ADVERTISEMENT

ಚುನಾವಣಾ ನಿರ್ವಹಣೆಯನ್ನು ಸುಗಮಗೊಳಿಸಲು ಆಯೋಗದಿಂದ 21 ಕ್ರಮಗಳು

ಚುನಾವಣಾ ನಿರ್ವಹಣೆ ಸುಗಮಗೊಳಿಸುವ ಉದ್ದೇಶ * ಮತಗಟ್ಟೆ ಸಂಖ್ಯೆ ಹೆಚ್ಚಳಕ್ಕೆ ಕ್ರಮ

ಪಿಟಿಐ
Published 29 ಮೇ 2025, 14:22 IST
Last Updated 29 ಮೇ 2025, 14:22 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಚುನಾವಣಾ ನಿರ್ವಹಣೆಯನ್ನು ಸುಗಮಗೊಳಿಸಲು ಮತ್ತು ಮತದಾರರ ಅನುಭವವನ್ನು ಉತ್ತಮಗೊಳಿಸಲು ಆಯೋಗವು 21 ಹೊಸ ಉಪಕ್ರಮಗಳನ್ನು ಕೈಗೊಂಡಿದೆ.

26ನೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಆಡಳಿತದ ಮೊದಲ 100 ದಿನಗಳಲ್ಲಿ ಈ ಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಕಾರ್ಯವಿಧಾನದ ಸುಧಾರಣೆ, ತರಬೇತಿ, ಕಾರ್ಯಕ್ರಮಗಳು ಮತ್ತು ಪಾಲುದಾರರ ಭಾಗವಹಿಸುವಿಕೆಯನ್ನು ಈ ಕ್ರಮಗಳು ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಮುಖ ಕ್ರಮಗಳು:

* ಮತಗಟ್ಟೆಯ ಗರಿಷ್ಠ ಮತದಾರರ ಸಂಖ್ಯೆಯನ್ನು 1,500ರಿಂದ 1,200ಕ್ಕೆ ಪರಿಷ್ಕರಿಸಲಾಗಿದೆ. ಇದರಿಂದ ಮತಗಟ್ಟೆಗಳಲ್ಲಿ ದಟ್ಟಣೆ ಕಡಿಮೆಯಾಗಲಿದ್ದು, ಮತದಾನ ಸುಗಮವಾಗಲಿದೆ

* ಬಹುಮಹಡಿ ಕಟ್ಟಡಗಳು ಹೆಚ್ಚಿರುವಂತಹ ಕಡೆಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ

* ಯಾವುದೇ ಮತದಾರರು ಮತ ಚಲಾಯಿಸಲು ಎರಡು ಕಿ.ಮೀಗಿಂತ ಹೆಚ್ಚು ದೂರ ಪ್ರಯಾಣಿಸಲು ಅಗತ್ಯವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ

* ಮತಗಟ್ಟೆ ಸಂಖ್ಯೆಯ ಸ್ಪಷ್ಟತೆಗಾಗಿ ಮತದಾರರ ಮಾಹಿತಿ ಚೀಟಿಗಳನ್ನು ಮರು ವಿನ್ಯಾಸಗೊಳಿಸಲಾಗಿದೆ

* ಮತಗಟ್ಟೆಯ ಪ್ರವೇಶದ್ವಾರದಲ್ಲಿ ಮತದಾರರಿಗೆ ಮೊಬೈಲ್‌ ಫೋನ್‌ ಠೇವಣಿ ಸೌಲಭ್ಯವನ್ನು ಸ್ಥಾಪಿಸಲಾಗುತ್ತದೆ

* ಅಭ್ಯರ್ಥಿಗಳು ಸ್ಥಾಪಿಸುವ ಸಲಹಾ ಡೆಸ್ಕ್‌ಗಳಿಗೆ ಮತಗಟ್ಟೆಯ ಪ್ರವೇಶದ್ವಾರದಿಂದ 100 ಮೀಟರ್‌ಗಳ ಹೊರಗೆ ಅವಕಾಶ ನೀಡಲಾಗುವುದು. ಈ ಮೊದಲು ಮತಗಟ್ಟೆ ಆವರಣದಿಂದ 200 ಮೀಟರ್‌ ಆಚೆಗೆ ಇದಕ್ಕೆ ಅವಕಾಶ ನೀಡಲಾಗುತ್ತಿತ್ತು

* 40ಕ್ಕೂ ಹೆಚ್ಚು ಅರ್ಜಿಗಳ ಮೂಲಕ ದೊರೆಯುತ್ತಿದ್ದ ಸೇವೆಯನ್ನು ಒಂದೇ ಹಂತದಲ್ಲಿ ದೊರೆಯುವಂತೆ ಮಾಡಲು ಹೊಸ ಸಂಯೋಜಿತ ಡ್ಯಾಶ್‌ಬೋರ್ಡ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ

* ದೇಶದ ಮರಣ ನೋಂದಣಿ ದತ್ತಾಂಶವನ್ನು ಭಾರತದ ರಿಜಿಸ್ಟ್ರಾರ್‌ ಜನರಲ್‌ ಕಡೆಯಿಂದ ಪಡೆದು, ಪರಿಶೀಲಿಸಿದ ಬಳಿಕ ಅಂತಹ ಮತದಾರರನ್ನು ಪಟ್ಟಿಯಿಂದ ತೆಗೆಯಲು ಕ್ರಮ ತೆಗೆದುಕೊಳ್ಳಲಾಗಿದೆ

* ಆಯೋಗದ ಪ್ರಧಾನ ಕಚೇರಿಯಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ ‘ಇ–ಕಚೇರಿ’ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.