ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಗುರುವಾರ, 13 ನವೆಂಬರ್ 2025

ವಾಚಕರ ವಾಣಿ
Published 12 ನವೆಂಬರ್ 2025, 19:30 IST
Last Updated 12 ನವೆಂಬರ್ 2025, 19:30 IST
   

ಹುದ್ದೆಯೇ ಇಲ್ಲದಿರುವಾಗ ‘ಟಿಇಟಿ’ ಏಕೆ?

ಪ್ರತಿ ವರ್ಷದಂತೆ ಈ ಬಾರಿಯೂ 1ರಿಂದ 5ನೇ ತರಗತಿಯ ಪ್ರಾಥಮಿಕ‌ ಶಾಲಾ‌ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೇಪರ್–1ಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. 2014ರಲ್ಲಿ ಮೊದಲ‌ ಬಾರಿಗೆ ಟಿಇಟಿ ಪರೀಕ್ಷೆ ನಡೆಯಿತು. ಪ್ರಸ್ತುತ ರಾಜ್ಯದಲ್ಲಿ 1ರಿಂದ 5ನೇ ತರಗತಿಯ ಶಿಕ್ಷಕರ ನೇಮಕಾತಿಗೆ ಹುದ್ದೆಗಳೇ ಖಾಲಿ‌ ಇಲ್ಲ. ಆದರೆ, ಪ್ರತಿ ಬಾರಿಯೂ ಟಿಇಟಿ ಘೋಷಣೆ ಆಗುತ್ತಿದೆ. ಹುದ್ದೆಗಳೇ ಇಲ್ಲದಿರುವಾಗ ಅಭ್ಯರ್ಥಿಗಳು ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಪ್ರಯೋಜನ ಏನು?

– ಸುರೇಂದ್ರ ಪೈ, ಭಟ್ಕಳ

ADVERTISEMENT

______________________

ಆದಿವಾಸಿಗಳ ಅಭ್ಯುದಯಕ್ಕೆ ಒತ್ತು ನೀಡಿ

ಆದಿವಾಸಿಗಳ ಬದುಕು ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಆದರೆ, ಅವರ ಜೀವನಮಟ್ಟ ಶೋಚನೀಯ ಸ್ಥಿತಿಯಲ್ಲಿದೆ. ಶಿಕ್ಷಣ, ಆರೋಗ್ಯ ಅವರ ಪಾಲಿಗೆ ಮರೀಚಿಕೆಯಾಗಿದೆ. ಆದಿವಾಸಿಗಳ ಅಭ್ಯುದಯಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ, ಸಮರ್ಪಕವಾಗಿ ಸೌಲಭ್ಯ ತಲುಪುತ್ತಿಲ್ಲ. ಆದಿವಾಸಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೂ ಮೀಸಲಾತಿ ಸೌಲಭ್ಯ ದಕ್ಕಿಲ್ಲ. ಹಾಗಾಗಿ, ಒಳಮೀಸಲಾತಿ ಕಲ್ಪಿಸಬೇಕಿದೆ. ಈ ಸಮುದಾಯಕ್ಕೆ ಮೊದಲು ಶಿಕ್ಷಣ ನೀಡುವ ಕೆಲಸವಾಗಬೇಕು. ಮಹಿಳೆಯರಿಗೆ ಸ್ವಾವಲಂಬನೆಯ ತರಬೇತಿ ನೀಡಬೇಕು. ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಯುವಕರ ಜೀವನಮಟ್ಟದ ಸುಧಾರಣೆಗೆ ಸರ್ಕಾರ ಒತ್ತು ನೀಡಬೇಕಿದೆ. 

– ವಿನಾಯಕ ಡಿ.ಎಲ್‌., ಚಿತ್ರದುರ್ಗ

______________________

ರಕ್ತದೋಕುಳಿ

ದಿಲ್ಲಿಯ ಜನತೆ

ತತ್ತರಿಸುತ್ತಿದ್ದರು

ಕೊರೆವ ಚಳಿಗೆ

ವಿಷ ಗಾಳಿಗೆ:

ಈಗ ನಿದ್ದೆಯಲ್ಲೂ

ಬೆಚ್ಚಿಬೀಳುವಂತಾಗಿದೆ

ಸ್ಫೋಟದ ಬಲಿಗೆ

ರಕ್ತದೋಕುಳಿಗೆ!

– ಆರ್. ನಾಗರಾಜ್, ಗೊರೂರು

______________________

ಮನುಷ್ಯಜೀವಿ ತಲೆಕೆಟ್ಟಿರುವ ಭಸ್ಮಾಸುರ

‘ಜೀವಜಗತ್ತಿನಲ್ಲಿ ಮನುಷ್ಯನಷ್ಟು ಪೆದ್ದ ಇನ್ನಾರೂ ಇಲ್ಲ’ವೆಂದು ಇತ್ತೀಚೆಗೆ ನಿಧನರಾದ ಪ್ರಾಣಿಶಾಸ್ತ್ರಜ್ಞೆ ಜೇನ್‌ ಗುಡಾಲ್‌ ಹೇಳಿದ್ದರು. ಮನುಷ್ಯ ಬುದ್ಧಿವಂತ ನಾಗಿದ್ದರೆ ಇರುವ ಒಂದೇ ಆವಾಸಯೋಗ್ಯ ತಾಣವನ್ನು ನಾಶಗೊಳಿಸುತ್ತಿರಲಿಲ್ಲ. ‘ಘಟ್ಟ ಉಳಿದಲ್ಲಿ ಉಳಿದೇವು!’ ಲೇಖನದಲ್ಲಿ (ಲೇ: ಅಖಿಲೇಶ್‌ ಚಿಪ್ಪಳಿ,
ಪ್ರ.ವಾ., ನ. 11) ಪ್ರಸ್ತಾಪಿಸಿರುವ ಅಂಕಿಅಂಶಗಳನ್ನು ಯಾವ ರಾಜಕಾರಣಿಯಾಗಲಿ ಅಥವಾ ಗಣಿಧಣಿಯಾಗಲಿ ತಿರಸ್ಕರಿಸಲು ಸಾಧ್ಯವಿಲ್ಲ. ಕರ್ನಾಟಕದ ಜೀವವೈವಿಧ್ಯಕ್ಕೆ ಕಾರಣವಾಗಿರುವ ಘಟ್ಟವನ್ನು ತುಂಡರಿಸಿ, ಬೆತ್ತಲು ಮಾಡಿದ್ದು ಸಾಲದೆ, ಇನ್ನೊಂದು ದಶಕದಲ್ಲಿ ಮರುಭೂಮಿ ಮಾಡಿಬಿಡುವ ಛಲದಂತೆ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ನಾವು ಕಟ್ಟಿದ ಸೇತುವೆ, ಸುರಂಗ, ಸ್ಥಾವರಗಳು ನಮ್ಮೊಂದಿಗೆ ಮಣ್ಣಲ್ಲಿ ಮಣ್ಣಾಗುವುದಿಲ್ಲ. ಬದಲಿಗೆ, ಉಳಿದ ಜನರ ಜೀವನವನ್ನು ಮತ್ತಷ್ಟು ದುಸ್ತರಗೊಳಿಸುತ್ತವೆ.

– ಶಾಂತರಾಜು ಎಸ್‌., ಬೆಂಗಳೂರು

______________________

ರಾಷ್ಟ್ರೀಯ ಭದ್ರತೆಗಾಗಿ ಏಳಿ, ಎಚ್ಚರಗೊಳ್ಳಿ

ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಸವಾಲುಗಳನ್ನು ತೆರೆದಿಟ್ಟಿದೆ. ದೇಶದೊಳಗೆ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವವರ ಮೇಲೂ ಎನ್‌ಐಎ ಹೆಚ್ಚಿನ ನಿಗಾವಹಿಸಬೇಕಿದೆ. ಪ್ರಚೋದನಕಾರಿ ಭಾಷಣ ಮಾಡುವವರ ಮೇಲೆ ಹದ್ದಿನ ಕಣ್ಣಿಡಬೇಕಿದೆ.

ಪ್ರಚೋದನೆ ಮಾಡುವ ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರಿದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ. ದೇಶದೊಳಗಿರುವ ಶತ್ರುಗಳನ್ನು ಮಟ್ಟ ಹಾಕದಿದ್ದರೆ ಬಾಹ್ಯ ಶತ್ರುಗಳನ್ನು ಹಿಮ್ಮೆಟ್ಟಿಸುವುದು ಕಷ್ಟಕರ. ಹಾಗಾಗಿ, ಸರ್ಕಾರ ಹಾಗೂ ವಿರೋಧ ಪಕ್ಷಗಳು ಪರಸ್ಪರ ಕೆಸರೆರಚಾಟ ಮಾಡುವುದನ್ನು ಬಿಟ್ಟು, ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಈ ವಿಷಯದಲ್ಲಿ ಕೇಂದ್ರ ಗೃಹ ಸಚಿವಾಲಯವೂ ಎಚ್ಚೆತ್ತುಕೊಳ್ಳಬೇಕಿದೆ.

– ಖಾದರ್ ಬರಗೂರು, ಕೊಪ್ಪಳ

______________________

ನಕಲಿ ತುಪ್ಪ: ಆರೋಗ್ಯಕ್ಕೆ ಹಾನಿಯ ಆತಂಕ

ತಿರುಮಲದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದನ್ನು ಸಿಬಿಐನ ವಿಶೇಷ ತನಿಖಾ ತಂಡ ಪತ್ತೆಹಚ್ಚಿದೆ. ಭಕ್ತರು ಎಷ್ಟೋ ದಿನಗಳಿಂದ ತಾಳ್ಮೆಯಿಂದ ಕಾಯ್ದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ತುಪ್ಪ ಪೂರೈಕೆದಾರರು ಒಂದು ಹನಿ ಹಾಲು ಬಳಸದೆಯೇ ಸಸ್ಯಜನ್ಯ ಎಣ್ಣೆ ಬಳಸಿ ತುಪ್ಪ ತಯಾರಿಸಿದ್ದಾರೆ. ಅಲ್ಪಪ್ರಮಾಣದ ಶುದ್ಧ ತುಪ್ಪದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಬೆರೆಸಲಾಗಿದೆ.

ಈಗಾಗಲೇ, ದಿನನಿತ್ಯ ಬಳಸುವ ಆಹಾರ ಪದಾರ್ಥಗಳಲ್ಲಿ ರಾಸಾಯನಿಕಗಳ ಪ್ರಮಾಣ ಹೆಚ್ಚಿದೆ. ನಕಲಿ ತುಪ್ಪದ ಸೇವನೆಯಿಂದ ಹಲವು ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಭಕ್ತರ ನಂಬಿಕೆಗೆ ಗಾಸಿ ಮಾಡಿದ ನಕಲಿ ತುಪ್ಪ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

– ಭಾಸ್ಕರ ತಳಕೇರಿ, ಬಾಗಲಕೋಟೆ

______________________

ರೈತ ಕುಟುಂಬಗಳ ಬಗ್ಗೆ ತಾತ್ಸಾರ ಬೇಡ

ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತರು ಇತ್ತೀಚೆಗೆ ನಡೆಸಿದ ಹೋರಾಟಕ್ಕೆ ಸಮಾಜದ ವಿವಿಧ ವರ್ಗಗಳ ಜನರಿಂದ ಬೆಂಬಲ ದೊರೆಯಿತು. ಆದರೆ, ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಅಭಿಮಾನವು ತೋರುವ ಸಮಾಜಕ್ಕೆ ರೈತನ ವೈಯಕ್ತಿಕ ಜೀವನದ ಬಗೆಗಿನ ತಾತ್ಸಾರ ಭಾವನೆ ಬದಲಾಗಿಲ್ಲ.

ರಾಜ್ಯದಲ್ಲಿ ಬಹಳಷ್ಟು ರೈತರ ಮಕ್ಕಳು ಇಂದಿಗೂ ಕೃಷಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಂತಹವರಿಗೆ ಉದ್ಯಮಿಗಳು, ಸರ್ಕಾರಿ ನೌಕರರು ತಮ್ಮ ಮನೆತನದ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಅನ್ನದಾತರ ದುಡಿಮೆಯ ಬಗ್ಗೆ ಕೀಳರಿಮೆ ತೋರದೆ ಹೃದಯ ವೈಶಾಲ್ಯತೆ ತೋರಬೇಕಿದೆ.

– ಮಲ್ಲಿಕಾರ್ಜುನ್ ತೇಲಿ, ಗೋಠೆ