ADVERTISEMENT

ವಿದ್ಯುತ್‌ ತೆರಿಗೆ ಕಾನೂನು ಬಾಹಿರ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:25 IST
Last Updated 25 ಜೂನ್ 2025, 16:25 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹತ್ತು ಅಶ್ವಶಕ್ತಿ ಸಾಮರ್ಥ್ಯದ ಕೃಷಿ ನೀರಾವರಿ ಪಂಪ್‌ಸೆಟ್‌ಗಳು, ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ವರ್ಗಗಳ ಅಡಿಯ ಗ್ರಾಹಕರನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಗ್ರಾಹಕರು ಪಾವತಿಸಬೇಕಾದ ವಿದ್ಯುತ್ ಶುಲ್ಕದ ಮೇಲೆ (ಬಾಕಿ ಹೊರತುಪಡಿಸಿ) ಶೇ 5ರಷ್ಟು ತೆರಿಗೆ ವಿಧಿಸುವುದು ಅಸಾಂವಿಧಾನಿಕ’ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಈ ಸಂಬಂಧ ಬೆಂಗಳೂರಿನ ಮೆಸರ್ಸ್‌ ಸೋನಾ ಸಿಂಥೆಟಿಕ್ಸ್‌ ಕಂಪನಿ, ಶ್ರೀ ಕೃಷ್ಣ ಸ್ಪಿನ್ನಿಂಗ್‌ ಮತ್ತು ವೀವಿಂಗ್‌ ಮಿಲ್ಸ್‌ ಪ್ರೈ.ಲಿಮಿಟೆಡ್‌ ಸೇರಿದಂತೆ ಹಲವು ಕಂಪನಿಗಳು 2008, 2009ರಲ್ಲಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ. ‘ಯಾರು ಈ ತಿದ್ದುಪಡಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೋ ಅಂತಹವರಿಗೆ ಮಾತ್ರ ಈ ತೀರ್ಪು ಅನ್ವಯವಾಗುತ್ತದೆ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ. 

ಎಸ್ಕಾಂಗಳು 2009ರಿಂದ 2018ರವರೆಗೆ ಸಂಗ್ರಹಿಸಿರುವ ಶುಲ್ಕವನ್ನು ಮರುಪಾವತಿ ಮಾಡುವಂತೆ ಆದೇಶಿಸಿರುವ ನ್ಯಾಯಪೀಠ, ‘ಸರ್ಕಾರ 2004ರಲ್ಲಿ ಕರ್ನಾಟಕ ವಿದ್ಯುತ್‌ (ಬಳಕೆ ಮೇಲಿನ ತೆರಿಗೆ) ಕಾಯ್ದೆ–1959ರ ಕಲಂ 3(1)ಕ್ಕೆ ತಿದ್ದುಪಡಿ ಮಾಡಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಕೃಷಿ ಪಂಪ್‌ ಸೆಟ್‌ಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ವರ್ಗದ ವಿದ್ಯುತ್‌ ಬಳಕೆದಾರ ಗ್ರಾಹಕರಿಗೆ ಕನಿಷ್ಠ ಶೇ 5ರಷ್ಟು ಶುಲ್ಕ ವಿಧಿಸಲು ಮಾಡಿದ್ದ ತೀರ್ಮಾನ ಕಾನೂನುಬಾಹಿರ’ ಎಂದು ಸಾರಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.