ್ನು ತೆಗೆದುಕೊಳ್ಳುವುದು ಮತ್ತು ಸಾಕಷ್ಟು ನೀರು ಕುಡಿಯುವುದು. ಯಾವಾಗ ನಮ್ಮ ದೇಹಕ್ಕೆ ನೀರಿನ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತದೋ ಆಗ ಅದು ನಮ್ಮ ಹಸಿವಿನ ಪ್ರಮಾಣವನ್ನು ಕಡಮೆ ಮಾಡುತ್ತದೆ. ಮಾತ್ರವಲ್ಲ, ಕೊಬ್ಬಿನಂಶದ ಕರಗುವಿಕೆಗೂ ಸಹಾಯ ಮಾಡುತ್ತದೆ. ಸಮುದ್ರದ ದಡದಲ್ಲಿರುವ ಬಂಡೆ ಹೇಗೆ ನೀರಿನ ಸವರುವಿಕೆಯಿಂದ ಸವೆಯುತ್ತದೆಯೋ ಅದೇ ರೀತಿ, ನಮ್ಮ ಶರೀರದಲ್ಲಿರುವ ಕೊಬ್ಬು ನಾವು ಕುಡಿಯುವ ನೀರಿನ ಸಹಾಯದಿಂದ ಕರಗುತ್ತದೆ. ಹಾಗಾಗಿ, ಈ ಎರಡೂ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಊಟಕ್ಕೆ ಸ್ವಲ್ಪ ಮೊದಲು ನೀರು ಕುಡಿಯುವುದರಿಂದಲೂ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬಹುದು.

ADVERTISEMENT

ಇದರ ಹೊರತಾಗಿ, ನಾವು ಇತರ ಹಬ್ಬ ಹರಿದಿನಗಳ ಸಂದರ್ಭ
ಗಳಲ್ಲಿ ಯಾವುದೇ ಸಿಹಿ ತಿಂಡಿ ಇರಬಹುದು ಅಥವಾ ಎಣ್ಣೆಯಲ್ಲಿ ಕರಿದ ತಿಂಡಿಗಳಿರಬಹುದು, ಅವುಗಳನ್ನು ತಿನ್ನುವಾಗ ಸ್ವಲ್ಪ ನಿಯಂತ್ರಣವನ್ನು ಸಾಧಿಸಬೇಕು. ಯಾಕೆಂದರೆ, ಸಕ್ಕರೆಯ ಪದಾರ್ಥಗಳಾಗಲೀ ಎಣ್ಣೆಯ ಪದಾರ್ಥಗಳಾಗಲೀ ನಮ್ಮ ಶರೀರಕ್ಕೆ ದೊಡ್ಡ ಮಟ್ಟಿಗೆ ಅಗತ್ಯವಿರುವುದಿಲ್ಲ.

ಇನ್ನು ಇಷ್ಟೆಲ್ಲಾ ತಿಳಿವಳಿಕೆ ಇದ್ದರೂ, ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲಾಗುತ್ತಿಲ್ಲ ಅನ್ನುವವರಿಗೆ ಒಂದಷ್ಟು ಸುಲಭ ಉಪಾಯಗಳು:

1.→ಆಹಾರದ ಪ್ರಮಾಣವನ್ನು ಏಕಾಏಕಿ ಕಡಿಮೆ ಮಾಡಬೇಡಿ.

2.→ತಿನ್ನಬೇಕು ಅನ್ನಿಸಿದ ಯಾವುದೇ ಆಹಾರವನ್ನಾದರೂ ತಿನ್ನಿ. ಆದರೆ, ಕಡಿಮೆ ಪ್ರಮಾಣದಲ್ಲಿ ತಿನ್ನಿ. ಆಗ ಅದರ ಕುರಿತು ತೀವ್ರವಾದ ಸೆಳೆತ ಇರುವುದಿಲ್ಲ.

3.→ಕನ್ನಡಿಯ ಮುಂದೆ ನಿಂತು, ನಿತ್ಯವೂ ನೀವು ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಿಕೊಳ್ಳಿ.

4.→ಯಾವುದಾದರೂ ದಿನ ಮನಸ್ಸಿನ ನಿಯಂತ್ರಣ ತಪ್ಪಿ ಹೆಚ್ಚಿಗೆ ತಿಂದರೆ, ಅದಕ್ಕೆ ಕಾರಣಗಳನ್ನು ಹುಡುಕಿಕೊಳ್ಳಿ.

5.→‘ಚೀಟ್ ಡೇ’ ಅನ್ನುವುದು ಒಂದು ಕಾರಣವಷ್ಟೇ. ಒಂದು ದಿನ ಚೀಟ್ ಡೇ ಮಾಡಲು ಹೋಗಿ ಅದರ ಪಾಶದಲ್ಲಿ ಬೀಳಬೇಡಿ.

ಇಷ್ಟೆಲ್ಲ ಮಾಡಿದ ಮೇಲೂ ನಿಮ್ಮ ತಿನ್ನುವಿಕೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ ಅಂತಾದರೆ, ನುರಿತ ಆಹಾರತಜ್ಞರನ್ನು ಅಥವಾ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.