ADVERTISEMENT

ಜೆಡಿಎಸ್‌ ಪ್ರಮುಖರ ಸಮಿತಿ ಪುನರ್‌ರಚನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 21:01 IST
Last Updated 16 ಅಕ್ಟೋಬರ್ 2025, 21:01 IST
ಜೆಡಿಎಸ್ ಚಿಹ್ನೆ
ಜೆಡಿಎಸ್ ಚಿಹ್ನೆ   

ಬೆಂಗಳೂರು: ‘ಪಕ್ಷ ಸಂಘಟನೆ ಮತ್ತು ಮುಂಬರುವ ವಿವಿಧ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಪಕ್ಷದ ಪ್ರಮುಖ ನಾಯಕರ ಸಮಿತಿಯನ್ನು ಪುನರ್‌ರಚನೆ ಮಾಡಲು ನಿರ್ಧರಿಸಲಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ತಿಳಿಸಿದರು.

ಜೆಡಿಎಸ್‌ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಗುರುವಾರ ಪಕ್ಷದ ಪ್ರಮುಖ ನಾಯಕರ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸುರೇಶ್‌ ಬಾಬು ಅವರು, ‘ಸಮಿತಿಯನ್ನು ಪುನರ್‌ರಚನೆ ಮಾಡುವ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ’ ಎಂದು ತಿಳಿಸಿದರು.

‘ವಿಧಾನ ಪರಿಷತ್ತಿನ ಹಲವು ಸ್ಥಾನಗಳಿಗೆ 2026ರಲ್ಲಿ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ತಂತ್ರ ರೂಪಿಸಲು ಉಸ್ತುವಾರಿ ಸಮಿತಿ ರಚಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಎಸ್‌.ಎಲ್‌.ಬೋಜೇಗೌಡ, ವಿವೇಕಾನಂದ, ಎಸ್‌.ಎನ್‌.ಮಂಜೇಗೌಡ, ಪಕ್ಷದ ಮುಖಂಡ ಎಚ್.ಎಸ್‌. ಶಿವಶಂಕರ್‌ ಸಮಿತಿಯಲ್ಲಿ ಇದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಜಿಬಿಎ ಚುನಾವಣೆಗೂ ಉಸ್ತುವಾರಿ ಸಮಿತಿ ರಚಿಸಿದ್ದು, ಪಕ್ಷದ ಮುಖಂಡ ಕುಪೇಂದ್ರ ರೆಡ್ಡಿ, ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಟಿ.ಜವರಾಯಿಗೌಡ ಅವರು ಸಮಿತಿಯಲ್ಲಿದ್ದಾರೆ’ ಎಂದು ತಿಳಿಸಿದರು.

ಬೆಳ್ಳಿಹಬ್ಬ: ‘ಜೆಡಿಎಸ್‌ ಸ್ಥಾಪನೆಯಾಗಿ ಇದೇ ನವೆಂಬರ್ 22ಕ್ಕೆ 25 ವರ್ಷಗಳಾಗಲಿದೆ. ಪಕ್ಷದ ಬೆಳ್ಳಿ ಹಬ್ಬವನ್ನು ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆಚರಣೆಯ ರೂಪುರೇಷೆಯನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ನವೆಂಬರ್ ಮೊದಲ ವಾರದಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.