
ಇಸ್ರೇಲ್ ಸೇನೆಯು ಗಾಜಾಪಟ್ಟಿ ಮೇಲೆ ನಡೆಸಿದ ವಾಯುದಾಳಿ ಬಳಿಕ ಕಟ್ಟಡಗಳು ಉರುಳಿಬಿದ್ದ ದೃಶ್ಯ
ದೀರ್ ಅಲ್–ಬಲಾಹ್, ಗಾಜಾಪಟ್ಟಿ, ಜೆರುಸಲೇಂ: ಸೋಮವಾರ ರಾತ್ರಿಯಿಡೀ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆಯು ವಾಯುದಾಳಿ ಮುಂದುವರಿಸಿದೆ. ಮನೆ ಹಾಗೂ ನಿರಾಶ್ರಿತರ ನೆಲೆಯೂ ದಾಳಿಗೆ ಒಳಗಾಗಿದ್ದು, 60 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಯ ಹೊರತಾಗಿಯೂ, ಹಮಾಸ್ ವಿರುದ್ಧ ಯುದ್ಧವನ್ನು ತೀವ್ರಗೊಳಿಸಲು ಇಸ್ರೇಲ್ ಒತ್ತು ನೀಡಿದೆ. ಇತ್ತೀಚಿನ ದಿನಗಳಲ್ಲಿಯೇ ನಡೆಸಿದ ಅತೀ ದೊಡ್ಡ ಪ್ರಮಾಣದ ದಾಳಿಯಾಗಿದ್ದು, ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡಿಸಿ, ಹಮಾಸ್ ಬಂಡುಕೋರರನ್ನು ಸಂಪೂರ್ಣವಾಗಿ ನಾಶಗೊಳಿಸುವುದಾಗಿ ಪಣ ತೊಟ್ಟಿದೆ.
ಕಳೆದೊಂದು ವಾರದ ಸೇನಾ ಕಾರ್ಯಾಚರಣೆಯಲ್ಲಿ 300ಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.
ವಿರೋಧ ಪಕ್ಷಗಳಿಂದ ಟೀಕೆ: ಗಾಜಾಪಟ್ಟಿ ಮೇಲೆ ಇಸ್ರೇಲ್ ಕೈಗೆತ್ತಿಕೊಂಡಿರುವ ದಾಳಿಯನ್ನು ಅಲ್ಲಿನ ವಿರೋಧ ಪಕ್ಷದ ಮುಖಂಡರು ಟೀಕಿಸಿದ್ದಾರೆ.
‘ವಿವೇಕ ಹೊಂದಿದ ರಾಷ್ಟ್ರವು ನಾಗರಿಕರ ಮೇಲೆ ದಾಳಿ ನಡೆಸುವುದು, ಮಕ್ಕಳನ್ನು ಕೊಲ್ಲುವುದನ್ನೇ ಅಭ್ಯಾಸ ಮಾಡಿಕೊಳ್ಳುವುದಿಲ್ಲ’ ಎಂದು ನಿವೃತ್ತ ಜನರಲ್ ಹಾಗೂ ವಿರೋಧ ಪಕ್ಷವಾದ ಡೆಮಾಕ್ರಟ್ಸ್ ಪಕ್ಷದ ನಾಯಕ ಯಾಯಿರ್ ಗೋಲನ್ ಟೀಕಿಸಿದ್ದಾರೆ.
ಗಾಜಾದ ಮೇಲೆ ಇಸ್ರೇಲ್ ಯುದ್ಧ ಸಾರಿದ ಬೆನ್ನಲ್ಲೇ, ಅತ್ಯಂತ ಅಪರೂಪವೆಂಬಂತೆ ಟೀಕೆ ಕೇಳಿಬಂದಿದೆ. ದೇಶದ ನಾಗರಿಕರಿಂದಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಸ್ವಲ್ಪ ನೆರವು ನೀಡಲು ಒಪ್ಪಿಗೆ: ಕಳೆದ ಎರಡೂವರೆ ತಿಂಗಳ ನಂತರ, ಗಾಜಾಪಟ್ಟಿಗೆ ಅಗತ್ಯ ಔಷಧ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಆಹಾರ ಪೂರೈಸಲು ಇಸ್ರೇಲ್ ಸರ್ಕಾರವು ಅನುಮತಿ ನೀಡಿದೆ. ಯುದ್ಧಪೀಡಿತ ಈ ಜಾಗದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.
ಪ್ಯಾಲೆಸ್ಟೀನಿಯನ್ನರಿಗೆ ನೆರವು ನೀಡುತ್ತಿದ್ದ ವಿಶ್ವಸಂಸ್ಥೆ ಸೇರಿದಂತೆ ಹಲವು ಸ್ವಯಂಸೇವಾ ಸಂಸ್ಥೆಗಳಲ್ಲಿ ಸಂಗ್ರಹವಿದ್ದ ಆಹಾರಧಾನ್ಯವು ವಾರಗಳ ಹಿಂದೆಯೇ ಖಾಲಿಯಾಗಿತ್ತು.
‘ಸೋಮವಾರ ಆಹಾರ, ಔಷಧಗಳನ್ನು ಹೊತ್ತ ಐದು ಟ್ರಕ್‌ಗಳು ಗಾಜಾಪಟ್ಟಿ ಪ್ರವೇಶಿಸಿದವು. 100 ಟ್ರಕ್ ನೆರವು ತಲುಪಿಸಲು ಇಸ್ರೇಲ್‌ನಿಂದ ಅನುಮತಿ ಸಿಕ್ಕಿದೆ’ ಎಂದು ವಿಶ್ವಸಂಸ್ಥೆ ತಿಳಿಸಿದೆ. ಕದನವಿರಾಮದ ವೇಳೆ ನಿತ್ಯವೂ 600 ಟ್ರಕ್‌ನಷ್ಟು ಆಹಾರ ಸಾಮಗ್ರಿಗಳು ಈ ಪ್ರದೇಶಕ್ಕೆ ತಲುಪುತ್ತಿದ್ದವು.
ಗಾಜಾದಲ್ಲಿ ಮಕ್ಕಳು ಮಕ್ಕಳು ಸಂಕಷ್ಟಪಡುತ್ತಿರುವ ಸ್ಥಿತಿಯು ಅಸಹನೀಯವಾದುದು. ಇಸ್ರೇಲ್ ಕೂಡಲೇ ಕದನವಿರಾಮಕ್ಕೆ ಮುಂದಾಗಬೇಕುಕಿಯರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.