
ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ಉದಯೋನ್ಮುಖರನ್ನು ಗುರುತಿಸಿ ಉತ್ತಮ ಆಟಗಾರರನ್ನಾಗಿ ಸಜ್ಜುಗೊಳಿಸುವ ಗುರಿಯನ್ನಿಟ್ಟುಕೊಂಡು ವಸತಿ ಸಹಿತ ಉನ್ನತ ಸಾಧನಾ ಕೇಂದ್ರಕ್ಕೆ (ಹೈ ಪರ್ಫಾಮೆನ್ಸ್ ಸೆಂಟರ್) ಬುಧವಾರ ಇಲ್ಲಿನ ಸರ್ಜಾಪುರ ರಸ್ತೆಯ ಲಕ್ಷ್ಯನ್ ಅಕಾಡೆಮಿಯಲ್ಲಿ ಚಾಲನೆ ನೀಡಲಾಯಿತು.
ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ಎಸಿಜಿ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಈ ಕೇಂದ್ರವನ್ನು ಜಂಟಿಯಾಗಿ ಆರಂಭಿಸಿವೆ. ಮೊದಲ ಇಂಡಿಯಾ ಬ್ಯಾಸ್ಕೆಟ್‌ಬಾಲ್ ಲೀಗ್‌ಗೆ ಪೂರ್ವಭಾವಿಯಾಗಿ ಈ ಕೇಂದ್ರ ಆರಂಭವಾಗಿದೆ.
ಇಲ್ಲಿ ಫಿಭಾ ಗುಣಮಟ್ಟದ ಮೂರು ಅಂಕಣಗಳನ್ನು ನಿರ್ಮಿಸಲಾಗಿದೆ. ಸ್ಟ್ರೆಂಥ್ ಅಂಡ್ ಕಂಡಿಷನಿಂಗ್ ಜಿಮ್ ಸಹ ಇದೆ. ವಿಶ್ವ ದರ್ಜೆಯ 25 ಮೀಟರ್ ಈಜು ಕೊಳವೂ ಇದೆ.
‘ವರ್ಷಗಳ ದೂರದೃಷ್ಟಿಯ ಫಲವಾಗಿ ಇಂಡಿಯಾ ಬ್ಯಾಸ್ಕೆಟ್‌ಬಾಲ್ ಲೀಗ್ ಈಗ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ತಾರಾ ವರ್ಚಸ್ಸಿನ ಆಟಗಾರರನ್ನು ಕಂಡುಕೊಳ್ಳಲು ಮತ್ತು ಬ್ಯಾಸ್ಕೆಟ್‌ಬಾಲ್ ಸಂಸ್ಕೃತಿಯನ್ನು ಪಸರಿಸಲು ಇದು ನೆರವಾಗಲಿದೆ’ ಎಂದು ಬಿಎಫ್‌ಐ ಅಧ್ಯಕ್ಷ ಆಧವ್ ಅರ್ಜುನ ಈ ಸಂದರ್ಭದಲ್ಲಿ ತಿಳಿಸಿದರು.
‘ಬ್ಯಾಸ್ಕೆಟ್‌ಬಾಲ್, ಒಲಿಂಪಿಕ್ ಕ್ರೀಡೆಯಾಗಿದೆ. ನಮ್ಮ ಪ್ರಯತ್ನವು ಈ ನಿಟ್ಟಿನಲ್ಲಿ ಹೆಚ್ಚಿನ ಅರ್ಥ ನೀಡಲಿದೆ. ಆರು ತಿಂಗಳಲ್ಲಿ ಉನ್ನತ ಸಾಧನಾ ಕೇಂದ್ರವು (ಎಚ್‌ಪಿಸಿ) ಪೂರ್ಣಪ್ರಮಾಣದಲ್ಲಿ ಕಾರ್ಯೋನ್ಮುಖವಾಗಲಿದೆ. ಮುಂದಿನ ವರ್ಷ ಲೀಗ್ ಆರಂಭವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.