
ಬೆಂಗಳೂರು: ‘ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚಿನ ಜನರ ಜಮಾವಣೆಗೆ ಪೊಲೀಸ್ ಇಲಾಖೆ ಪೂರ್ವಾನುಮತಿ ಕಡ್ಡಾಯ. ಇಲ್ಲದಿದ್ದರೆ ಅದನ್ನು ಕಾನೂನು ಬಾಹಿರ ಅಕ್ರಮ ಕೂಟ ಎಂದು ಪರಿಗಣಿಸಲಾಗುತ್ತದೆ‘ ಎಂಬ ರಾಜ್ಯ ಸರ್ಕಾರದ ಸಂಪುಟ ನಿರ್ಧಾರ ಜಾರಿಗೆ ಹೈಕೋರ್ಟ್ ತಡೆ ನೀಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ರಾಜ್ಯ ಸರ್ಕಾರದ ಪಿತೂರಿ ಸಂವಿಧಾನದ ವಿರುದ್ಧವಾಗಿದೆ. ಸರ್ಕಾರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ತಡೆ ನೀಡಿದೆ. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಹೊರಡಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಸಂವಿಧಾನ ವಿರೋಧಿ ನೀತಿಯನ್ನು ಪಾಲಿಸುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಎಚ್ಚರಿಕೆಯ ಪಾಠವಾಗಿದೆ. ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವುದನ್ನು ಕಾಂಗ್ರೆಸ್ ಸರ್ಕಾರ ಪಾಲಿಸಲಿ’ ಎಂದಿದ್ದಾರೆ.
ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹುಬ್ಬಳ್ಳಿಯ 'ಪುನಃಶ್ಚೇತನ ಸೇವಾ ಸಂಸ್ಥೆ' ಅಧ್ಯಕ್ಷ ವಿನಾಯಕ ಮತ್ತು 'ವಿ ಕೇರ್ ಫೌಂಡೇಶನ್' ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚವಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಮಂಗಳವಾರ ಬೆಳಿಗ್ಗೆ ವಿಚಾರಣೆ ನಡೆಸಿತು.
ಅರ್ಜಿದಾರರು ಸರ್ಕಾರದ ಆದೇಶವು ಸಂವಿಧಾನದ 13,14 ಮತ್ತು 19ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಈ ಆದೇಶವನ್ನು ರದ್ದುಗೊಳಿಸಬೇಕು' ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.