ADVERTISEMENT

‘ನಮ್ಮ ಕುಟುಂಬದ ಎಲ್ಲರೂ ದೈವಭಕ್ತರು’

ವೈ.ಗ.ಜಗದೀಶ್‌
Published 15 ಡಿಸೆಂಬರ್ 2018, 6:30 IST
Last Updated 15 ಡಿಸೆಂಬರ್ 2018, 6:30 IST
   

ನಿಮ್ಮ ಪತಿ ಮುಖ್ಯಮಂತ್ರಿ. ಏನನ್ನಿಸುತ್ತೆ?

ಮುಖ್ಯಮಂತ್ರಿಯಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಖುಷಿಯಾಗಿದೆ. ಮಾತನಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಅನಿಸಿದ್ದಿದೆ.

ಹಿಂದೆ ಶಾಸಕಿಯಾಗಿದ್ದಾಗ ವಿರೋಧ ಪಕ್ಷದಲ್ಲಿದ್ದಿರಿ. ಈಗ ಹೆಚ್ಚಿನ ಗೌರವ ಸಿಗುತ್ತಿದೆಯೇ?

ADVERTISEMENT

ಆಗಲೂ ಗೌರವ ಸಿಗುತ್ತಾ ಇತ್ತು. ಈಗಲೂ ಇದೆ. ವ್ಯತ್ಯಾಸ ಏನೂ ಇಲ್ಲ.

ನಿಮಗೆ ವಿಶೇಷ ಭದ್ರತೆ ಕೊಟ್ಟಿದ್ದಾರೆ. ಬೇಕಿತ್ತಾ?

ನನಗೆ ಯಾರೂ ಶತ್ರುಗಳಿಲ್ಲ. ಯಾವತ್ತೂ ಭದ್ರತೆ ಪಡೆದು ಓಡಾಡಿದ್ದಿಲ್ಲ. ಬೆಂಗಳೂರಿನಲ್ಲಿ ಭದ್ರತೆ ಬೇಡ ಎಂದಿದ್ದೆ. ಬೆಳಗಾವಿಯಲ್ಲಿ ಭದ್ರತೆ ಕೊಟ್ಟಿದ್ದಾರೆ. ಪೊಲೀಸರನ್ನು ಜತೆಗೆ ಇಟ್ಟುಕೊಂಡು ಓಡಾಡುವುದು ಮುಜುಗರ, ಕಿರಿಕಿರಿ.

ಕುಮಾರಸ್ವಾಮಿ ಅವರಿಗೆ ಈಗ ಭಕ್ತಿ ಜಾಸ್ತಿ ಆಗಿದೆ ಅಂತ ಟೀಕೆ ಇದೆಯಲ್ಲ?

ನನಗೆ ಮೊದಲಿನಿಂದಲೂ ಭಕ್ತಿ ಜಾಸ್ತಿ ಇದೆ. ಮಾವನವರಿಗೂ ಇದೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ದೇವಸ್ಥಾನಕ್ಕೆ ಹೋಗುವುದು ನಮ್ಮ ಕುಟುಂಬದಲ್ಲಿ ಮೊದಲಿನಿಂದಲೂ ಇದೆ. ಮುಖ್ಯಮಂತ್ರಿಯಾಗಿ ಅವರು ಹೋಗುತ್ತಿರುವುದರಿಂದ ಅದಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತಿದೆ ಅಷ್ಟೆ.

ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲವಂತೆ ಹೌದಾ?

ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಸುಳ್ಳು. ಇಲ್ಲದೇ ಇದ್ದರೆ 15–16ಗಂಟೆ ನಿರಂತರವಾಗಿ ಕೆಲಸ ಮಾಡಲು ಸಾಧ್ಯವೇ? ವಾಕಿಂಗ್, ಯೋಗದಲ್ಲಿ ತೊಡಗಿಕೊಳ್ಳುತ್ತಾರೆ. ಆರೋಗ್ಯ ಹಿಂದೆಂದಿಗಿಂತಲೂ ಉತ್ತಮವಾಗಿದೆ.

ಕುಟುಂಬದವರ ಜತೆ ಇರಲು ಮುಖ್ಯಮಂತ್ರಿ ಸಮಯ ಕೊಡುತ್ತಾರಾ?

ರಜಾ ಅವಧಿಯಲ್ಲಿ ಕುಟುಂಬದವರ ಜತೆಗೆ ಹೊರಗೆ ಹೋಗುವುದು ಇದ್ದೇ ಇದೆ. ಬೆಂಗಳೂರಿನಲ್ಲಿದ್ದಾಗ ರಾತ್ರಿ ಮನೆಯಲ್ಲೇ ಉಳಿದುಕೊಳ್ಳುತ್ತಾರೆ. ಬೆಳಿಗ್ಗೆ ಯೋಗಾಭ್ಯಾಸ, ವಾಕಿಂಗ್‌ ಮುಗಿಸಿಯೇ ಮನೆಯಿಂದ ಹೊರಡುತ್ತಾರೆ. ಇವೆಲ್ಲಕ್ಕೆ ಹಿಂದಿಗಿಂತ ಹೆಚ್ಚು ಸಮಯ ನೀಡುತ್ತಿದ್ದಾರೆ.

ನಿಖಿಲ್‌–ಪ್ರಜ್ವಲ್‌ ಮಧ್ಯೆ ಪೈಪೋಟಿ ಇದೆಯಂತೆ?

ನಿಖಿಲ್ ಸಿನಿಮಾ ಮಾಡ್ತಾ ಇದ್ದಾನೆ. ಅವನಿಗೆ ಈಗ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಹಣೆ ಬರಹ ಇದ್ದರೆ ರಾಜಕಾರಣಕ್ಕೆ ಬರುತ್ತಾನೆ. ಇಬ್ಬರ ಮಧ್ಯೆ ಪೈಪೋಟಿಯೂ ಇಲ್ಲ, ಎಂತದೂ ಇಲ್ಲ. ಇಬ್ಬರೂ ನಮ್ಮ ಮನೆ ಮಕ್ಕಳು. ಇಬ್ಬರ ಏಳಿಗೆಯೂ ಕುಟುಂಬದ ಹೊಣೆ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.