
ನವದೆಹಲಿ: ತೀವ್ರ ಹೋರಾಟ ನಡೆಸಿದ ಇಶಾ ಅನಿಲ್ ಟಕ್ಸಾಲೆ ಮತ್ತು ಹಿಮಾಂಶು ಜೋಡಿ, ಸ್ವದೇಶದ ಶಾಂಭವಿ ಕ್ಷೀರಸಾಗರ– ನರೇನ್ ಪ್ರಣವ್ ಅವರನ್ನು ಸೋಲಿಸಿ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮಂಗಳವಾರ ಸ್ವರ್ಣ ಜಯಿಸಿತು.
ಪುರುಷರ ಟ್ರ್ಯಾಪ್ (50 ಗುರಿ) ಸ್ಪರ್ಧೆಯಲ್ಲಿ ವಿನಯ್ ಪ್ರತಾಪ್ ಚಂದ್ರಾವತ್ ಅವರು ಕಂಚಿನ ಪದಕ ಗೆದ್ದರು. ಬುಧವಾರ ಈ ಕೂಟದ ಕೊನೆಯ ದಿನವಾಗಿದ್ದು, ಭಾರತ ಪದಕ ಪಟ್ಟಿಯಲ್ಲಿ 23 ಪದಕಗಳೊಂದಿಗೆ ಅಗ್ರಸ್ಥಾನ ಕಾಪಾಡಿಕೊಂಡಿದೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಸೇರಿವೆ.
ಫೈನಲ್‌ನ ಒಂದು ಹಂತದಲ್ಲಿ ಇಶಾ– ಹಿಮಾಂಶು ಜೋಡಿ 9–15ರಲ್ಲಿ ಹಿನ್ನಡೆಯಲ್ಲಿತ್ತು. ಆದರೆ ಅಮೋಘವಾಗಿ ಚೇತರಿಸಿ 17–15ರಲ್ಲಿ ಜಯಗಳಿಸಿತು. ಈ ಸ್ಪರ್ಧೆಯ ಕಂಚಿನ ಪದಕ ಐಎನ್‌ಎ (ವೈಯಕ್ತಿಕ ತಟಸ್ಥ ಅಥ್ಲೀಟ್ಸ್) ಪ್ರತಿನಿಧಿಸಿದ ವರ್ವರಾ ಕರ್ದಕೋವಾ– ಕಮಿಲ್ ನುರಿಯಖ್ಮೆಟೋವ್ ಜೋಡಿ ಪಾಲಾಯಿತು.
ಪುರುಷರ ಟ್ರ್ಯಾಪ್ ಸ್ಪರ್ಧೆಯಲ್ಲಿ ಕ್ರೊವೇಷ್ಯಾದ 20 ವರ್ಷ ವಯಸ್ಸಿನ ಟೋನಿ ಗುಡೆಲ್ ಅವರು 44 ಟಾರ್ಗೆಟ್ ಸಾಧಿಸಿ ಚಿನ್ನ ಗೆದ್ದರು. ಇದು ಈ ದೇಶಕ್ಕೆ ಮೊದಲ ಚಿನ್ನ. ಕ್ವಾಲಿಫಿಕೇಷನ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಸ್ಪೇನ್‌ನ ಐಸಾಕ್ ಹರ್ನಾಂಡೆಝ್ (41) ಬೆಳ್ಳಿ ಗೆದ್ದರು. ಚಂದ್ರಾವತ್ (34) ಮೂರನೇ ಸ್ಥಾನ ಗಳಿಸಿದರೆ, ಅರ್ಜುನ್ (29) ನಾಲ್ಕನೇ ಸ್ಥಾನ ಪಡೆದರು.
ಮಹಿಳೆಯರ 25 ಮೀ. ಪಿಸ್ತೂಲ್ ಪ್ರಿಸಿಷನ್ ಹಂತದ ನಂತರ ಭಾರತದ ತೇಜಸ್ವಿನಿ 288 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬುಧವಾರ ರ‍್ಯಾಪಿಡ್ ಫೈರ್ ಹಂತ ನಡೆಯಲಿದ್ದು, ಒಟ್ಟಾರೆ ಮೊದಲ ಆರು ಸ್ಥಾನ ಗಳಿಸಿದವರು ಫೈನಲ್ ತಲುಪುವರು.
ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯ ಪ್ರಿಸಿಷನ್ ಹಂತದ ನಂತರ ಭಾರತದ ರಾಘವ್ ಶರ್ಮಾ (290) ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್ ನೆಲವಳ್ಳಿ (289) ನಿಕಟ ಪೈಪೋಟಿ ನೀಡಿ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.