ADVERTISEMENT

ಪ್ರತ್ಯೇಕ ಜಾತಿಗಣತಿ ತಕ್ಷಣವೇ ನಿಲ್ಲಿಸಿ: ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ

ರಾಜ್ಯ ಸರ್ಕಾರಕ್ಕೆ ಸಾಮಾಜಿಕ ನ್ಯಾಯ ಜಾಗೃತ ವೇದಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:36 IST
Last Updated 22 ಜೂನ್ 2025, 16:36 IST
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ವಿಷ್ಣುಕಾಂತ ಚಟಪಳ್ಳಿ ಮಾತನಾಡಿದರು
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ವಿಷ್ಣುಕಾಂತ ಚಟಪಳ್ಳಿ ಮಾತನಾಡಿದರು   

ಬೆಂಗಳೂರು: ‘ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಜಾತಿ ಗಣತಿ ನಡೆಸುವುದನ್ನು ತಕ್ಷಣವೇ ಕೈಬಿಡಬೇಕು’ ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಒತ್ತಾಯಿಸಿದೆ.

ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ದುಂಡುಮೇಜಿನ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ವಿಷ್ಣುಕಾಂತ ಚಟಪಳ್ಳಿ, ‘ಜಾತಿಗಣತಿ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಈಗಾಗಲೇ 10 ವರ್ಷ ವ್ಯರ್ಥ ಮಾಡಿದೆ. ಮತ್ತೆ ಜಾತಿಗಣತಿ ನಡೆಸಲು ಜನರ ತೆರಿಗೆ ಹಣ ಮತ್ತು ಸಮಯ ವ್ಯರ್ಥಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದರು.

‘ಕೇಂದ್ರ ಸರ್ಕಾರವು ಜನಗಣತಿ ಜತೆಗೆ ಜಾತಿಗಣತಿ ನಡೆಸಲಿದೆ. ಜಾತಿ ಗಣತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಅಂಶಗಳ ಜತೆಗೆ ಸಾಂಸ್ಕೃತಿಕ ವಿವರಗಳನ್ನೂ ಕಲೆ ಹಾಕಲಿದೆ. ಇದಕ್ಕಾಗಿ ಕೇಂದ್ರವು ₹13,000 ಕೋಟಿ ವೆಚ್ಚಮಾಡಲಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರವು ನಡೆಸುವ ಜಾತಿಗಣತಿಯ ಮೂಲಕ ಸಂಗ್ರಹಿಸುವ ದತ್ತಾಂಶಗಳಿಗೆ ಮಾತ್ರವೇ ಸಂವಿಧಾನದ ಮಾನ್ಯತೆ ಇರಲಿದೆ. ಹೀಗಾಗಿ ಕೇಂದ್ರದ ಜಾತಿಗಣತಿಗೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಬೇಕು. ಕಾಂತರಾಜ ಆಯೋಗದ ವರದಿಯನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ಜಾತಿಗಣತಿ ನಡೆಸುವುದನ್ನು ನಿಲ್ಲಿಸದೇ ಇದ್ದರೆ, ಕಾನೂನು ಹೋರಾಟ ನಡೆಸಬೇಕು ಎಂದೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ವಿವಿಧ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳು, ಶಿಕ್ಷಕರು, ವಕೀಲರು, ಬಿಜೆಪಿ ಶಾಸಕ ವಿ.ಸುನಿಲ್‌ ಕುಮಾರ್‌, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆಯಲ್ಲಿ ಭಾಗಿಯಾಗಿದ್ದರು.

‘ಸಿಎಂಗೆ ಒತ್ತಡ ಹೇರಿದವರು ಯಾರು?

‘ಎಷ್ಟೇ ಒತ್ತಡ ಬಂದರೂ ಜಯಪ್ರಕಾಶ ಹೆಗ್ಡೆ ಅವರ ವರದಿಯನ್ನು ಸ್ವೀಕರಿಸುವುದೇ ಇರುವುದಿಲ್ಲ. ಆ ವರದಿಯ ಶಿಫಾರಸುಗಳನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ–ಪದೇ ಹೇಳುತ್ತಿದ್ದರು. ಆದರೆ ದೆಹಲಿಗೆ ಹೋಗಿ ವಾಪಸ್‌ ಬರುವ ವೇಳೆಗೆ ಅವರು ನಿಲುವು ಬದಲಿಸಿದ್ದು ಏಕೆ’ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ ಕುಮಾರ್ ಪ್ರಶ್ನಿಸಿದರು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಜಯಪ್ರಕಾಶ ಹೆಗ್ಡೆ ಅವರ ವರದಿಯನ್ನು ಕೈಬಿಡುವಂತೆ ತಮ್ಮ ಮೇಲೆ ಒತ್ತಡ ಹೇರಿದವರು ಯಾರು ಎಂಬುದನ್ನು ಸಿದ್ದರಾಮಯ್ಯ ಅವರು ಬಹಿರಂಗಪಡಿಸಬೇಕು. ಸರ್ಕಾರ ವರದಿಯನ್ನು ಸ್ವೀಕರಿಸುವುದು ಅಥವಾ ಜಾರಿ ಮಾಡುವುದು ಎರಡನೇ ವಿಚಾರ. ಮೊದಲಿಗೆ ಅದನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.