
ಬಾಂಬೆ ಹೈಕೋರ್ಟ್
(ಪಿಟಿಐ ಚಿತ್ರ)
ಮುಂಬೈ: ಭಾರತೀಯ ನೌಕಾಪಡೆಯ ಪ್ರಮುಖ ವಾಯುನೆಲೆಗಳ ಪೈಕಿ ಒಂದಾಗಿರುವ ‘ಐಎನ್‌ಎಸ್ ಶಿಕ್ರ’ದ ಸಮೀಪ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತರಾಟೆ ತೆಗೆದುಕೊಂಡಿದೆ.
ನೌಕಾಪಡೆಯ ಗಮನಕ್ಕೂ ಬಾರದಂತೆ ವಾಯುನೆಲೆ ಸಮೀಪದಲ್ಲೇ 19 ಅಂತಸ್ತಿನ ಕಟ್ಟಡ ತಲೆ ಎತ್ತಿದ್ದು ಹೇಗೆ ಎಂದು ಪ್ರಶ್ನಿಸಿರುವ ನ್ಯಾಯಪೀಠವು, ಇದಕ್ಕೆ ನೌಕಾಪಡೆಯ ಗುಪ್ತಚರ ವೈಫಲ್ಯವೇ ಕಾರಣ ಎಂದೂ ಚಾಟಿ ಬೀಸಿದೆ.
‘ಶಿಕ್ರ’ ಬಳಿ ಎತ್ತರದ ಕಟ್ಟಡ ನಿರ್ಮಾಣವಾದರೆ ಗಂಭೀರ ಭದ್ರತಾ ಆತಂಕ ಎದುರಾಗುತ್ತದೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಬೇಕೆಂದು ಕೋರಿ ‘ಐಎನ್‌ಎಸ್ ಶಿಕ್ರ’ದ ಕಮಾಂಡಿಂಗ್ ಅಧಿಕಾರಿಯೊಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ರವೀಂದ್ರ ಗುಹೆ ಹಾಗೂ ನ್ಯಾಯಮೂರ್ತಿ ಅಭಯ್ ಮಂತ್ರಿ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ. 2024ರಿಂದಲೇ ಕಟ್ಟಡದ ನಿರ್ಮಾಣ ಆರಂಭವಾಗಿದ್ದು, ಈಗಾಗಲೇ 19 ಅಂತಸ್ತು (70 ಮೀಟರ್) ನಿರ್ಮಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ಆದ ಬಳಿಕ ನೌಕಾಪಡೆ ಎಚ್ಚೆತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಅಸಮಾಧಾನ ವ್ಯಕ್ತಪಡಿಸಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದಾಗ ಭದ್ರತಾ ಕಾರಣಕ್ಕಾಗಿ ಕಟ್ಟಡದ ನಿರ್ಮಾಣ ಕಾಮಗಾರಿಗಳಿಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಆ ಆದೇಶವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಪೀಠ, ಮುಂದಿನ ವಿಚಾರಣೆಯನ್ನು ಮಾರ್ಚ್ 30ಕ್ಕೆ ನಿಗದಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.