ADVERTISEMENT

‘ಕಳಂಕ’ ನಿವಾರಣೆ ಆಗುವುದೆಂದು?

ಎಚ್ಐವಿ ವಿರುದ್ಧದ ಹೋರಾಟವನ್ನು ಒಂದು ವೈದ್ಯಕೀಯ ಕಾರ್ಯಕ್ರಮವಾಗಿ ಮಾತ್ರ ಪರಿಗಣಿಸಿದರೆ ಅದು ಯಶಸ್ವಿಯಾಗದು

ಡಾ.ಲೀಲಾ ಸಂಪಿಗೆ
Published 6 ಡಿಸೆಂಬರ್ 2018, 20:15 IST
Last Updated 6 ಡಿಸೆಂಬರ್ 2018, 20:15 IST
   

ಎಚ್ಐವಿ ಸೋಂಕಿತ ‘ಶಂಕಿತ’ ಮಹಿಳೆ ಕೆರೆಗೆ ಬಿದ್ದು ಸತ್ತಿದ್ದಾಳೆ ಎಂದು ಇಡೀ ಕೆರೆಯ ನೀರನ್ನು ಖಾಲಿ ಮಾಡಿರುವ ಸುದ್ದಿ ಕೇಳಿ ಆಘಾತವಾಯಿತು. ಧಾರವಾಡ ಜಿಲ್ಲೆ, ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿ 36 ಎಕರೆಯ ಬೃಹತ್ ಕೆರೆಯ ನೀರು ಪೋಲಾಗಿರುವುದು ಅಕ್ಷಮ್ಯ. ಮೊನ್ನೆ ಮೊನ್ನೆ ‘ವಿಶ್ವ ಏಡ್ಸ್ ದಿನ’ವನ್ನು ಆಚರಿಸಲಾಗಿದೆ. ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಪ್ರಮುಖ ಉದ್ದೇಶ. ಸೋಂಕಿನ ಪ್ರಮಾಣ ಕಡಿಮೆ ಮಾಡುವಲ್ಲಿ, ಕಳಂಕ-ತಾರತಮ್ಯ ನಿವಾರಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿರುವಾಗಲೇ ಈ ಪ್ರಸಂಗ ಬೆಚ್ಚಿಬೀಳಿಸಿದೆ.

‘ಸತ್ತ ಮಹಿಳೆಯ ವೈರಸ್ ನೀರಲ್ಲಿ ಬೆರೆತು ನಮಗೂ ಸೋಂಕು ಬರಬಹುದು ಎಂಬ ಭಯದಿಂದ ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದೇವೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ. ಎಚ್ಐವಿ ವೈರಸ್ ಮನುಷ್ಯ ದೇಹದ ಜೀವಂತ ದ್ರವದಲ್ಲಿ ಮಾತ್ರ ಬದುಕಿರುತ್ತದೆ. ದೇಹದಿಂದ ಹೊರಬಂದ ವೈರಸ್‌ಗಳು ಕೆಲವೇ ಸೆಕೆಂಡ್‌ಗಳಲ್ಲಿ ಸಾಯುತ್ತವೆ. ಆದ್ದರಿಂದ ಸತ್ತ ಮಹಿಳೆಯು ಸೋಂಕಿತಳೇ‌ ಆಗಿದ್ದಲ್ಲಿಯೂ ಕೆರೆಯ ನೀರಿನ ಮೂಲಕ ಜನರಿಗೆ ಸೋಂಕು ಹರಡಲು ಸಾಧ್ಯವೇ ಇಲ್ಲ.

ಇಂತಹ ಅನೇಕ ಘಟನೆಗಳು ಹಿಂದೆ ವರದಿಯಾಗಿವೆ. ಅಂತಹ ಪ್ರಸಂಗಗಳು ಮತ್ತು ನೋವು, ನರಳಾಟಗಳನ್ನು ದಾಟಿಕೊಂಡೇ ಜನಜಾಗೃತಿ ಮೂಡಿಸುವ ಪ್ರಯತ್ನಗಳು ಸಾಗಿವೆ. ಅಲ್ಲದೇ ಈಗ ಪರಿಸ್ಥಿತಿ ಬದಲಾಗಿದೆ, ಕಾನೂನಿನ ರಕ್ಷಣೆಯಿದೆ, ಸೋಂಕಿತರ ಬದುಕಿನ ಅವಧಿ ಸಹಜವಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಧಾರವಾಡದ ಈ ಘಟನೆ ಇಡೀಜಾಗೃತಿ ಆಂದೋಲನದ ಪ್ರಯತ್ನಕ್ಕೊಂದು ಷಾಕ್ ನೀಡಿದೆ. ಎಚ್ಐವಿ ಸೋಂಕಿನ ಬಗ್ಗೆ ಜನರಲ್ಲಿ ಇನ್ನೂಮನೆಮಾಡಿರುವ ಮೌಢ್ಯದ ಬಗ್ಗೆ ಆತಂಕವಾಗುತ್ತಿದೆ. ಈ ಕುರಿತು ಸರ್ಕಾರ ಮತ್ತು ಸಮಾಜ ಪುನರಾವಲೋಕನ ಮಾಡಿಕೊಳ್ಳುವ ಅಗತ್ಯ ಕಂಡುಬರುತ್ತಿದೆ.

ADVERTISEMENT

ಎಚ್‌ಐವಿ/ಏಡ್ಸ್‌ ಏಕೆ ಇಷ್ಟೊಂದು ಕಳಂಕ– ತಾರತಮ್ಯಗಳನ್ನು ಎದುರಿಸುತ್ತಿದೆ?! ಈ ಸೋಂಕು ಕುರಿತು ಬಹಳ ಮುಖ್ಯವಾದ ಅಂಶ ಒಂದಿದೆ. ಇದು ಶೇಕಡ 86ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ರಕ್ತ ಪಡೆಯುವುದರಿಂದ, ಸೋಂಕಿತ ವ್ಯಕ್ತಿಯೊಂದಿಗೆ ಸೂಜಿ–ಸಿರಂಜು ಹಂಚಿಕೊಂಡಾಗ, ಸೋಂಕಿತ ತಾಯಿಯಿಂದ ಮಗುವಿಗೆ ಹರಡುವ ಸಾಧ್ಯತೆಗಳು ಎಲ್ಲವೂ ಸೇರಿ ಶೇಕಡ 14ರಷ್ಟು. ಇವಲ್ಲದೇ ಸೋಂಕು ಇನ್ನಾವ ಕಾರಣದಿಂದಲೂ ಹರಡಲು ಸಾಧ್ಯವಿಲ್ಲ ಎನ್ನುವುದು ವೈದ್ಯಕೀಯವಾಗಿ ಸಾಬೀತಾಗಿದೆ.

ಈ ಕಾರಣದಿಂದಾಗಿಯೇ ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಕಳಂಕ– ತಾರತಮ್ಯ ನಿರೀಕ್ಷೆಗೂ ನಿಲುಕದ್ದಾಗಿದೆ. ಲೈಂಗಿಕತೆಯ ಬಗ್ಗೆ ಮುಕ್ತ ವಾತಾವರಣವಿಲ್ಲ. ಅತ್ಯಂತ ಬಿಗಿಯಾದ ನೈತಿಕ ಮೌಲ್ಯಗಳನ್ನು ಹೇರುವ ಈ ಸಮಾಜದಲ್ಲಿ, ಪ್ರೌಢಾವಸ್ಥೆ ತಲುಪಿದ ಮಕ್ಕಳಿಗೆ ವೈಜ್ಞಾನಿಕವಾದ ಲೈಂಗಿಕ ಶಿಕ್ಷಣವನ್ನು ನೀಡುವ ವ್ಯವಸ್ಥೆ ಇಲ್ಲ. ಬದಲಾಗಿ ಇಂದ್ರಿಯ ನಿಗ್ರಹದಂತಹ ಮೌಲ್ಯ, ಆದರ್ಶಗಳನ್ನು ಹೇರಲಾಗುತ್ತಿದೆ. ಇದರಿಂದಾಗಿ ಸೋಂಕು ನಿಯಂತ್ರಣವೂ ಕಗ್ಗಂಟಾಗಿದೆ.

ನಮ್ಮ ದೇಶದಲ್ಲಿ 21 ಲಕ್ಷ ಸೋಂಕಿತರಿದ್ದಾರೆ. ಪ್ರಪಂಚದಲ್ಲಿ ಹೆಚ್ಚು ಸೋಂಕಿತರಿರುವ ಮೂರನೇ ಅತಿದೊಡ್ಡ ದೇಶ ಭಾರತ. ಕರ್ನಾಟಕದಲ್ಲಿ 2.47 ಲಕ್ಷ ಸೋಂಕಿತರಿದ್ದಾರೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಸೋಂಕಿತರು ಹೆಚ್ಚಿಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ. 2030ರ ಒಳಗೆ 'ಏಡ್ಸ್‌ಮುಕ್ತ ಭಾರತ' ನಿರ್ಮಿಸಲು ನ್ಯಾಕೋ ಪಣತೊಟ್ಟಿದೆ. ಈ ಸೋಂಕನ್ನು ನಿಯಂತ್ರಿಸಲು ಸರ್ಕಾರ ಬದ್ಧವಾಗಿರಬೇಕು.

ಆರೋಗ್ಯ ಯಾವತ್ತೂ ಭಾರತ ಸರ್ಕಾರದ ಆದ್ಯತೆಯಾಗಿಲ್ಲ. ಆರೋಗ್ಯಕ್ಕೆ ಮೀಸಲಿಡುವ ಅನುದಾನ ಕೇವಲ ಶೇ 1.3ರಷ್ಟು. ಆದ್ದರಿಂದಲೇ ಎಚ್ಐವಿ ವಿರುದ್ಧದ ಹೋರಾಟವನ್ನು ಒಂದು ವೈದ್ಯಕೀಯ ಕಾರ್ಯಕ್ರಮವಾಗಿ ಮಾತ್ರ ಪರಿಗಣಿಸಿದರೆ ಅದು ಯಶಸ್ವಿಯಾಗಲು ಸಾಧ್ಯವಿಲ್ಲ. ಇದೊಂದು ಸಾಮಾಜಿಕ ಆಂದೋಲನವಾಗಬೇಕು. ಇದಕ್ಕೆ ಸರ್ಕಾರದ ಬದ್ಧತೆ, ರಾಜಕೀಯ ಇಚ್ಛಾಶಕ್ತಿ, ಸಮುದಾಯದ ಪಾಲ್ಗೊಳ್ಳುವಿಕೆ, ಮಾಧ್ಯಮಗಳ ಪಾತ್ರ ಅತ್ಯಗತ್ಯ. ಮಡಿವಂತಿಕೆಯನ್ನು ಮೀರಿ ಪ್ರತಿಯೊಬ್ಬರೂ ತಮ್ಮ ಎಚ್ಐವಿ ಸ್ಟೇಟಸ್ ಅನ್ನು ತಿಳಿದು ಮುಂಜಾಗ್ರತೆ ವಹಿಸಬೇಕಿದೆ. ಇವುಗಳ ಮೂಲಕ ರೂಪಿತವಾದ ಒಂದು ಬಲಿಷ್ಠ ಸಾಮಾಜಿಕ ಲಸಿಕೆ ಮಾತ್ರ ಈ ಸೋಂಕನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸು ಕಾಣಬಹುದು.

ಎಚ್‌ಐವಿ/ ಏಡ್ಸ್ (ನಿಯಂತ್ರಣ) ಕಾಯ್ದೆಯ ಪ್ರಕಾರ, ಸೋಂಕಿತರ ಮಾಹಿತಿಯನ್ನು ಪ್ರಕಟಿಸುವುದಾಗಲೀ, ಅವರನ್ನು ತಾರತಮ್ಯದಿಂದ ಕಾಣುವುದಾಗಲೀ ಮಾಡುವಂತಿಲ್ಲ. ತಾರತಮ್ಯ ಎಸಗಿದವರನ್ನು ಶಿಕ್ಷೆಗೆ ಒಳಪಡಿಸಬಹುದಾಗಿದೆ. ಆದರೆ ದಂಡ ಪ್ರಯೋಗ ಒಂದರಿಂದಲೇ ಈ ಸಮಸ್ಯೆಗೆ ಪರಿಹಾರ ಸಿಗಲಾರದು. ಇದಕ್ಕಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.