ADVERTISEMENT

Karnataka Rains | ಮಳೆ: ನದಿ, ತೊರೆಗಳಿಗೆ ಜೀವಕಳೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 23:30 IST
Last Updated 29 ಮೇ 2025, 23:30 IST
<div class="paragraphs"><p>ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಧನುಷ್ಕೋಟಿ ಜಲಪಾತದಲ್ಲಿ ಕಾವೇರಿ ತುಂಬಿ ಹರಿಯುತ್ತಿದೆ</p></div>

ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಧನುಷ್ಕೋಟಿ ಜಲಪಾತದಲ್ಲಿ ಕಾವೇರಿ ತುಂಬಿ ಹರಿಯುತ್ತಿದೆ

   

ಚಿತ್ರ: ಹಂಪಾ ನಾಗರಾಜ

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಗುರುವಾರ ಬೆಳಿಗ್ಗೆ ಬಿರುಸಿನಿಂದ ಮಳೆಯಾಗಿದೆ. ಸೋಮವಾರಪೇಟೆಯಲ್ಲಿ ಸಂಜೆ ಭಾರಿ ಮಳೆ ಸುರಿಯಿತು. ಮಡಿಕೇರಿ ಭಾಗದಲ್ಲಿ ದಿನವಿಡೀ ಆಗಾಗ ಬಿರುಸಿನಿಂದ ಕೂಡಿತ್ತು.

ADVERTISEMENT

ಕಾವೇರಿ ನದಿ ಸೇರಿದಂತೆ ತೊರೆಗಳು, ಹಳ್ಳಕೊಳ್ಳಗಳಿಗೆ ಜೀವಕಳೆ ಬಂದಿದೆ. ಹಾರಂಗಿ ಜಲಾಶಯದ ಮಟ್ಟ ಗುರುವಾರ 2,843.19 ಅಡಿಗಳಿಗೆ ತಲುಪಿದೆ. ಒಳಹರಿವು 3,299 ಕ್ಯುಸೆಕ್‌ ಇತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಗ್ರಾಮದಲ್ಲಿ ಗುಡ್ಡ ಕುಸಿತ ಹಾಗೂ ತಡೆಗೋಡೆ ಕುಸಿತ ಸ್ಥಳಕ್ಕೆ ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು.

‘ಹಾಸನದಿಂದ- ಮಾರನಹಳ್ಳಿವರೆಗಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ವಿಳಂಬಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ’ ಎಂದರು.

‘ಈ ಕಾಮಗಾರಿಯ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ. ನಾವು ಕೇಂದ್ರದ ಗಮನಕ್ಕೆ ತರಬಹುದಷ್ಟೆ. ನಿರಂತರವಾಗಿ ಭೂಕುಸಿತಗಳು ಸಂಭವಿಸುತ್ತಿವೆ. ಕಾಮಗಾರಿಯನ್ನು ವೈಜ್ಞಾನಿಕ
ವಾಗಿ ನಡೆಸುವಂತೆ ಕೇಂದ್ರಕ್ಕೆ ತಿಳಿಸಿದ್ದೇವೆ. ಆದರೆ, ನಮ್ಮ ಸಲಹೆಗಳನ್ನು ಕಾರ್ಯಗತ ಮಾಡುತ್ತಿಲ್ಲ’ ಎಂದು ದೂರಿದರು.

ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ  ಸಂಜೆ ತುಂತುರು ಮಳೆ ಬಿದ್ದಿತು.

ಮೂಡುಬಿದಿರೆ (ದಕ್ಷಿಣಕನ್ನಡ):

ಇಲ್ಲಿಗೆ ಸಮೀಪದ ಪಡುಮಾರ್ನಾಡು ಗ್ರಾಮದ ಕೊಪ್ಪಳ ಎಂಬಲ್ಲಿ ಗಾಳಿ– ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಹಾಲು ಕೊಡುವ ಎರಡು ಹಸುಗಳು ಮೃತಪಟ್ಟಿವೆ.

ರಾಯಚೂರು: ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಕಾರಣ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೂ ಹರಿದು ಬರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ಯಾರೇಜ್‌ನ ಗೇಟ್‌ ತೆರೆದು ನೀರು ಹರಿಯ ಬಿಡಲಾಗಿದೆ.

ರಾಯಚೂರು ತಾಲ್ಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಾಲ್ಲೂಕು ಆಡಳಿತ ಎಚ್ಚರಿಕೆ ನೀಡಿದೆ.

ಬೀದರ್‌ ಜಿಲ್ಲೆಯ ಹುಮನಾಬಾದ್‌, ಚಿಟಗುಪ್ಪ, ಹುಲಸೂರಿನ ಗ್ರಾಮೀಣ ಭಾಗಗಳಲ್ಲಿಮಳೆಯಾಗಿದೆ. ಬೀದರ್‌, ಬಸವಕಲ್ಯಾಣದ ಗ್ರಾಮಾಂತರ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ವರ್ಷಧಾರೆಯಾಗಿದೆ. ಮಹಾರಾಷ್ಟ್ರದಿಂದ ಬುಧವಾರ ರಾತ್ರಿ ಮಾಂಜ್ರಾ ನದಿಗೆ ನೀರು ಹರಿಸಿದ್ದರಿಂದ ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿತು.

‌ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚುತ್ತಿದ್ದು, ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಗುರುವಾರ ಸಂಜೆಯಿಂದ ಹೊರಬಿಡಲಾಗುತ್ತಿದೆ. ‘ಮಹಾರಾಷ್ಟ್ರದ ಕೃಷ್ಣಾ ಜಲಾನಯನದಲ್ಲಿ ಸುರಿಯುತ್ತಿರುವ ಮಳೆ ಗಮನದಲ್ಲಿ ಇಟ್ಟುಕೊಂಡು ಹೊರಹರಿವನ್ನು ಆರಂಭಿಸಲಾಗಿದೆ.

ಕಡಲತೀರಕ್ಕೆ ಬಂದ ಬೋಯ್ಕಾ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯಾ ಗಿದೆ. ಗಾಳಿಯ ವೇಗವೂ ಹೆಚ್ಚಿರುವ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಕಾರವಾರದ ದೇವಗಡ ಲೈಟ್ ಹೌಸ್ ಬಳಿ ಹಡಗುಗಳಿಗೆ ಪಥ ತೋರಿಸಲು ಬಂದರು ಇಲಾಖೆ ಅಳವಡಿಸಿದ್ದ ಬೋಯ್ (ತೇಲುವ ಯಂತ್ರ) ಅಲೆಗಳ ಅಬ್ಬರಕ್ಕೆ ಟ್ಯಾಗೋರ್ ಕಡಲತೀರಕ್ಕೆ ಬಂದು ನಿಂತಿದೆ. ಉಳಿದಂತೆ, ಹೊನ್ನಾವರದ ಮುಗ್ವಾ ಬಳಿ ರಾಷ್ಟ್ರೀಯ ಹೆದ್ದಾರಿ–69ರ ಪಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಟ್ಕಳ, ಕುಮಟಾದಲ್ಲೂ ರಭಸದ ಮಳೆಯಾಗಿದೆ.

ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಬಂದು ನಿಂತಿರುವ ಬೋಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.