
ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ, ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ.ಜೋಶಿ ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ.
‘ಶ್ರೀನಾಥ್ ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಶೋಧದ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಅವರನ್ನು ವಿಚಾರಣೆಗೆ ಕರೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಶ್ರೀನಾಥ್ ಜೋಶಿ ಅವರು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ–1ರ ಎಸ್‌ಪಿಯಾಗಿದ್ದರು. ನಿಂಗಪ್ಪ ಪ್ರಕರಣ ದಾಖಲಾದ ಬೆನ್ನಲ್ಲೇ ಅವರನ್ನು ಲೋಕಾಯುಕ್ತ ಪೊಲೀಸ್ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ನಂತರ ಮಾತೃ ಇಲಾಖೆಯಲ್ಲಿ ಅವರು ವರದಿ ಮಾಡಿಕೊಂಡಿದ್ದು, ಇನ್ನಷ್ಟೇ ಅವರಿಗೆ ಹುದ್ದೆ ತೋರಿಸಬೇಕಿದೆ.
‘ಲೋಕಾಯುಕ್ತ ಪೊಲೀಸ್‌ನ ಬೆಂಗಳೂರು ನಗರ–1ರ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಡಿವೈಎಸ್‌ಪಿ ಮಟ್ಟದ ಅಧಿಕಾರಿ ನೇತೃತ್ವದ ತಂಡವು ಶ್ರೀನಾಥ್ ಅವರ ಮನೆಗೆ ಶೋಧಕ್ಕೆ ತೆರಳಿತ್ತು. ಕೋರಮಂಗಲದ ಪೊಲೀಸ್ ವಸತಿಗೃಹದಲ್ಲಿರುವ ಮನೆಗೆ ತನಿಖಾಧಿಕಾರಿಗಳು ತೆರಳಿದ್ದಾಗ ಶ್ರೀನಾಥ್ ಅವರು ಮನೆಯಲ್ಲಿ ಇರಲಿಲ್ಲ’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
‘ಶೋಧ ಕಾರ್ಯದ ವೇಳೆ ಚಿನ್ನಾಭರಣ, ಆಸ್ತಿ ಪತ್ರಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 19ರಂದು (ಗುರುವಾರ) ವಿಚಾರಣೆಗಾಗಿ ಲೋಕಾಯುಕ್ತ ಕಚೇರಿಗೆ ಬರುವಂತೆ ಸೂಚಿಸಿ, ಅವರ ಮನೆಯ ಗೋಡೆಗೆ ನೋಟಿಸ್ ಅಂಟಿಸಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ನಿಂಗಪ್ಪನ ಮೊಬೈಲ್ ಪರಿಶೀಲನೆ ವೇಳೆ, ಲೋಕಾಯುಕ್ತ ಪೊಲೀಸ್‌ನ ಹಿರಿಯ ಅಧಿಕಾರಿಗಳ ಫೋಟೊ ಅದರಲ್ಲಿರುವುದು ಪತ್ತೆಯಾಗಿದೆ. ಒಬ್ಬ ಅಧಿಕಾರಿಯನ್ನು ಆತ ಮನೆಗೆ ಕರೆಸಿದ್ದು, ಶಾಲು ಹೊದಿಸಿ ಸನ್ಮಾನಿಸಿರುವ ಚಿತ್ರವೂ ಇದೆ’ ಎಂದು ತಿಳಿಸಿವೆ.
‘ನಿಂಗಪ್ಪ ಜತೆಗೆ ರಾಜ್ಯ ಸರ್ಕಾರದ ಕೆಲ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.