ಹೊಲಗಳ ನಡುವಿನ ಮಣ್ಣಿನ ರಸ್ತೆಯಲ್ಲಿ ಜನರ ದೊಡ್ಡ ಗುಂಪೊಂದು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನಡೆದುಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರೆಲ್ಲರೂ ಬಾಂಗ್ಲಾದೇಶದ ಅಕ್ರಮ ವಲಸಿಗರಾಗಿದ್ದು, ಅಸ್ಸಾಂನ ಗೋಲ್ಪಾರ ಜಿಲ್ಲೆಯ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸಜ್ಜಾಗಿ ಬಂದರು, ಘರ್ಷಣೆಯಲ್ಲಿ ತೊಡಗಿದರು ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಒಂದು ಕೀಫ್ರೇಮ್ ಅನ್ನು ಪ್ರತ್ಯೇಕಗೊಳಿಸಿ, ಅದನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಬಾಂಗ್ಲಾದೇಶದ ಹಲವು ಮಾಧ್ಯಮಗಳಲ್ಲಿ 2025ರ ಜುಲೈ 1ರಂದು ವಿಡಿಯೊಸಹಿತ ವರದಿಗಳು ಪ್ರಕಟವಾಗಿರುವುದು ಕಂಡಿತು. ‘ಢಾಕಾ ಮೇಲ್’, ‘ಜಾಗೊನ್ಯೂಸ್24.ಕಾಮ್’ ಮತ್ತು ‘ಚಾನೆಲ್ ಐ ನ್ಯೂಸ್’ ಪ್ರಕಾರ, ಬಾಂಗ್ಲಾದೇಶದ ಕಿಶನ್‌ಗಂಜ್‌ನಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ವಿಡಿಯೊ ಅದಾಗಿದೆ. ಹಿಂಸಾಚಾರದಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಬಾಂಗ್ಲಾದೇಶದ ವಿಡಿಯೊ ಅನ್ನು ಅಸ್ಸಾಂನ ಅಕ್ರಮ ವಲಸಿಗರು ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.