
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಾಗೂ ಬಿಜೆಪಿ ವಿರುದ್ಧ ಲೋಕಸಭೆಯಲ್ಲಿ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಮತ ಕಳವು ಮಾಡುವ ಮೂಲಕ ಬಿಜೆಪಿ ಅತಿದೊಡ್ಡ ರಾಷ್ಟ್ರವಿರೋಧಿ ಕೃತ್ಯದಲ್ಲಿ ತೊಡಗಿದೆ‘ ಎಂದು ಆರೋಪಿಸಿದರು.
ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ‘ಭಾರತದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಚುನಾವಣಾ ಆಯೋಗವನ್ನು ಬಳಸುತ್ತಿದೆ‘ ಎಂದರು. ಆರ್ಎಸ್ಎಸ್ ವಿರುದ್ಧ ರಾಹುಲ್ ಟೀಕಾಪ್ರಹಾರ ನಡೆಸಿದ್ದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಹುಲ್ ಭಾಷಣಕ್ಕೆ ಅಡ್ಡಿಪಡಿಸಿ, ‘ಕಾಂಗ್ರೆಸ್ ಸಂಸದ ಎಲ್ಲರ ಸಮಯ ವ್ಯರ್ಥ ಮಾಡುತ್ತಿದ್ದಾರೆ ಮತ್ತು ಸಂಬಂಧವಿಲ್ಲದ ವಿಷಯಗಳನ್ನೆಲ್ಲ ಇಲ್ಲಿ ಪ್ರಸ್ತಾಪಿಸುತ್ತಿದ್ದಾರೆ‘ ಎಂದರು. ಚುನಾವಣಾ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಸ್ಪಷ್ಟಪಡಿಸಿದರು.
‘ನೀವು ಮಾಡಬಹುದಾದ ಅತ್ಯಂತ ದೊಡ್ಡ ರಾಷ್ಟ್ರವಿರೋಧಿ ಕೃತ್ಯವೆಂದರೆ ಮತ ಕಳವು. ಇದಕ್ಕಿಂತ ದೊಡ್ಡ ರಾಷ್ಟ್ರವಿರೋಧಿ ಕೃತ್ಯ ಇನ್ನೊಂದಿಲ್ಲ. ಏಕೆಂದರೆ, ನೀವು ಮತವನ್ನು ನಾಶಮಾಡಿದಾಗ, ನೀವು ಈ ದೇಶದ ರಚನೆಯನ್ನು ನಾಶಪಡಿಸುತ್ತೀರಿ. ನೀವು ಆಧುನಿಕ ಭಾರತವನ್ನು ನಾಶಮಾಡುತ್ತೀರಿ, ನೀವು ಭಾರತದ ಕಲ್ಪನೆಯನ್ನು ನಾಶಮಾಡುತ್ತೀರಿ‘ ಎಂದು ಅವರು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಯ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ತೆಗೆದು ಹಾಕಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ‘ಚುನಾವಣಾ ಆಯುಕ್ತರು ಯಾರಾಗುತ್ತಾರೆ ಎಂಬುದನ್ನು ನಿಖರವಾಗಿ ಆಯ್ಕೆ ಮಾಡಲು ಪ್ರಧಾನಿ ಮತ್ತು ಅಮಿತ್ ಶಾ ಏಕೆ ಉತ್ಸುಕರಾಗಿದ್ದಾರೆ? ಎಂದು ಕೇಳಿದರು.
‘ಭಾರತವು 1.4 ಶತಕೋಟಿ ಜನರಿಂದ ಮಾಡಲ್ಪಟ್ಟ ಬಟ್ಟೆಯಾಗಿದೆ. ಅವರು ಮತದಿಂದ ಒಟ್ಟಿಗೆ ನೇಯಲ್ಪಟ್ಟಿದ್ದಾರೆ‘ ಎಂದು ಒತ್ತಿ ಹೇಳಿದ ಅವರು, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಮಾನರು ಎಂಬ ಕಲ್ಪನೆಯು ನನ್ನ ಆರ್ಎಸ್ಎಸ್ ಸ್ನೇಹಿತರಿಗೆ ಸಹಿಸಲು ಆಗುತ್ತಿಲ್ಲ. ಅವರು ಶ್ರೇಣಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಮಾನರು ಎಂಬ ಕಲ್ಪನೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಮಹಾತ್ಮ ಗಾಂಧೀಜಿ ಅವರ ಹತ್ಯೆಯೊಂದಿಗೆ ಆರ್ಎಸ್ಎಸ್ನವರ ಯೋಜನೆ ಕೊನೆಗೊಂಡಿಲ್ಲ. ಯೋಜನೆಯ ಮುಂದಿನ ಹಂತವು ಭಾರತದ ಸಾಂಸ್ಥಿಕ ಚೌಕಟ್ಟನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಾಗಿತ್ತು. ವಿಶ್ವವಿದ್ಯಾಲಯಗಳು, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಅವರು ಮತಗಳನ್ನು ಕದಿಯುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಚುನಾವಣಾ ಆಯುಕ್ತರು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಶಿಕ್ಷೆ ಇಲ್ಲ ಎಂಬ ಕಾನೂನಿನ ಬದಲಾವಣೆಯನ್ನು ಉಲ್ಲೇಖಿಸಿದ ರಾಹುಲ್, ‘ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ಹೀಗೆ ಮಾಡಿಲ್ಲ. ಪ್ರಧಾನಿ ಮತ್ತು ಗೃಹ ಸಚಿವರು ಚುನಾವಣಾ ಆಯುಕ್ತರಿಗೆ ಈ ವಿನಾಯಿತಿಯ ಉಡುಗೊರೆಯನ್ನು ಏಕೆ ನೀಡುತ್ತಿದ್ದಾರೆ?‘ ಎಂದು ಪ್ರಶ್ನಿಸಿದರು.
ಯಾವುದೇ ಚುನಾವಣೆಯ ವೇಳಾಪಟ್ಟಿಯನ್ನು ಪ್ರಧಾನಮಂತ್ರಿಯವರ ಪ್ರಚಾರ ವೇಳಾಪಟ್ಟಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.