
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ 3.66 ಲಕ್ಷ ಮತದಾರರಿಗೆ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನೆರವಾಗುವಂತೆ ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಬಿಎಸ್‌ಎಲ್‌ಎಸ್‌ಎ) ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆಯನ್ನು ನ್ಯಾಯಾಲಯಕ್ಕೆ ಎಳೆತಂದ ಬಳಿಕ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ದೂರುಗಳೊಂದಿಗೆ ನಮ್ಮ ಬಳಿ ಬರಲಿವೆ ಎಂದು ನಿರೀಕ್ಷಿಸಿದ್ದೆವು. ಆದರೆ, ಅವರು (ರಾಜಕೀಯ ಪಕ್ಷಗಳು) ತೃಪ್ತರಾಗಿರುವಂತೆ ತೋರುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಹೇಳಿದೆ.
ಎಸ್‌ಐಆರ್ ಬಳಿಕ ಪಟ್ಟಿಯಿಂದ ಕೈಬಿಡಲಾಗಿರುವ ಮತದಾರರ ಮೇಲ್ಮನವಿಗಳನ್ನು ನಿಗದಿತ ಸಮಯದೊಳಗೆ ಕೈಗೆತ್ತಿಕೊಳ್ಳುವುದನ್ನು ಅಕ್ಟೋಬರ್ 16ರಂದು ನಡೆಯುವ ಮುಂದಿನ ವಿಚಾರಣೆ ವೇಳೆ ನಿರ್ಧರಿಸಲಾಗುವುದು ಎಂದಿದೆ.
ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮತದಾರರಿಗೆ ನೆರವಾಗಲು ಎಲ್ಲಾ ಜಿಲ್ಲಾ ಮಟ್ಟದ ಘಟಕಗಳಿಗೆ ನಿರ್ದೇಶನ ನೀಡುವಂತೆ ಪೀಠವು ಬಿಎಸ್‌ಎಲ್‌ಎಸ್‌ಎಗೆ ಸೂಚಿಸಿದೆ.
ಮತದಾರರಿಗೆ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸ್ವಯಂಸೇವಕರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಪೀಠವು ಹೇಳಿದೆ.
‘ಎಲ್ಲರಿಗೂ ಮೇಲ್ಮನವಿ ಸಲ್ಲಿಸಲು ನ್ಯಾಯಯುತ ಅವಕಾಶ ನೀಡಬೇಕೆಂದು ನಾವು ಬಯಸುತ್ತೇವೆ. ಅವರ ಹೆಸರುಗಳನ್ನು ಪಟ್ಟಿಯಿಂದ ಏಕೆ ಹೊರಗಿಡಲಾಗಿದೆ ಎಂಬುದರ ಕುರಿತ ವಿವರವಾದ ಕಾರಣಗಳನ್ನು ಒಳಗೊಂಡ ಆದೇಶದ ಪ್ರತಿ ಎಲ್ಲರೂ ಹೊಂದಿರಬೇಕು. ಅದು ಒಂದು ಸಾಲಿನ ನಿಗೂಢ ಆದೇಶವಾಗಿರಬಾರದು’ ಎಂದಿದೆ.
ತಮ್ಮ ಹೆಸರನ್ನು ಏಕೆ ಕೈಬಿಡಲಾಗಿದೆ ಎಂಬುದರ ಕುರಿತು ಚುನಾವಣಾ ಆಯೋಗದಿಂದ ಆದೇಶ ಬಂದಿಲ್ಲ ಎಂದು ಹೇಳಿ ಯಾವುದೇ ಮತದಾರ ಇದುವರೆಗೂ ನ್ಯಾಯಾಲಯದ ಮುಂದೆ ಬಂದಿಲ್ಲ ಎಂಬುದನ್ನು ಹಿರಿಯ ವಕೀಲ ರಾಕೇಶ್ ದ್ವಿವೇದಿ ಪೀಠದ ಗಮನಕ್ಕೆ ತಂದರು.
ಎಸ್‌ಐಆರ್ ಬಳಿಕ ಸಿದ್ಧಪಡಿಸಲಾದ ಅಂತಿಮ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾದ 3.66 ಲಕ್ಷದ ಮತದಾರರ ಕುರಿತ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.