ADVERTISEMENT

ಇಂಗ್ಲೆಂಡ್‌ ಮಾಜಿ ಬ್ಯಾಟರ್ ರಾಬಿನ್‌ ಸ್ಮಿತ್ ನಿಧನ

ಏಜೆನ್ಸೀಸ್
Published 2 ಡಿಸೆಂಬರ್ 2025, 13:37 IST
Last Updated 2 ಡಿಸೆಂಬರ್ 2025, 13:37 IST
ರಾಬಿನ್‌ ಸ್ಮಿತ್‌
ರಾಬಿನ್‌ ಸ್ಮಿತ್‌   

ಲಂಡನ್‌: ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ರಾಬಿನ್ ಸ್ಮಿತ್ (62) ಅವರು ನಿಧನರಾಗಿದ್ದಾರೆ ಎಂದು ಕೌಂಟಿ ತಂಡ ಹ್ಯಾಂಪ್‌ಶೈರ್ ಮಂಗಳವಾರ ಪ್ರಕಟಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದ ಸ್ಮಿತ್ ಅವರು 1988 ರಿಂದ 1996ರ ನಡುವೆ ಇಂಗ್ಲೆಂಡ್ ಪರ 62 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ಆಸ್ಟ್ರೇಲಿಯಾದ ದಕ್ಷಿಣ ಪರ್ತ್‌ನಲ್ಲಿ ನೆಲೆಸಿರುವ ಅವರು ಸೋಮವಾರ ನಿಧನರಾಗಿದ್ದಾರೆ ಎಂದು ಅವರ ಕುಟಂಬ ತಿಳಿಸಿದೆ. ಆದರೆ ಸಾವಿಗೆ ಕಾರಣ ಸ್ಪಷ್ಟಪಡಿಸಿಲ್ಲ.

ಮೊದಲ ಆ್ಯಷಸ್‌ ಟೆಸ್ಟ್‌ಗೆ ಪೂರ್ವಭಾವಿಯಾಗಿ, ಕೋಚ್‌ ಆ್ಯಂಡ್ರೂ ಫ್ಲಿಂಟಾಫ್‌ ಅವರ ಆಹ್ವಾನದ ಮೇರೆಗೆ ಸ್ಮಿತ್ ಅವರು ಇಂಗ್ಲೆಂಡ್‌ ಕ್ರಿಕೆಟ್‌ನ ಎರಡನೇ ಸ್ತರದ ತಂಡವಾದ ಇಂಗ್ಲೆಂಡ್‌ ಲಯನ್ಸ್‌ ತಂಡವನ್ನು ಭೇಟಿಯಾಗಿದ್ದರು. 

ADVERTISEMENT

ಸ್ಮಿತ್ ಅವರು ಟೆಸ್ಟ್‌ ಪಂದ್ಯಗಳಲ್ಲಿ ಒಂಬತ್ತು ಶತಕ ಸೇರಿದಂತೆ 43.67ರ ಸರಾಸರಿಯಲ್ಲಿ 4,236 ರನ್ ಗಳಿಸಿದ್ದಾರೆ. 71 ಏಕದಿನ ಪಂದ್ಯಗಳಲ್ಲಿ 39.01ರ ಸರಾಸರಿಯಲ್ಲಿ 24,19 ರನ್ ಗಳಿಸಿದ್ದಾರೆ.

‘ಇಂಗ್ಲೆಂಡ್‌ ವಿರುದ್ಧ ಎಜ್ಬಾಸ್ಟನ್‌ನಲ್ಲಿ 1993ರಲ್ಲಿ ನಡೆದ ಪಂದ್ಯದಲ್ಲಿ ಅವರು 163 ಎಸೆತಗಳಲ್ಲಿ ಗಳಿಸಿದ ಅಜೇಯ 167 ರನ್‌ಗಳ ಇನಿಂಗ್ಸ್ ಅವಿಸ್ಮರಣೀಯ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ರಿಚರ್ಡ್ ಥಾಮ್ಸನ್ ಅವರು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.