ADVERTISEMENT

IPL 2025 | KKR vs LSG: ಕೋಲ್ಕತ್ತ ವಿರುದ್ಧ ರನ್‌ಗಳ ಹೊಳೆಯಲ್ಲಿ ಗೆದ್ದ ಲಖನೌ

ಪಿಟಿಐ
Published 8 ಏಪ್ರಿಲ್ 2025, 14:04 IST
Last Updated 8 ಏಪ್ರಿಲ್ 2025, 14:04 IST
<div class="paragraphs"><p>ನಿಕೊಲಸ್ ಪೂರನ್</p></div>

ನಿಕೊಲಸ್ ಪೂರನ್

   

ಕೋಲ್ಕತ್ತ : ರನ್‌ಗಳ ಪ್ರವಾಹ ಕಂಡ ರೋಚಕ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್ ತಂಡ ಕೊನೆಗಳಿಗೆಯ ಒತ್ತಡವನ್ನು ಯಶಸ್ವಿಯಾಗಿ ಮೆಟ್ಟಿ ನಿಂತಿತು. ರಿಷಭ್ ಪಂತ್ ಬಳಗ, ಈಡನ್‌ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತ ನೈರ್ಟ್‌ ರೈಡರ್ಸ್ ತಂಡದ ಮೇಲೆ ನಾಲ್ಕು ರನ್‌ಗಳ ರೋಚಕ ಜಯಪಡೆಯಿತು.

ಸಿಕ್ಸರ್‌, ಬೌಂಡರಿಗಳ ಮಳೆಯನ್ನು ಕಂಡ ಈ ಪಂದ್ಯದಲ್ಲಿ 472 ರನ್‌ಗಳು ಹರಿದುಬಂದವು. ಕೆಕೆಆರ್ ನಾಯಕ ಅಜಿಂಕ್ಯ ರಹಾನೆ 35 ಎಸೆತಗಳಲ್ಲಿ 61 ರನ್ ಸಿಡಿಸಿದರು. ವೆಂಕಟೇಶ್ ಅಯ್ಯರ್ (45, 29ಎಸೆತ) ಜೊತೆ ಮೂರನೇ ವಿಕೆಟ್‌ಗೆ 71 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಲಖನೌ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ (47ಕ್ಕೆ1) ಮತ್ತು ದಿಗ್ವೇಶ್ ರಾಠಿ (33ಕ್ಕೆ1) ಕೊನೆಯ ಕೆಲ ಓವರುಗಳಲ್ಲಿ ಕೋಲ್ಕತ್ತದ ಅಬ್ಬರಕ್ಕೆ ಅಂಕುಶ ತೊಡಿಸಿದರು.

ADVERTISEMENT

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಲಖನೌ ತಂಡವು, ಅಮೋಘ ಲಯದಲ್ಲಿರುವ ಮಿಚೆಲ್ ಮಾರ್ಷ್ (81, 48ಎ, 4x6, 6x5) ಮತ್ತು ಎಡಗೈ ಬ್ಯಾಟರ್ ನಿಕೋಲಸ್ ಪೂರನ್ (81, 36 ಎಸೆತ, 4x7, 6x8) ಅವರ ಭರ್ಜರಿ ಆಟದಿಂದ 3 ವಿಕೆಟ್‌ಗೆ 238 ರನ್‌ಗಳ ದೊಡ್ಡ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಸೇರಿಗೆ ಸವ್ವಾಸೇರು ಎಂಬಂತೆ ಆತಿಥೇಯರು ಆಡಿದರೂ, ಅಂತಿಮವಾಗಿ 7 ವಿಕೆಟ್‌ಗೆ 234 ರನ್‌ಗಳಿಸಿ ನಿರಾಸೆ ಅನುಭವಿಸಿದರು.

ಮಾರ್ಷ್‌ ಮೊದಲ ವಿಕೆಟ್‌ಗೆ ಏಡನ್‌ ಮರ್ಕರಂ (47, 28ಎ, 4x4, 6x2) ಅವರೊಂದಿಗೆ 61 ಎಸೆತಗಳಲ್ಲಿ 99 ರನ್‌ ಸೇರಿಸಿದರು. ಹರ್ಷಿತ್‌ ರಾಣಾ ಈ ಜೊತೆಯಾಟ ಮುರಿದರೂ ಕೋಲ್ಕತ್ತ ತಂಡದ  ಬೇಗುದಿ ತಪ್ಪಲಿಲ್ಲ. ಮಾರ್ಷ್‌ ಈ ಐಪಿಎಲ್‌ನಲ್ಲಿ ನಾಲ್ಕನೇ ಅರ್ಧ ಶತಕ ಬಾರಿಸಿದರು. ಪೂರನ್ ಮತ್ತೊಮ್ಮೆ ಸ್ಫೋಟಕ ಇನಿಂಗ್ಸ್ ಆಡಿದರು. 21 ಎಸೆತಗಳಲ್ಲಿ ಅರ್ಧ ಶತಕ ದಾಟಿದ ಅವರು 87 ರನ್ ಗಳಿಸಿ ಅಜೇಯರಾಗುಳಿದರು.

ರಹಾನೆ ಮಿಂಚಿನ ಆಟ: ಕೋಲ್ಕತ್ತಕ್ಕೆ ಕ್ವಿಂಟನ್ ಡಿಕಾಕ್ (15) ಮತ್ತು ಸುನೀಲ್ ನಾರಾಯಣ್ (30, 13ಎ) ಬಿರುಸಿನ ಆರಂಭ ಒದಗಿಸಿದರು. ಆಕಾಶ್ ದೀಪ್ ಈ ಜೊತೆಯಾಟ ಮುರಿದರೂ, ತಮ್ಮ ಶೈಲಿಗೆ ವಿರುದ್ಧವಾಗಿ ಆಕ್ರಮಣಕಾರಿ ಆಟವಾಡಿದ ರಹಾನೆ ಅವರು ವೆಂಕಟೇಶ ಅಯ್ಯರ್ ಜೊತೆ ತಂಡದ ನೆರವಿಗೆ ನಿಂತರು.

ಶಾರ್ದೂಲ್ ಠಾಕೂರ್‌ ವೈಡ್‌ಬಾಲ್ ತಂತ್ರಕ್ಕೆ ರಹಾನೆ ಕೊನೆಗೂ ವಿಕೆಟ್‌ ನೀಡಿದರು. ಆ ಓವರಿನಲ್ಲಿ ಶಾರ್ದೂಲ್ ಐದು ವೈಡ್ ಹಾಕಿದ್ದರು. ಎಲ್‌ಎಸ್‌ಜಿ ಬೌಲರ್‌ಗಳು ಒಟ್ಟು 20 ವೈಡ್‌ಗಳನ್ನು ಕೊಟ್ಟರು.

ಒಂದು ಹಂತದಲ್ಲಿ 13 ಓವರುಗಳಲ್ಲಿ 3 ವಿಕೆಟ್‌ಗೆ 162 ರನ್ ಗಳಿಸಿದ್ದ ಕೋಲ್ಕತ್ತ ಗೆಲುವಿನ ಹಾದಿಯಲ್ಲಿತ್ತು. 42 ಎಸೆತಗಳಲ್ಲಿ 77 ರನ್‌ಗಳು ಬೇಕಿದ್ದವು. ಆದರೆ ರಹಾನೆ ವಿಕೆಟ್‌ ಪತನದ ನಂತರ  ಹಳಿ ತಪ್ಪಿತು. 

ನಿಲ್ಲದ ದಿಗ್ವೇಶ್‌ ಸಂಭ್ರಮ

ಈ ಋತುವಿನಲ್ಲಿ ಶೋಧ ಎನಿಸಿರುವ ಎಡಗೈ ಸ್ಪಿನ್ನರ್ ದಿಗ್ವೇಶ್ ರಾಠಿ ಮತ್ತೆ ಮಿಂಚಿದರು. ತಮ್ಮ ಮೆಚ್ಚಿನ ಆಟಗಾರ ಸುನೀಲ್ ವಿಕೆಟ್‌ ಕೂಡ ಪಡೆದರು. ಈ ವೇಳೆ ನೋಟ್‌ಬುಕ್ ಸಂಭ್ರಮದ ಬದಲು ಹುಲ್ಲಿನ ಮೇಲೆ ಏನೊ ಬರೆದರು. ತಮ್ಮ ಸಂಭ್ರಮದ ವೈಖರಿಗೆ  ಅವರು ಎರಡು ಬಾರಿ ಡಿಮೆರಿಟ್‌ ಪಾಯಿಂಟ್‌, ದಂಡ ಶಿಕ್ಷೆ ಅನುಭವಿಸಿದ್ದಾರೆ.

ಸ್ಕೋರುಗಳು: ಲಖನೌ ಸೂಪರ್‌ ಜೈಂಟ್ಸ್‌: 20 ಓವರುಗಳಲ್ಲಿ 3 ವಿಕೆಟ್‌ಗೆ 238 (ಏಡನ್ ಮರ್ಕರಂ 47,  ಮಿಚೆಲ್‌ ಮಾರ್ಷ್‌ 81, ನಿಕೋಲಸ್ ಪೂರನ್ ಔಟಾಗದೇ 87, ಹರ್ಷಿತ್‌ ರಾಣಾ 51ಕ್ಕೆ2); ಕೋಲ್ಕತ್ತ ನೈಟ್‌ ರೈಡರ್ಸ್‌: 20 ಓವರುಗಳಲ್ಲಿ 7 ವಿಕೆಟ್‌ಗೆ 234 (ಸುನೀಲ್ ನಾರಾಯಣ್ 30, ಅಜಿಂಕ್ಯ ರಹಾನೆ 61, ವೆಂಕಟೇಶ್‌ ಅಯ್ಯರ್ 45, ರಿಂಕು ಸಿಂಗ್ ಔಟಾಗದೇ 38; ಆಕಾಶ್ ದೀಪ್ 55ಕ್ಕೆ2, ಶಾರ್ದೂಲ್ ಠಾಕೂರ್ 52ಕ್ಕೆ2). ‍ಪಂದ್ಯದ ಆಟಗಾರ: ನಿಕೋಲಸ್ ಪೂರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.