ADVERTISEMENT

ಪಾಕಿಸ್ತಾನದ ಪರ ಗೂಢಚರ್ಯೆ ಆರೋಪ: ಸರ್ಕಾರಿ ನೌಕರ ವಶಕ್ಕೆ

ಪಿಟಿಐ
Published 29 ಮೇ 2025, 14:25 IST
Last Updated 29 ಮೇ 2025, 14:25 IST
<div class="paragraphs"><p>ಬಂಧನ </p></div>

ಬಂಧನ

   

ಜೈಪುರ/ನವದೆಹಲಿ: ಪಾಕಿಸ್ತಾನದ ಪರವಾಗಿ ಗೂಢಚರ್ಯೆ ನಡೆಸಿದ ಅನುಮಾನದ ಅಡಿಯಲ್ಲಿ ರಾಜಸ್ಥಾನದ ಸರ್ಕಾರಿ ನೌಕರ ಶಕೂರ್ ಖಾನ್‌ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಮಾಜಿ ಸಚಿವ, ಕಾಂಗ್ರೆಸ್ಸಿನ ಸಾಲೇಹ್ ಮೊಹಮ್ಮದ್ ಅವರ ಸಹಾಯಕ ಆಗಿ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ.

ಜಿಲ್ಲಾ ಉದ್ಯೋಗ ಕಚೇರಿಯಲ್ಲಿ ಕೆಲಸ ಮಾಡುವ ಶಕೂರ್‌ ಅವರಿಗೆ ಸೇರಿದ ಮೊಬೈಲ್‌ ಫೋನ್‌ನಲ್ಲಿ ಪಾಕಿಸ್ತಾನದ ಜೊತೆ ನಂಟು ಹೊಂದಿರುವ ದೂರವಾಣಿ ಸಂಖ್ಯೆಗಳು ಇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಕೂರ್ ಅವರು ಪಾಕಿಸ್ತಾನದವರ ಜೊತೆ ಸಂಪರ್ಕದಲ್ಲಿದ್ದರು, ಭದ್ರತೆಗೆ ಸಂಬಂಧಿಸಿದ ವಿವರಗಳನ್ನು ಜೈಸಲ್ಮೇರ್‌ನಿಂದ ಹಂಚಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.

ADVERTISEMENT

ಗುಪ್ತಚರ ಇಲಾಖೆಯ ತಂಡವು ಶಕೂರ್ ಅವರನ್ನು ಬುಧವಾರ ರಾತ್ರಿ ವಶಕ್ಕೆ ಪಡೆದಿದೆ. ‘ಶಕೂರ್ ಅವರು ಪಾಕಿಸ್ತಾನದ ಪರವಾಗಿ ಗೂಢಚರ್ಯೆಯಲ್ಲಿ ಭಾಗಿಯಾಗಿರಬಹುದು ಎಂಬ ಮಾಹಿತಿ ಇದೆ. ಈ ಮಾಹಿತಿ ಬಂದ ನಂತರ ಅವರ ಮೇಲೆ ನಿಗಾ ಇರಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಕೂರ್ ಅವರ ರಾಜಕೀಯ ನಂಟಿನ ಬಗ್ಗೆ ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಶಕೂರ್ ಅವರನ್ನು ಕೇಂದ್ರದ ತನಿಖಾ ಸಂಸ್ಥೆಗಳು ಜೈಪುರದಲ್ಲಿ ವಿಚಾರಣೆಗೆ ಗುರಿಪಡಿಸಲಿವೆ.

ಶಕೂರ್ ಬಂಧನ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕರು, ವಿಸ್ತೃತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಶಕೂರ್ ಅವರು ಗಡಿ ಪ್ರದೇಶಗಳ ಗೋಪ್ಯ ಮಾಹಿತಿಯನ್ನು ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದರು ಎಂದು ಬಿಜೆಪಿ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.

‘ಶಕೂರ್ ಅವರು ಪಾಕಿಸ್ತಾನದ ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದರು ಎನ್ನಲು ಬಲವಾದ ಸಾಕ್ಷ್ಯ ದೊರೆತಿದೆ’ ಎಂದು ಮಾಳವೀಯ ಅವರು ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. ಶಕೂರ್ ಅವರು ಸರ್ಕಾರಕ್ಕೆ ಮಾಹಿತಿ ಒದಗಿಸದೆಯೇ ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಮಾಳವೀಯ ಹೇಳಿದ್ದಾರೆ.

ಬಿಜೆಪಿಯ ಆರೋಪಗಳ ಕುರಿತಾಗಿ ಕಾಂಗ್ರೆಸ್‌ನಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.