
ನುಡಿ ಬೆಳಗು
ಒಬ್ಬ ಅನುಭಾವಿ ಇರುತ್ತಾನೆ. ಅವನು ದೇವರ ಮುಂದೆ ಕೈಮುಗಿದು ಕೇಳುತ್ತಾನೆ. ‘ನನಗೆ ಕಷ್ಟ ಕೊಡು, ಸುಖ ಕೊಡು, ಶ್ರೀಮಂತಿಕೆ ಕೊಡು, ಬಡತನ ಕೊಡು ಏನಾದರೂ ಕೊಡು. ಆದರೆ ನನ್ನ ಬೇಡಿಕೆ ಎರಡೇ. ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ. ಇವಿಷ್ಟೇ ನನ್ನ ಬೇಡಿಕೆ ಎನ್ನುತ್ತಾನೆ. ನೋವಿರದ ಬದುಕು ಬೇಕು. ನೋವಿರದ ಸಾವು ಇರಬೇಕು. ನಾವು ದೇವರ ಮುಂದೆ ಬರೀ ಕೇಳುವುದಷ್ಟೇ ಆಗಿದೆ. ನಮ್ಮ ಹೃದಯ ಭಿಕ್ಷಾ ಪಾತ್ರೆ ಆಗಿದೆ.
ಚಾತಕ ಪಕ್ಷಿ ಅಂತ ಒಂದು ಐತಿ. ಅದು ಕೆರೆ, ಬಾವಿ, ನದಿ ನೀರು ಕುಡಿಯೋದಿಲ್ಲ. ಅದು ನೇರವಾಗಿ ಮಳೆಯ ನೀರನ್ನೇ ಕುಡಿಯುತ್ತದೆ. ಆಕಾಶದಲ್ಲಿ ಮೋಡ ಕಟ್ಟಿತು ಅಂದರೆ ಅದು ಇಲ್ಲಿ ಬಾಯಿ ತೆರೆದುಕೊಂಡು ಕುಳಿತುಬಿಡುತ್ತದೆ. ಅದಕ್ಕೆ ಒಬ್ಬ ಕವಿ ಚಾತಕ ಪಕ್ಷಿಗೆ, ‘ಏ ಚಾತಕ ಪಕ್ಷಿಯೇ ಎಲ್ಲರ ಬಳಿಯೂ ಕೇಳಬೇಡ. ಅವರು ಕೊಡುತ್ತಾರೆ ಎಂದು ಏನು ಗ್ಯಾರಂಟಿ? ಅಲ್ಲದೆ ನಿನ್ನನ್ನು ಅಪಹಾಸ್ಯ ಮಾಡುತ್ತಾರೆ. ಆಕಾಶದಲ್ಲಿ ಇರುವ ಮೋಡಗಳೆಲ್ಲಾ ಒಂದೇ ರೀತಿಯಲ್ಲಿ ಇಲ್ಲ. ಎಲ್ಲ ಮೋಡಗಳೂ ಮಳೆ ಸುರಿಸುವುದಿಲ್ಲ. ಕೆಲವು ಮೋಡಗಳು ಸುಮ್ಮನೆ ಶಬ್ದ ಮಾಡುತ್ತವೆ. ಇನ್ನು ಕೆಲವು ಮೋಡಗಳು ಮಳೆ ಸುರಿಸಿ ಭೂಮಿಯನ್ನು ಸಂತೃಪ್ತಿಗೊಳಿಸಿ ಹೋಗುತ್ತವೆ’ ಎನ್ನುತ್ತಾನೆ. ಹಾಗೆಯೇ ಮನುಷ್ಯರಲ್ಲಿಯೂ ಎರಡು ತರಹ ಇದ್ದಾರೆ. ಕೆಲವರು ಬರೀ ಶಬ್ದ ಮಾಡುತ್ತಾರೆ. ಕೆಲವರು ನಿಜವಾಗಿ ಸಹಾಯ ಮಾಡುತ್ತಾರೆ. ಕಂಡವರ ಮುಂದೆ ಬೇಡುವುದನ್ನು ಮಾಡಬೇಡ. ದುಡಿಯುವ ಶಕ್ತಿಯನ್ನು ಕೇಳಬೇಕು. ಮನುಷ್ಯ ಬರಿ ಕೇಳುವುದರಲ್ಲಿ ನಿರತನಾಗಿದ್ದಾನೆಯೇ ವಿನಾ ಕೊಡುವ ಭಾವ ಅವನಲ್ಲಿ ಬಂದಿಲ್ಲ. ಇನ್ನೊಬ್ಬರ ಮುಂದೆ ಕೈಯೊಡ್ಡಿ ನಿಲ್ಲುವ ಹಾಗೆ ಮಾಡಬೇಡ. ಮತ್ತೆ ನೀನು ಏನು ಕೊಟ್ಟಿದ್ದೀಯಲ್ಲ. ಅದನ್ನು ದಾನ ಮಾಡುವ ಬುದ್ಧಿ ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವುದು ಅಷ್ಟೆ.
ದಾನ ಎಂದರೆ ಏನು? ಯಾವುದು ದಾನ ಅನ್ನಿಸಿಕೊಳ್ಳುತ್ತದೆ. ದಾನ ನೀಡುವುದು ನೀತಿಯುತವಾಗಿ ಗಳಿಸಿದ್ದು ಆಗಿರಬೇಕು. ಅನೀತಿಯಿಂದ ಬಂದಿದ್ದು ಆಗಬಾರದು. ಕೊಡುವುದು ಸತ್ಪಾತ್ರರಿಗೆ ಕೊಡಬೇಕು. ಕೊಡುವುದನ್ನು ಅನುರಾಗದಿಂದ ಕೊಡಬೇಕು. ಅದೇ ದಾನ. ಅನ್ಯಾಯದಿಂದ ಬಂದ ಹಣವನ್ನು ಯಾಕೆ ದಾನ ಮಾಡಬಾರದು? ಯಾಕೆಂದರೆ, ದಾನ ಕೊಟ್ಟರೆ ಆ ಹಣವನ್ನು ನಮ್ಮ ಬಂಧು ಬಳಗ, ಸ್ನೇಹಿತರು ಎಲ್ಲರೂ ಅನುಭವಿಸುತ್ತಾರೆ. ಆದರೆ ಅನ್ಯಾಯದಿಂದ ಬಂದ ಪಾಪವನ್ನು ಮಾತ್ರ ನಾವೇ ಅನುಭವಿಸಬೇಕು. ಅನ್ಯಾಯದಿಂದ ಬಂದ ಹಣದಿಂದ ದೇವರಿಗೆ ಹೋಳಿಗೆ ನೈವೇದ್ಯ ಮಾಡಿದರೂ ದೇವರಿಗೆ ಪ್ರೀತಿಯಾಗುವುದಿಲ್ಲ. ನಾವು ಕಷ್ಟಪಟ್ಟು ದುಡಿದಿದ್ದರಲ್ಲಿ ಒಂದು ಹುಲ್ಲು ಕಡ್ಡಿ ಇಟ್ಟರೂ ದೇವರಿಗೆ ತೃಪ್ತಿಯಾಗುತ್ತದೆ. ಆದರೆ ಮನುಷ್ಯನಿಗೆ ಬೇಗಬೇಗನೆ ಶ್ರೀಮಂತನಾಗಬೇಕು ಎಂಬ ಬಯಕೆ ಇದೆ. ನೀತಿಯಿಂದ ಬಂದ ಹಣವೇ ನಿಜವಾದ ಹಣ. ದಾರಿಯಲ್ಲಿ ಪುಕ್ಕಟೆಯಾಗಿ ಸಿಕ್ಕ ನೂರು ರೂಪಾಯಿಗಿಂತ ಕಷ್ಟಪಟ್ಟು ದುಡಿದ ಒಂದು ರೂಪಾಯಿ ದೊಡ್ಡದು ಎನ್ನುವುದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು. ನೀತಿ ಬಿಟ್ಟಿರಬಾರದು. ನಾವು ಗಳಿಸಿದ್ದನ್ನು ಸತ್ಪಾತ್ರರಿಗೆ ಕೊಡಬೇಕು. ನಾವು ಕೊಟ್ಟಿದ್ದನ್ನು ಕನಸಿನಲ್ಲಿಯೂ ಕೆಟ್ಟದ್ದಕ್ಕೆ ಬಳಸಬಾರದು ಅಂತಹವರು ಸತ್ಪಾತ್ರರು. ಶಿವಕುಮಾರ ಸ್ವಾಮಿಗಳ ಜೋಳಿಗೆ ಬಡಮಕ್ಕಳ ಪಾಲಿಗೆ ಹೋಳಿಗೆಯಾಗಿತ್ತು. ಅದು ನಿಜವಾದ ಸತ್ಪಾತ್ರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.