ADVERTISEMENT

ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಇಂದಿನಿಂದ: ಕಣದಲ್ಲಿ ಸಿಂಧು, ಲಕ್ಷ್ಯ

ಪಿಟಿಐ
Published 17 ಮಾರ್ಚ್ 2025, 23:30 IST
Last Updated 17 ಮಾರ್ಚ್ 2025, 23:30 IST
ಪಿ.ವಿ. ಸಿಂಧು 
ಪಿ.ವಿ. ಸಿಂಧು    

ಬಾಸೆಲ್: ಒಲಿಂಪಿಯನ್ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತಮ್ಮ ಲಯಕ್ಕೆ ಮರಳುವ  ಭರವಸೆಯಲ್ಲಿದ್ದಾರೆ.

250,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತ ಹೊಂದಿರುವ ಟೂರ್ನಿಯ ಮಹಿಳಾ ವಿಭಾಗದಲ್ಲಿ ಭಾರತದ ಸಿಂಧು, ಮಾಳವಿಕಾ ಬನ್ಸೋದ್ ಅವರು ಕಣಕ್ಕಿಳಿಯಲಿ್ದ್ದಾರೆ. 

ಪುರುಷರ ವಿಭಾಗದಲ್ಲಿ  ಲಕ್ಷ್ಯ ಸೇನ್ ಮತ್ತು 2016ರಲ್ಲಿ ಸ್ವಿಸ್ ಚಾಂಪಿಯನ್ ಆಗಿದ್ದ ಎಚ್‌.ಎಸ್. ಪ್ರಣಯ್  ಕೂಡ ಇಲ್ಲಿ ಭಾಗವಹಿಸಲಿದ್ದಾರೆ. ಇದು ಬಿಡಬ್ಲ್ಯುಎಫ್‌ ಸೂಪರ್ 300 ಟೂರ್ನಿಯಾಗಿದೆ.

ADVERTISEMENT

2022ರ ಆವೃತ್ತಿಯ ಚಾಂಪಿಯನ್ ಆಗಿದ್ದ ಸಿಂಧು ಅವರು ಕಳೆದ ವಾರ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಿಂದ ಸ್ನಾಯುಸೆಳೆತದ ಕಾರಣದಿಂದ ಹಿಂದೆ ಸರಿದಿದ್ದರು. ಆ ಟೂರ್ನಿಯಲ್ಲಿ ಮಾಳವಿಕಾ ಅವರು ಸಿಂಗಪುರದ ಯಾವೊ ಜಿಯಾ ಮಿನ್ ವಿರುದ್ಧ ಗೆಲುವು ಸಾಧಿಸಿ, ಭರವಸೆ ಮೂಡಿಸಿದ್ದರು.

ಲಕ್ಷ್ಯ ಅವರು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡಿದ್ದರು.

ಆಲ್‌ ಇಂಗ್ಲೆಂಡ್‌ನಲ್ಲಿ ಪ್ರಣಯ್ ಮತ್ತು ಲಕ್ಷ್ಯ ಕೂಡ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿರಲಿಲ್ಲ.  ಭಾರತದ ಬ್ಯಾಡ್ಮಿಂಟನ್ ಆಟಗಾರರು ಮೊದಲಿನಿಂದಲೂ ಸ್ವಿಸ್ ಓಪನ್‌ನಲ್ಲಿ ಉತ್ತಮ ಸಾಧನೆ ಮಾಡಿದ ದಾಖಲೆಗಳು ಇವೆ. ಸಿಂಧು, ಕೆ. ಶ್ರೀಕಾಂತ್, ಸೈನಾ ನೆಹ್ವಾಲ್ ಮತ್ತು ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಇಲ್ಲಿ ಚಾಂಪಿಯನ್ ಆಗಿದ್ದರು. 

ಈ ಬಾರಿ ಭಾರತ ತಂಡದಲ್ಲಿ ಆಕರ್ಷಿ ಕಶ್ಯಪ್, ರಕ್ಷಿತಾ ಶ್ರೀ ಸಂತೋಷ್ ರಾಮರಾಜ್,  ಅನುಪಮಾ ಉಪಾಧ್ಯಾಯ, ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್ ಜಾರ್ಜ್ ಕೂಡ ಭಾರತದ ಪಾಲಿನ ಭರವಸೆಯಾಗಿದ್ದಾರೆ. 

ಬಹುದಿನಗಳಿಂದ ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ಪುಟಿದೇಳಲು ಇದು ಉತ್ತಮ ಅವಕಾಶವಾಗಿದೆ. 

ಲಕ್ಷ್ಯ ಸೇನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.