
ಕೊಯಮತ್ತೂರು (ಪಿಟಿಐ): ತಮಿಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸಂಶಯಾಸ್ಪದ ಎಲ್‌ಬಿ ತೀರ್ಪಿಗೆ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಅಂತರರಾಷ್ಟ್ರೀಯ ಆಟಗಾರನ ಈ ನಡೆಗೆ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.
ದಿಂಡಿಗಲ್ ಡ್ರಾಗನ್ಸ್ ಮತ್ತು ಐಡ್ರೀಮ್ ತಿರುಪ್ಪುರ್ ತಮಿಳಗನ್ಸ್ ನಡುವಣ ಪಂದ್ಯದಲ್ಲಿ ಅಶ್ವಿನ್ ಡ್ರಾಗನ್ಸ್ ತಂಡ ಮುನ್ನಡೆಸುತ್ತಿದ್ದರು.
ಎಡಗೈ ಸ್ಪಿನ್ನರ್ ಆರ್.ಸಾಯಿಕಿಶೋರ್ ಮಾಡಿದ ಐದನೇ ಓವರಿನ ಐದನೇ ಎಸೆತದಲ್ಲಿ ಅಶ್ವಿನ್ ಅವರು ಪ್ಯಾಡಲ್ ಸ್ವೀಪ್‌ಗೆ ಯತ್ನಿಸಿದ ವೇಳೆ ಚೆಂಡು ಪ್ಯಾಡ್‌ಗೆ ಬಡಿಯಿತು. ಅವರು ತಕ್ಷಣ ರನ್ನಿಗೆ ಓಡಿದರು. ಬೌಲರ್ ಮನವಿ ಸಲ್ಲಿಸಿದಾಗ ಅಂಪೈರ್ ವೆಂಕಟೇಶನ್ ಕೃತಿಕಾ ನೀಡಿದ ಔಟ್ ತೀರ್ಪಿಗೆ ಅವರು ಅಸಹನೆ ವ್ಯಕ್ತಪಡಿಸಿದರು.
ಅಶ್ವಿನ್ 10 ಎಸೆತಗಳಲ್ಲಿ 18 ರನ್ ಬಾರಿಸಿದ್ದರು. ಡ್ರಾಗನ್ಸ್ ತಂಡದ ಡಿಆರ್‌ಎಸ್ ಕೋಟಾ ಮುಗಿದಿತ್ತು. ರಿಪ್ಲೇಯಲ್ಲಿ ಚೆಂಡು ಲೆಗ್‌ಸ್ಟಂಪ್‌ನ ಆಚೆ ಬಿದ್ದಂತೆ ಕಂಡಿತ್ತು.
ಹಿಂತಿರುಗುವ ದಾರಿಯಲ್ಲಿ ಅಶ್ವಿನ್ ಅವರು ಕೃತಿಕಾ ಅವರನ್ನು ದುರುಗುಟ್ಟಿ ನೋಡಿ ಪ್ರಶ್ನಿಸಿದರು. ಬೌಂಡರಿ ಗೆರೆ ದಾಟಿದ ತಕ್ಷಣ ಗ್ಲೌಸ್‌ಗಳನ್ನು ಕಳಚಿ ನೆಲಕ್ಕೆ ಒಗೆದರು. ಅಶ್ವಿನ್ ಅವರ ತಂಡ 9 ವಿಕೆಟ್‌ಗಳಿಂದ ಸೋತಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.