ADVERTISEMENT

ನುಡಿ ಬೆಳಗು - 52 | ಪುಣ್ಯ ಚಲಾವಣೆಯ ನಾಣ್ಯ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 24 ಅಕ್ಟೋಬರ್ 2024, 23:47 IST
Last Updated 24 ಅಕ್ಟೋಬರ್ 2024, 23:47 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಈಗ ನೀವು ಅಮೆರಿಕಕ್ಕೆ ಹೋಗ್ತೀರಿ. ಅಲ್ಲಿ ನಮ್ಮ ರೂಪಾಯಿ ನಡೆಯಲ್ಲ. ಡಾಲರ್ ಬಳಸಬೇಕು. ಇಂಗ್ಲೆಂಡ್‌ಗೆ ಹೋದರೆ ಪೌಂಡ್, ಯುರೋಪಿಗೆ ಹೋದರೆ ಯುರೊ, ಅರಬ್ ದೇಶಕ್ಕೆ ಹೋದರೆ ದಿರ್‌ಹಂ ಬೇಕು. ನೀವು ಸತ್ತು ಮೇಲಕ್ಕೆ ಹೋದರೆ ಅಲ್ಲಿ ಇದ್ಯಾವುದೂ ನಡೆಯೋದಿಲ್ಲ. ನೀವು ಗಳಿಸಿದ ಪುಣ್ಯ (ಒಳ್ಳೆಯ ಕೆಲಸಗಳು) ಮಾತ್ರ ನಡೀತದ. ಅಲ್ಲಿ ಅದೇ ನಾಣ್ಯ. ‌

‘ಪುಣ್ಯ, ಪುಣ್ಯ ಅಂತೀರಲ್ಲ, ಅದೇನ್ ಕಾಣ್ತದೇನು? ತೋರ್ಸಿ ನೋಡೋಣ’ ಅಂತ ನೀವು ಕೇಳಬಹುದು. ಈಗ ನೋಡಿ ಕಂಪ್ಯೂಟರ್‌ನಲ್ಲಿ ಡೇಟಾ ಇಟ್ಟುಕೊಳ್ಳುತ್ತಾರೆ. ಈ ಡೇಟಾ ಬಹಳ ಆತು ಅಂದರೆ ಅಥವಾ ಯಾರೂ ಹ್ಯಾಕ್ ಮಾಡಬಾರದು, ವೈರಸ್ ಬಂದು ಹಾಳಾಗಬಾರದು ಅಂತ ಡೇಟಾಗಳನ್ನು ಕ್ಲೌಡ್‌ನಲ್ಲಿ ಇಡುತ್ತಾರೆ. ಅದಕ್ಕೊಂದು ಪಾಸ್ ವರ್ಡ್ ಇರತೈತಿ. ಅದೇ ರೀತಿ, ಪುಣ್ಯ ಅಂದರ ಕ್ಲೌಡ್ ಕಂಪ್ಯೂಟಿಂಗ್ ತರಹ. ವಿಶೇಷ ಏನೆಂದರೆ ಇಲ್ಲಿ ಪಾಸ್ ವರ್ಡ್ ನಿಮ್ಮ ಹತ್ತಿರ ಇರಲ್ಲ. ಅದು ದೇವರ ಬಳಿ ಇರತೈತಿ. ನೀವು ಲೋಡ್ ಗಟ್ಟಲೆ ಬೆಳೆ ಬೆಳೀಬಹುದು. ಆದರೆ ಎಷ್ಟು ತಗಂಡು ಹೋಗ್ತೀರಿ? ನಿಮ್ಮದೇ ವಾಹನ ಇತ್ತು ಅಂದರ 10 ಚೀಲ ತೆಗೆದುಕೊಂಡು ಹೋಗಬಹುದು. ಕೊರಿಯರ್‌ಗೆ ಹಾಕ್ತೀನಿ ಅಂದರೆ ಒಂದು ಕ್ವಿಂಟಲ್ ಒಯ್ಯಬಹುದು. ನಿಮ್ಮದೇ ಕಾರಿದ್ದರೆ ಅರ್ಧ ಕ್ವಿಂಟಲ್ ತೆಗೆದುಕೊಂಡು ಹೋಗಬಹುದು. ವಿಮಾನದಲ್ಲಾದರೆ 20–25 ಕೆ.ಜಿ ಅಷ್ಟೆ. ವಿಮಾನಕ್ಕಿಂತಲೂ ಮ್ಯಾಲೆ ಹೋಗ್ತೀನಿ ಅಂದರೆ ಖಾಲಿ ಕೈಲೇ ಹೋಗಬೇಕು. ಏನೂ ಒಯ್ಯಂಗಿಲ್ಲ. ಸಂಗ್ರಹದಿಂದ ಜೀವನ ಅಲ್ಲ. ಒಳ್ಳೆಯ ಕೆಲಸಗಳಿಂದ ಜೀವನ.

ADVERTISEMENT

ಒಂದು ದಂಪತಿ ಇದ್ದರು. ಯಜಮಾನ ಬಹಳ ಕಂಜೂಸ್. ಒಂದಿನ ‘ನನಗೆ ಕರಿಗಡುಬು ತುಪ್ಪ ಉಣಬೇಕು ಅಂತ ಆಸೆ ಆಗೈತಿ’ ಎಂದು ಹೆಂಡತಿಗೆ ಹೇಳಿದ. ಹೆಂಡತಿ ಮಾಡಿ ಬಡಿಸಿದಳು. ತಾಟಿನಲ್ಲಿ ಕರಿಗಡುಬು ತುಪ್ಪ ಹಾಕಿಕೊಂಡು ಇನ್ನೇನು ತಿನ್ನಬೇಕು ಅನ್ನುವಾಗ ಬೀಗರು ಬಂದರು. ‘ಕೆಲಸ ಕೆಟ್ಟಿತು. ಮೊದಲು ಇದನ್ನು ತೆಗಿ, ಅಡುಗೆ ಮನೆಯಲ್ಲಿ ಮುಚ್ಚಿಟ್ಟು ಬಾ’ ಎಂದ. ಹೆಂಡತಿ ಹಾಗೇ ಮಾಡಿದಳು. ‘ಬಂದವ ಹಾಂಗೇ ಹೋಗಲ್ಲ. ಕುಂದ್ರತಾನ. ಅದಕ್ಕೆ ನಾನು ಸತ್ತಂಗೆ ಮಾಡ್ತೀನಿ. ನೀನು ಅತ್ತಂಗೆ ಮಾಡು’ ಎಂದ. ಹೆಂಡತಿ ಹಾಗೇ ಮಾಡಿದಳು. ಬೀಗ ಒಳಕ್ಕೆ ಬಂದು ‘ಏನಾತು’ ಎಂದು ಕೇಳಿದ. ಅದಕ್ಕೆ ಹೆಂಡತಿ ‘ಯಾಕೋ ಗೊತ್ತಿಲ್ಲ. ಬೆಳಿಗ್ಗೆ ಚೆನ್ನಾಗಿದ್ದರು. ಈಗ ಹೋಗಿಬಿಟ್ಟರು’ ಎಂದಳು. ‘ಯಾರೂ ಇಲ್ಲಿ ಕಾಯಂ ಇರಾಕ ಬಂದಿಲ್ಲ, ಸಮಾಧಾನ ಮಾಡಿಕೊ’ ಎಂದು ಹೇಳಿ ಹೊರಟ.

5 ನಿಮಿಷದ ನಂತರ ಎದ್ದು ಕುಳಿತ ಗಂಡ ಕರಿಗಡುಬು ತಗಂಬ ಅಂದ. ಆಕಿ ತಂದಳು. ತಟ್ಟೆ ಕೈ ಹಾಕಿ ‘ನಾನೇನು ಸತ್ತಿಲ್ಲ, ಹ್ಯಾಗೆ ಸತ್ತಂಗ್ ಮಾಡಿದೆ ನೋಡು’ ಅಂದ. ಅದಕ್ಕೆ ಹೆಂಡತಿ ‘ನಾನೇನು ಅತ್ತಿಲ್ಲ. ಹ್ಯಾಗ್ ಅತ್ತಂಗ್ ಮಾಡಿದೆ ನೋಡು’ ಅಂದಳು. ಆಗ ಬೀಗ ಬಂದು ‘ನಾನು ಹೋಗಿಲ್ಲ. ಹ್ಯಾಂಗ್ ಹೋದಾಂಗ್ ಮಾಡಿದೆ ನೋಡು’ ಅಂತ ಹೇಳಿ ಎಲ್ಲರಿಗಿಂತ ಮೊದಲು ಕರಿಗಡುಬು ತಿಂದ. ಒಂದಿಷ್ಟು ಕೊಟ್ಟು ತಿಂದಿದ್ದರೆ ಪುಣ್ಯ ಬರತಿತ್ತು. ನಾವು ಪುಣ್ಯದ ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.