
ಸುಪ್ರೀಂಕೋರ್ಟ್
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಚುನಾವಣಾ ಆಯೋಗದ ನಡುವಿನ ಜಟಾಪಟಿಯಿಂದ ಬೇಸರಗೊಂಡಿರುವ ಸುಪ್ರೀಂ ಕೋರ್ಟ್, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಚುನಾವಣಾ ಆಯೋಗಕ್ಕೆ ನೆರವಾಗಲು ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರನ್ನು ನಿಯೋಜಿಸುವಂತೆ ಅಪರೂಪದ ತೀರ್ಪು ನೀಡಿದೆ.
ಆಯೋಗ ಹಾಗೂ ಸರ್ಕಾರದ ನಡುವಿನ ಆರೋಪ–ಪ್ರತ್ಯಾರೋಪದ ಆಟವು ದುರದೃಷ್ಟಕರ. ಆಯೋಗ ಮತ್ತು ಜನರಿಂದ ಆಯ್ಕೆಯಾದ ಸರ್ಕಾರದ ನಡುವಿನ ವಿಶ್ವಾಸದ ಕೊರತೆಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಂಚೋಲಿ ಅವರ ಪೀಠವು ಎಸ್‌ಐಆರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೊಸ ನಿರ್ದೇಶನಗಳನ್ನು ನೀಡಿತು.
ಎಸ್‌ಐಆರ್ ಭಾಗವಾಗಿ ಪ್ರಕಟಿಸಿದ ಮತದಾರರ ಪಟ್ಟಿಗೆ (ಮತದಾರರ ಪಟ್ಟಿಯಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸ) ಸೇರಿಸಿದ ವ್ಯಕ್ತಿಗಳ ಹಕ್ಕುಗಳು ಹಾಗೂ ಆಕ್ಷೇಪಣೆಗಳನ್ನು ಆಲಿಸಿ ತೀರ್ಮಾನ ನೀಡಲು ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ ಎಂದು ಪೀಠವು ತಿಳಿಸಿದೆ.
ಎಸ್‌ಐಆರ್ ಪರಿಷ್ಕರಣೆಯ ಕೆಲಸಕ್ಕಾಗಿ ಗ್ರೂಪ್ ‘ಎ’ ದರ್ಜೆಯ ನೌಕರರನ್ನು ನಿಯೋಜಿಸದ ರಾಜ್ಯ ಸರ್ಕಾರದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು, ಈ ಕೆಲಸಕ್ಕೆ ನೆರವಾಗಲು ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವಂತೆ ಕಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಅವರಿಗೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ತೀವ್ರ ಆಕ್ಷೇಪಣೆಯ ಹೊರತಾಗಿಯೂ ಈ ಹಿಂದೆ ನಿಗದಿಪಡಿಸಿದ ಗಡುವಿನಂತೆ ಫೆಬ್ರುವರಿ 28ರಂದು ಮತದಾರರ ಕರಡು ಪಟ್ಟಿಯನ್ನು ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತು. ಆನಂತರ ಪೂರಕ ಪಟ್ಟಿ ಬಿಡುಗಡೆ ಮಾಡಬಹುದು. ನಾಮಪತ್ರ ಸಲ್ಲಿಕೆಯ ಕೊನೇ ದಿನಾಂಕದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದು ತಿಳಿಸಿತು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೈಕ್ರೋ ಅಬ್ಸರ್ವರ್ಸ್ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದಂತೆ, ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಅಡ್ವೊಕೇಟ್ ಜನರಲ್ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆಗೆ ಶನಿವಾರ ಸಭೆ ನಡೆಸುವಂತೆ ಕಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂ ಕೋರ್ಟ್ ಪೀಠವು ಸೂಚನೆ ನೀಡಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರನ್ನು ನಿಯೋಜಿಸುವ ವಿಧಾನಗಳನ್ನು ಅಂತಿಮಗೊಳಿಸುವ ಕುರಿತಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ.
2002ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಮಾಡುವ ವೇಳೆ ಕೆಲವು ಮತದಾರರು ಹಾಗೂ ಅವರ ಹೆತ್ತವರ ವಯಸ್ಸಿನ ಅಂತರವು 15 ವರ್ಷಗಳಿಗಿಂತಲೂ ಕಡಿಮೆ ಹಾಗೂ 50 ವರ್ಷಗಳಿಗಿಂತಲೂ ಹೆಚ್ಚಾಗಿತ್ತು.
ಬಂಗಾಳದ ಜನರಿಗೆ ಬಹುದೊಡ್ಡ ಗೆಲುವು. ಚುನಾವಣಾ ಆಯೋಗದ ದುರಂಹಕಾರದ ಐತಿಹಾಸಿಕ ಧ್ವಂಸವನ್ನು ನ್ಯಾಯಾಲಯದ ತೀರ್ಪು ಸೂಚಿಸುತ್ತದೆ-ತೃಣಮೂಲ ಕಾಂಗ್ರೆಸ್ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್
ರಾಜ್ಯ ಸರ್ಕಾರವು ಎಸ್‌ಐಆರ್ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದೆ. ಆಯೋಗವು ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಯತ್ನಿಸುತ್ತಿದ್ದರೆ ರಾಜ್ಯ ಸರ್ಕಾರವು ಮೊದಲಿನಿಂದಲೂ ಅಸಹಕಾರ ಮುಂದುವರಿಸಿದೆ-ಸುಕಾಂತ ಮಜುಂದಾರ್ ಬಿಜೆಪಿ ನಾಯಕ ಕೇಂದ್ರ ಸಚಿವ
ಮಮತಾ ಪರ ವಕೀಲರ ತೀವ್ರ ಆಕ್ಷೇಪ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ ಮತದಾರರ ನೋಂದಣಿ ಅಧಿಕಾರಿಗಳು (ಇಆರ್‌ಒ) ಹೊರಡಿಸಿದ ಆದೇಶಗಳನ್ನು ವಿಶೇಷ ಅಧಿಕಾರಿಗಳು (ಎಸ್‌ಆರ್‌ಒ) ಎಂದು ಕರೆಸಿಕೊಳ್ಳುವ ‘ಹೊಸ ತಳಿಯ’ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಆರೋಪಿಸಿದರು. ‘ಇಆರ್‌ಒಗಳನ್ನು ವಿಶೇಷ ತಳಿಯ ಅಧಿಕಾರಿಗಳು ಹಿಂದಿಕ್ಕಲು ಸಾಧ್ಯವಿಲ್ಲ. ಇಆರ್‌ಒ ಮಾಡಿದ್ದನ್ನು ಈ ಅಧಿಕಾರಿಗಳು ಸಂಪೂರ್ಣವಾಗಿ ತಿರಸ್ಕರಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ಮಮತಾ ಪರ ವಕೀಲರ ಆರೋಪವನ್ನು ತಿರಸ್ಕರಿಸಿದ ಚುನಾವಣಾ ಆಯೋಗ ಎಸ್‌ಆರ್‌ಒಗಳು ಮೊದಲಿನಿಂದಲೂ ಇದ್ದಾರೆ ಎಂದು ತಿಳಿಸಿತು. ‘ರಾಜ್ಯ ಸರ್ಕಾರದ ಅಸಹಕಾರ ಮುಂದುವರಿದರೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇಲ್ಲದಿದ್ದರೆ ಇತರೆ ರಾಜ್ಯಗಳ ಅಧಿಕಾರಿಗಳನ್ನು ನಿಯೋಜಿಸಲು ಆಯೋಗವನ್ನು ಕೇಳಲಾಗುವುದು’ ಎಂದು ಪೀಠ ತಿಳಿಸಿತು. ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅಂತಿಮ ಪಟ್ಟಿಯನ್ನು ಫೆಬ್ರುವರಿ 28ರಂದು ಪ್ರಕಟಿಸಲು ಆಯೋಗಕ್ಕೆ ಅನುಮತಿ ನೀಡಿದರೆ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಬಿಕ್ಕಟ್ಟು ತಲೆದೋರಲಿದೆ ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಆಯೋಗ ದೂರು
ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ಡಿ.ಎಸ್.ನಾಯ್ಡು ‘ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಯು ಅಸಹಕಾರವನ್ನು ಮುಂದುವರಿಸಿದೆ. ದುಷ್ಕರ್ಮಿಗಳು ಆಯೋಗದ ದಾಖಲೆಗಳನ್ನು ಹರಿದುಹಾಕಿದ್ದರೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಗಮನ ಸೆಳೆದರು. ‘ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಚುನಾವಣಾ ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡಿದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಫ್‌ಐಆರ್ ದಾಖಲಿಸಿಲ್ಲ’ ಎಂದು ಪೀಠದ ಮುಂದೆ ದಾಖಲೆಗಳನ್ನು ಸಲ್ಲಿಸಿದರು. ವಿವಿಧ ಪಕ್ಷಗಳ ಮುಖಂಡರ ಹೇಳಿಕೆಗಳನ್ನು ಪರಿಶೀಲಿಸಿದ ಸಿಜೆಐ ಸೂರ್ಯಕಾಂತ್ ‘ಚುನಾವಣೆಯ ಹೊಸ್ತಿಲಲ್ಲಿ ಇಂತಹ ಹೇಳಿಕೆ ನೀಡುವುದು ದುರದೃಷ್ಟಕರ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಡಿಜಿಪಿ ವಿರುದ್ಧವೇ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಎಸ್‌ಐಆರ್ ಚಟುವಟಿಕೆಗೆ ನಿಯೋಜಿತರಾಗುವ ನ್ಯಾಯಾಂಗ ಅಧಿಕಾರಿಗಳಿಗೆ ಸಂಚಾರಕ್ಕೆ ನೆರವು ಕಲ್ಪಿಸುವುದಲ್ಲದೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ರಕ್ಷಣೆ ಒದಗಿಸಬೇಕು. ನ್ಯಾಯಾಂಗದ ಅಧಿಕಾರಿಗಳು ಹೊರಡಿಸುವ ಆದೇಶಗಳನ್ನು ನ್ಯಾಯಾಲಯದ ಆದೇಶಗಳು ಎಂದೇ ಪರಿಗಣಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.