ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ದೆಹಲಿಯ ಶಾಹದರಾದಲ್ಲಿ ಆಹ್ವಾನವಿಲ್ಲದೆ ಮದುವೆ ಮನೆಗೆ ಊಟಕ್ಕೆಂದು ಹೋಗಿದ್ದ ಯುವಕ ಗುಂಡೇಟಿನಿಂದ ಸಾವಿಗೀಡಾಗಿರುವ ಸುದ್ದಿ ಓದಿ ಮನಸ್ಸಿಗೆ ನೋವಾಯಿತು. ಯಃಕಶ್ಚಿತ್ ಒಂದು ಹೊತ್ತಿನ ಊಟಕ್ಕಿಂತಲೂ ಮನುಷ್ಯನ ಪ್ರಾಣದ ಬೆಲೆ ಅಗ್ಗವಾಗಿ ಹೋಯಿತೆ? ದೇಶದಲ್ಲಿ ಸಭೆ–ಸಮಾರಂಭಗಳಲ್ಲಿ ಸಾವಿರಾರು ಟನ್ ಆಹಾರ ಪ್ರತಿ ದಿನ ಕಸದ ಬುಟ್ಟಿ ಸೇರುತ್ತದೆ. ಮೃತ ಯುವಕನಿಗೆ ಹಸಿವು ನೀಗಿಸಿಕೊಳ್ಳಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆಯುವ ಬದಲು, ಬರ್ಬರವಾಗಿ ಕೊಂದಿರುವುದು ಪಾಶವೀಕೃತ್ಯ. ಹಸಿದವರ ಬಗ್ಗೆ ಸಹಾನುಭೂತಿ, ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದರ ಸೂಚನೆ ಇದಾಗಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 123 ದೇಶಗಳ ಪಟ್ಟಿಯಲ್ಲಿ 102ನೇ ಸ್ಥಾನದಲ್ಲಿದೆ. ಈ ಘಟನೆಯು ಹಸಿವು ಸೂಚ್ಯಂಕದಲ್ಲಿ ದೇಶದ ಸಾಧನೆಯನ್ನು ಪುಷ್ಟೀಕರಿಸಿದಂತಲ್ಲವೇ?
⇒ಶಾಂತಕುಮಾರ್, ಸರ್ಜಾಪುರ
ರಾಜ್ಯ ಸರ್ಕಾರದ ‘ಕೂಸಿನ ಮನೆ’ ಯೋಜನೆಗೆ ನರೇಗಾದಡಿ ಗೌರವಧನ ಪಾವತಿಗೆ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಆಕ್ಷೇಪಿಸಿರುವುದು ವಿಷಾದನೀಯ. ಕೂಸಿನ ಮನೆ ಕಾರ್ಯಕ್ರಮವನ್ನು ಕೇವಲ ಆರ್ಥಿಕ ಹೊರೆಯ ದೃಷ್ಟಿಯಿಂದ ನೋಡಬಾರದು. ಮಕ್ಕಳ ಪೌಷ್ಟಿಕಾಂಶ, ಲಾಲನೆ–ಪಾಲನೆ ಹಾಗೂ ಮಹಿಳಾ ಸಬಲೀಕರಣದ ದೃಷ್ಟಿಯಲ್ಲಿ ಪರಿಗಣಿಸಬೇಕು. ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕೆಂಬ ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಪ್ರಮುಖ ಕಾರಣವೇ ಮಕ್ಕಳ ಆರೈಕೆ. ಇಂತಹ ಕ್ಷುಲ್ಲಕ ಸಮಸ್ಯೆಗಳು ದುಡಿಯುವ ಮಹಿಳೆಯರ ಉತ್ಸಾಹವನ್ನು ಕುಂದಿಸಬಾರದು ಎಂಬುದೇ ಕೂಸಿನ ಮನೆಯ ಹಿಂದಿರುವ ಕಳಕಳಿ. ಇದನ್ನು ಪೋಷಿಸಬೇಕಾಗಿರು ವುದು ಕೇಂದ್ರದ ಆದ್ಯ ಕರ್ತವ್ಯ.
⇒ನಾಗರಾಜ್ ಗರಗ್, ಹೊಸದುರ್ಗ
ಪ್ರೀತಿ, ಪ್ರೇಮದ ಉನ್ಮಾದಕ್ಕೆ ಸಿಲುಕಿದ ಯುವಕರ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ಮರುಳು ಮಾತಿಗೆ ಸಿಲುಕಿ ಹೆಣ್ಣುಮಕ್ಕಳ ಭವಿಷ್ಯ ದುರಂತ ಅಂತ್ಯ ಕಾಣುತ್ತಿದೆ. ಒಂದಲ್ಲಾ ಒಂದು ರೀತಿಯ ಲೈಂಗಿಕ ಕಿರುಕುಳಕ್ಕೆ ಸಿಕ್ಕಿ ನೋವು ಅನುಭವಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ನಿಯಮಿತವಾಗಿ ಇಂಥ ಪ್ರಕರಣಗಳು ವರದಿಯಾಗುತ್ತಿದ್ದರೂ, ಹೆಣ್ಣುಮಕ್ಕಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಈ ಬಗ್ಗೆ ಅರಿವು ಮೂಡಿಸಲು ಮುಂದಾಗದಿರುವುದು ದುರದೃಷ್ಟಕರ.
⇒ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು
ಮೆಕಾಲೆ ಶಿಕ್ಷಣ ನೀತಿಯು ಗುಲಾಮಗಿರಿಯಿಂದ ಕೂಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಹಾಸ್ಯಾಸ್ಪದ. ದೇಶದ ಬಹುಸಂಖ್ಯಾತ ಜನರಿಗೆ ಶಿಕ್ಷಣವೇ ಗೊತ್ತಿಲ್ಲದ ಕಾಲದಲ್ಲಿ, ದೇಶವನ್ನು ಆಳುತ್ತಿದ್ದ ಅಂದಿನ ಇಂಗ್ಲೆಂಡ್ ಸರ್ಕಾರದ ಸಂಸದರಾಗಿದ್ದ ಥಾಮಸ್ ಬಾಬಿಂಗ್ಟನ್ ಮೆಕಾಲೆಯವರು ಭಾರತಕ್ಕೆ ಬಂದು 1835ರಲ್ಲಿ ಇಂಗ್ಲಿಷ್ ಹಾಗೂ ಸ್ಥಳೀಯ ಪ್ರಾಂತೀಯ ಭಾಷೆಯ ಶಾಲೆಗಳನ್ನು ತೆರೆದರು; ಬಡವ ಬಲ್ಲಿದ ಎನ್ನದೇ ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ನೀಡಿದರು. ಮೆಕಾಲೆ ಶಿಕ್ಷಣ ನೀತಿಯು ವೈಜ್ಞಾನಿಕ ತಳಹದಿಯಿಂದ ಕೂಡಿದೆ.
ಮೆಕಾಲೆ ಶಿಕ್ಷಣ ಕ್ರಮ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಚಿಕಿತ್ಸಕ ಮನೋಭಾವ ಬೆಳೆಸುವಂತಿದೆ. ಹಾಗಾಗಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಭಾರತೀಯರು ಉನ್ನತ ಶಿಕ್ಷಣ ಪಡೆದು ಬ್ರಿಟಿಷರೊಂದಿಗೆ ವ್ಯವಹರಿಸಲು, ದೇಶ–ವಿದೇಶದಲ್ಲಿ ಉದ್ಯೋಗವಂತರಾಗಲು ಶಕ್ತವಾಯಿತು. ಯಾರನ್ನೋ ಮೆಚ್ಚಿಸಲು ಸತ್ಯ ಮರೆಮಾಚಿ ಮಾತನಾಡುವುದು ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ.
⇒ಎಸ್.ಎಂ. ನೆರಬೆಂಚಿ, ಮುದ್ದೇಬಿಹಾಳ
ಗ್ರಾಮೀಣ ಮತ್ತು ನಗರ ಪ್ರದೇಶದ ಕಂದಾಯ ಭೂಮಿಯಲ್ಲಿ ಹಲವು ಮಂದಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಆದೇಶದನ್ವಯ ಕಟ್ಟಡದ ಸ್ವಾಧೀನಾನುಭವ ಪತ್ರ (ಒಸಿ) ಇಲ್ಲದಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಈ ಸಮಸ್ಯೆ ಬಗೆಹರಿಸುವುದಾಗಿ ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಪರಿಹಾರ ಇನ್ನೂ ಸಿಕ್ಕಿಲ್ಲ. ವಿದ್ಯುತ್‌ಗೆ ಪರ್ಯಾಯವಾಗಿ ಮನೆಯ ತಾರಸಿ ಮೇಲೆ ಸೌರಫಲಕ ಅಳವಡಿಕೊಳ್ಳಬಹುದು. ಆದರೆ, ಇದಕ್ಕೂ ಕಾಯಂ ವಿದ್ಯುತ್ ಸಂಪರ್ಕದ ಮೀಟರ್ ಇರಬೇಕು. ಇದರಿಂದ ಮನೆ ನಿರ್ಮಿಸಿ ಕೊಂಡವರು ತೊಂದರೆಗೆ ಸಿಲುಕಿದ್ದಾರೆ. ಸೌರಫಲಕ ಅಳವಡಿಸಿಕೊಳ್ಳಲು ಇಂಧನ ಇಲಾಖೆಯು ಅನುಮತಿ ನೀಡಿದರೆ ಅನುಕೂಲವಾಗಲಿದೆ.
⇒ಮಲ್ಲಿಕಾರ್ಜುನ, ಸುರಧೇನುಪುರ
ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ವಾರದ ಎಲ್ಲಾ ದಿನಗಳಲ್ಲೂ ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಸಂಚಾರ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ವಾಹನಗಳ ಪರಿಸ್ಥಿತಿಯಂತೂ ಹೇಳತೀರದು. ಎಷ್ಟೋ ಜೀವಗಳು ಆಸ್ಪತ್ರೆ ಸೇರುವಷ್ಟರಲ್ಲೇ ಇಹಲೋಕ ತ್ಯಜಿಸುತ್ತವೆ. ಹಾಗಾಗಿ, ಮೆಟ್ರೊ ರೈಲುಗಳಲ್ಲಿ ‘ಮೆಟ್ರೊ ಆ್ಯಂಬುಲೆನ್ಸ್ ಎಂಬ ಪ್ರತ್ಯೇಕ ಬೋಗಿ ಪರಿಚಯಿಸಿ ಅಮೂಲ್ಯ ಜೀವವನ್ನು ಉಳಿಸಬಹುದಲ್ಲವೇ?
ವಿ.ಎಸ್. ಕುಮಾರ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.