ADVERTISEMENT

ಚುರುಮುರಿ: ಸರ್ವಂ ಮಂತ್ರಮಯಂ!

ಸುಮಂಗಲಾ
Published 3 ನವೆಂಬರ್ 2025, 1:44 IST
Last Updated 3 ನವೆಂಬರ್ 2025, 1:44 IST
.
.   

‘ನಾ ಸಂಸ್ಕೃತ, ಪೂಜೆ ಮಂತ್ರ ಕಲೀತೀನಿ. ನನಗೆ ವೇದ ಪಾಠಶಾಲೆಗೆ ಸೇರಿಸು’ ಎಂದು ಬೆಕ್ಕಣ್ಣ ಹೇಳಿದಾಗ ನನಗೆ ಗಾಬರಿಯಾಯಿತು.

‘ಮನುಷ್ಯರಲ್ಲೇ ಎಲ್ಲಾ ಜಾತಿಯವರಿಗೆ ಮಂತ್ರ ಕಲಿಸಂಗಿಲ್ಲ. ಅಂತಾದ್ರಾಗೆ ನಿನ್ನ ಯಾವ ವೇದ ಪಾಠಶಾಲೆಯವರು ಸೇರಿಸಿಕೋತಾರೆ?’ ಎಂದು ರೇಗಿದೆ.

‘ಹಂಗಾರೆ ಯಾವುದಾದರೂ ಸರ್ಕಾರಿ ವೇದ ಪಾಠಶಾಲೆಗೆ ಸೇರಿಸು’ ಎಂದು ದುಂಬಾಲು ಬಿದ್ದಿತು.

‘ಇರೋ ಸರ್ಕಾರಿ ಶಾಲೆಗಳೇ ಮುಚ್ಚಿ ಹೋಗಾಕೆ ಹತ್ಯಾವು. ಇನ್ನು ಸರ್ಕಾರಿ ವೇದ ಪಾಠಶಾಲೆ ಎಲ್ಲಿ ಐತಲೇ? ಇಲ್ಲದ ಶಾಲೆಗೆ ಎಲ್ಲಿಂದ ಸೇರಿಸಲಿ’ ಎಂದೆ.

‘ನಾ ಏನೇ ಕಲೀತೀನಿ ಅಂದ್ರೂ ನೀ ಎಲ್ಲಾದಕ್ಕೆ ಅಡ್ಡಗಾಲು ಹಾಕತೀ. ನಾ ಆನ್‌ಲೈನಿನಾಗೆ ಕಲೀತೇನೇಳು’ ಎಂದು ಮೂತಿಯುಬ್ಬಿಸಿ, ಲ್ಯಾಪ್‌ಟಾಪಿನಲ್ಲಿ ಮುಖ ಹುದುಗಿಸಿತು.

‘ಅದ್ಸರಿ... ಈಗ ಸಂಸ್ಕೃತ, ಪೂಜೆ ಮಂತ್ರ ಕಲಿಯೂ ಹೊಸ ಉತಾವಳಿ ನಿನಗ ಎದಕ್ಕೆ?’ ಎಂದು ಕುತೂಹಲದಿಂದ ಕೇಳಿದೆ.

‘ಗೃಹಪ್ರವೇಶ, ದೇವರ ವ್ರತಗಳು ಮಾತ್ರವಲ್ಲ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಏನರೆ ಹೊಸ ಪ್ರಾಡೆಕ್ಟ್‌ ಮಾರುಕಟ್ಟೆಗೆ ಬಂದಾಗ, ಅದರ ಪೂಜೆಗೂ ಭಟ್ಟರನ್ನೇ ಕರೀತಾರ’ ಎಂದು ಪತ್ರಿಕೆಯ ಪುಟ ತೆರೆಯಿತು.

‘ಪೂಜೆಗೆ ಕೈತುಂಬ ರೊಕ್ಕನೂ ಕೊಡತಾರೆ. ಮತ್ತ ಎಲ್ಲಾ ಕ್ಯಾಶ್…‌ ಯಾರೂ ಉದ್ರಿ ಹೇಳಂಗಿಲ್ಲ!’ ಎನ್ನುತ್ತ ಭಾರತೀಯ ವಿಜ್ಞಾನ ಸಂಸ್ಥೆಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿಯೇ ತಯಾರಾಗಿ ಮೊದಲ ಸಲ ರಸ್ತೆಗಿಳಿದ  ಚಾಲಕರಹಿತ ಕಾರಿಗೆ ನಾಲ್ಕಾರು ಭಟ್ಟರು ಪೂಜೆ ಮಾಡುತ್ತಿರುವ ಫೋಟೊ ತೋರಿಸಿತು. ಕಾರಿನೊಳಗೂ ಒಂದಿಬ್ಬರು ಸ್ವಾಮಿಗಳಿದ್ದರು.

‘ಆಹಾ! ವಿಜ್ಞಾನದ ನವನವೀನ ಆವಿಷ್ಕಾರದಿಂದ ತಯಾರಾದ ಕಾರಿನ ಉದ್ಘಾಟನೆಗೂ ಮಂತ್ರ ಹೇಳಿ ಪೂಜೆ ಮಾಡತೀವಿ ಅಂದ್ರ ನಮ್ಮ ವೈಜ್ಞಾನಿಕ ಮನೋಭಾವನೆಗೆ ಭೋಪರಾಕ್‌ ಅನ್ನಬಕು’ ಎಂದೆ.

‘ಹಿಂಗೆ ಮಂತ್ರಘೋಷದೊಂದಿಗೆ ಉದ್ಘಾಟನೆ ಮಾಡೂದು ನಮ್ಮ ವೇದಕಾಲದಿಂದ ನಡೆದು ಬಂದ ಸಂಸ್ಕೃತಿ, ತಿಳಕೋ!’ ಎಂದು ಬೆಕ್ಕಣ್ಣ ಮೀಸೆ ತಿರುವುತ್ತ ಗುರುಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.