ವಾಚಕರ ವಾಣಿ
ವೈಚಾರಿಕತೆ ಮರೆತರೆ ಕೇಡು ಕಟ್ಟಿಟ್ಟ ಬುತ್ತಿ
ಕುವೆಂಪು ಅವರು 1974ರ ಡಿ. 8ರಂದು ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಡಿದ ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣಕ್ಕೆ 51 ವರ್ಷಗಳು ಸಂದಿವೆ. ಆಗ ಕುವೆಂಪು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ. ‘ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ನಾಡಿನ ರಾಜಕೀಯ, ಸಾಮಾಜಿಕ, ಮತ, ಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು’ ಎಂಬ ಅವರ ಮಾತನ್ನು ನಾವಿಂದು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ.
ಕುವೆಂಪು ಅವರ ಕಾಲಘಟ್ಟ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಅಥವಾ ಹೊಂದಿಕೊಳ್ಳುತ್ತಿದ್ದ ಸಮಯ. ಇಂದು ಆಧುನಿಕತೆ ನಮ್ಮೆಲ್ಲರನ್ನು ಆವರಿಸಿಕೊಂಡಿದೆ. ಆದರೆ, ವೈಚಾರಿಕತೆ ಬಿಟ್ಟು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಲ್ಲಿ ನಾವು ಜೀವಿಸುತ್ತಿದ್ದೇವೆಯೇ ಹೊರತು, ಮೌಢ್ಯದ ಹಾದಿಯಿಂದ ಹೊರಗೆ ಬರಲು ಆಗುತ್ತಿಲ್ಲ. ತಂತ್ರಜ್ಞಾನವನ್ನೂ ಸಾಂಪ್ರದಾಯಿಕ ಕಟ್ಟಡಗಳಿಗೆ ಜೋಡಿಸುತ್ತಿದ್ದೇವೆ ಎಂಬುದು ಈ ಕಾಲದ ವಿಪರ್ಯಾಸ.
⇒ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ
ಅನ್ನದಾತರ ನೆಮ್ಮದಿಗೆ ಗ್ಯಾರಂಟಿ ಬೇಡವೆ?
ರೈತರಿಗೆ ತಲಪದ ಪೂರ್ಣ ಪರಿಹಾರ ವರದಿ (ಪ್ರ.ವಾ., ಡಿ. 8) ಓದಿ ಮನಸ್ಸಿಗೆ ನೋವಾಯಿತು. ಮಳೆಯ ಅಭಾವದಿಂದ ಬೆಳೆನಾಶವಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರೊಂದಿಗೆ ಚೆಲ್ಲಾಟವಾಡುತ್ತಿರುವುದು ದುರದೃಷ್ಟಕರ. ಎಲ್ಲವನ್ನೂ ರೈತರು ಹೋರಾಟ, ಓಡಾಟದಿಂದಲೇ ಪಡೆದುಕೊಳ್ಳಬೇಕಿರುವುದು ನೋವಿನ ಸಂಗತಿ. ಅನ್ನ ನೀಡುವವರಿಗೆ ಸ್ಪಂದಿಸದಿದ್ದರೆ ರೈತನ ಮುಖದಲ್ಲಿ ಮಂದಹಾಸ ಹೇಗೆ ಮೂಡೀತು! ರೈತ ಬೆಳೆಯದಿದ್ದರೆ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆಯೇ ಗತಿಯಾದೀತು? ಪ್ರಕೃತಿಯ ಜತೆಗೆ ರೈತರ ಜೂಜಾಟ ಒಂದೆಡೆಯಾದರೆ; ಮತ್ತೊಂದೆಡೆ ಸರ್ಕಾರ ಹಾಗೂ ಅಧಿಕಾರಿಗಳು ಜೂಟಾಟ ನಡೆಸುತ್ತಿರುವುದು ಬೇಸರದ ಸಂಗತಿ.
⇒ಕುಂದೂರು ಮಂಜಪ್ಪ, ಹೊಳೆಸಿರಿಗೆರೆ
ಸಿಂಗಪುರದ ಅಭಿವೃದ್ಧಿ ಮಾದರಿಯಾಗಲಿ
ಸಿಂಗಪುರದ ಅಭಿವೃದ್ಧಿ ಬಗ್ಗೆ ಆಗಾಗ್ಗೆ ಜನಪ್ರತಿನಿಧಿಗಳು ಮಾತನಾಡುತ್ತಾರೆ. ಅಲ್ಲಿಗೆ ಕುಟುಂಬ ಸಮೇತ ಪ್ರವಾಸಕ್ಕೂ ಹೋಗುತ್ತಾರೆ. ಅಲ್ಲಿನ ಆಡಳಿತ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಮಾತ್ರ ಹಿಂಜರಿಕೆ ತೋರುತ್ತಾರೆ. ಸಿಂಗಪುರದಲ್ಲಿ ಕಾರುಗಳನ್ನು ಕೊಳ್ಳಲು ಸರ್ಕಾರದ ಅನುಮತಿ ಕಡ್ಡಾಯ. ಅಲ್ಲಿ ಮೆಟ್ರೊ ರೈಲು, ಬಸ್ ಸಂಚಾರ ಜನಪ್ರಿಯವಾಗಿದೆ. ಜನರ ಶಿಕ್ಷಣ, ಆರೋಗ್ಯ ಸೇವೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆ ದೇಶ ಭ್ರಷ್ಟಾಚಾರ ಮುಕ್ತವಾಗಿದೆ. ಅಂತಹ ಮಾದರಿ ನಮಗೆ ಬೇಡವೆ?
⇒ಎ.ವಿ. ಶಾಮರಾವ್, ಬೆಂಗಳೂರು
ರಾಜಕಾರಣದಲ್ಲಿ ಧರ್ಮಕಾರಣ ಅಪ್ರಸ್ತುತ
ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳನ್ನು
ತೆಗೆದುಹಾಕುವಂತೆ ಬಿಜೆಪಿಯ ರಾಜ್ಯಸಭಾ ಸಂಸದ ಭೀಮ್ ಸಿಂಗ್, ಖಾಸಗಿ ಮಸೂದೆ ಮಂಡಿಸಿದ್ದಾರೆ. ದೇಶದಲ್ಲಿ ಹಿಂದೂ ಧರ್ಮೀಯರ ಜೊತೆ, ಮುಸ್ಲಿಂ,
ಸಿಖ್, ಜೈನ ಮತ್ತು ಬೌದ್ಧರು ಜೀವಿಸುತ್ತಿದ್ದಾರೆ. ಸಂವಿಧಾನ ಎಲ್ಲರಿಗೂ ರಕ್ಷಣೆ
ಕೊಟ್ಟಿದೆ. ಜಾತ್ಯತೀತ ಶಬ್ದ ತೆಗೆದು ಹಿಂದೂರಾಷ್ಟ್ರ ಮಾಡಿ, ಉಳಿದವರನ್ನು ಎಲ್ಲಿಗೆ ಕಳುಹಿಸುವ ಉದ್ದೇಶವಿದೆ; ‘ಸಮಾಜವಾದ’ ಪದ ತೆಗೆದು ಕೆಲವರನ್ನೇ
ಶ್ರೀಮಂತರನ್ನಾಗಿಸುವ ಇಚ್ಛೆ ಇದೆಯೇ? ಜಾತಿ, ಧರ್ಮ, ದೇವರನ್ನೇ ಬಳಸಿ ಕೊಂಡು ಆಡಳಿತ ಮಾಡುವುದರಿಂದ ಅಭಿವೃದ್ಧಿ ಸಾಧ್ಯವೆ? ಅಭಿವೃದ್ಧಿ ಹೊಂದಿದ ಯಾವುದೇ ರಾಷ್ಟ್ರ ಜಾತಿ, ಧರ್ಮ, ದೇವರ ಆಧಾರದಲ್ಲಿ ಬೆಳೆದಿದೆಯೇ? ಈ ಬಗ್ಗೆ ಅಧ್ಯಯನ ಮಾಡಿ ಸತ್ಯಾಂಶ ತಿಳಿಸುವ ಪ್ರಯತ್ನವನ್ನಾದರೂ ಮಾಡಲಿ.
⇒ತಾ.ಸಿ. ತಿಮ್ಮಯ್ಯ, ಬೆಂಗಳೂರು
ವಿರೋಧ ಪಕ್ಷಗಳ ಹೀಗಳಿಕೆ ಸರಿಯಲ್ಲ
ವಿರೋಧ ಪಕ್ಷವು ಪ್ರಜಾಪ್ರಭುತ್ವದ ಕಾವಲುನಾಯಿ. ಸರ್ಕಾರದ ಜನವಿರೋಧಿ ನೀತಿಗಳನ್ನು ಜನರ ಮುಂದಿಡುವುದು ಅದರ ಜವಾಬ್ದಾರಿ. ಆದರೆ, ವಿರೋಧ ಪಕ್ಷವನ್ನು ವಿರೋಧಿಸುವ ಪ್ರವೃತ್ತಿಯು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಸೈದ್ಧಾಂತಿಕ ಸೆಳೆತಕ್ಕೆ ಸಿಲುಕಿದ ಸಮೂಹವು ಆಡಳಿತ ಪಕ್ಷದ ಅಷ್ಟೂ ನಡೆ–ನಿಯಮ, ಕ್ರಮಗಳನ್ನು ಗಟ್ಟಿಯಾಗಿ ಸಮರ್ಥಿಸಲು ಮುಂದಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಉಚಿತ ವಕ್ತಾರಿಕೆ ಮಾಡುತ್ತಾ ಸರ್ಕಾರ ಪರ ತಮಟೆ ಬಾರಿಸುತ್ತದೆ. ರಾಜ್ಯ ಅಥವಾ ಕೇಂದ್ರದಲ್ಲಿರುವ ವಿರೋಧ ಪಕ್ಷ ಹಾಗೂ ಅದರ ನಾಯಕರನ್ನು ಗೇಲಿ ಮಾಡುವುದು, ಅವರ ಜವಾಬ್ದಾರಿಯನ್ನು ಹತ್ತಿಕ್ಕುವುದು ಜನತಂತ್ರಕ್ಕೆ ಮಾಡುವ ಅಪಮಾನ. ಇಂಥ ನಡವಳಿಕೆ ಸರ್ವಾಧಿಕಾರದ ಆಡಳಿತಕ್ಕೂ ಎಡೆಮಾಡಿಕೊಡುವಂತಹದ್ದು.
⇒ಕೆ.ಎಸ್. ಗಿರಿರಾಜು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.