ADVERTISEMENT

ಸತತ ಸೋಲುಗಳಿಂದ ಹೈರಾಣು: ಸಕಾರಾತ್ಮಕ ಫಲಿತಾಂಶ ನಿರೀಕ್ಷೆಯಲ್ಲಿ ಭಾರತ ಹಾಕಿ ತಂಡ

ಪಿಟಿಐ
Published 20 ಜೂನ್ 2025, 14:11 IST
Last Updated 20 ಜೂನ್ 2025, 14:11 IST
<div class="paragraphs"><p>ಭಾರತ ಹಾಕಿ ತಂಡ</p></div>

ಭಾರತ ಹಾಕಿ ತಂಡ

   

ಆ್ಯಂಟ್‌ವರ್ಪ್‌: ವಿಶ್ವಕಪ್‌ಗೆ ನೇರ ಟಿಕೆಟ್‌ ಪಡೆಯುವ ಭಾರತ ತಂಡದ ಕನಸು ನುಚ್ಚುನೂರಾಗಿದೆ. ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿಯ ಯುರೋಪಿನ ಲೆಗ್‌ನಲ್ಲಿ ಸತತ ಆರು ಸೋಲುಗಳನ್ನು ಕಂಡು ಹೈರಾಣಾಗಿರುವ ಭಾರತ ಪುರುಷರ ತಂಡ ಇದೀಗ ಲೆಗ್‌ನಲ್ಲಿ ಉಳಿದ ಎರಡು ಪಂದ್ಯಗಳನ್ನು ಗೆದ್ದು ಸಕಾರಾತ್ಮಕ ರೀತಿಯಲ್ಲಿ ಅಭಿಯಾನ ಅಂತ್ಯಗೊಳಿಸುವ  ವಿಶ್ವಾಸದಲ್ಲಿದೆ.

ಭಾರತ ಶನಿವಾರ ಮತ್ತು ಭಾನುವಾರ ನಡೆಯುವ ಪಂದ್ಯಗಳಲ್ಲಿ ವಿಶ್ವದ ಮೂರನೇ ಕ್ರಮಾಂಕದ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ADVERTISEMENT

ತವರಿನಲ್ಲಿ ಈ ವರ್ಷದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಭಾರತ ಪುರುಷರ ತಂಡ ಉತ್ತಮ ನಿರೀಕ್ಷೆಯೊಡನೆ ಯುರೋಪಿಯನ್‌ ಲೆಗ್‌ ಪ್ರವಾಸ ಆರಂಭಿಸಿತ್ತು.  ಆದರೆ ಈವರೆಗೆ ಪ್ರವಾಸ ದುಃಸ್ವಪ್ನವಾಗಿ ಕಾಡಿದೆ.

ಮೂರನೇ ಸ್ಥಾನದಲ್ಲಿದ್ದ ಭಾರತ ಈ ಲೆಗ್‌ನ ಸತತ ಸೋಲುಗಳಿಂದ ಎಂಟನೇ ಸ್ಥಾನಕ್ಕೆ, ಅಂದರೆ ಕೊನೆಯಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.

ಪ್ರೊ ಲೀಗ್‌ನ ವಿಜೇತ ತಂಡ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತದೆ. ಈ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಜಂಟಿ ಆತಿಥ್ಯದಲ್ಲಿ ವಿಶ್ವಕಪ್‌ ನಡೆಯಲಿದೆ.

ಭಾರತ ತಂಡವು ನೆದರ್ಲೆಂಡ್ಸ್‌ಗೆ (1–2, 2–3), ಅರ್ಜೆಂಟೀನಾಕ್ಕೆ (2–3, 1–2) ಮತ್ತು ಆಸ್ಟ್ರೇಲಿಯಾಕ್ಕೆ (2–3, 2–3) ಸೋತಿದೆ.

ಇದರ ಅರ್ಥ ಭಾರತ ತಂಡ ಕಳಪೆಯಾಗಿದೆ ಆಡಿದೆ ಎಂದೇನೂ ಅಲ್ಲ; ಆದರೆ ಕೊನೆಗಳಿಗೆಯಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟಿದ್ದು ತುಟ್ಟಿಯಾಗಿದೆ. ಕೊನೆಗಳಿಗೆಯಲ್ಲಿ ಭಾರತದ ರಕ್ಷಣೆಯ ವಿಭಾಗ ಒತ್ತಡಕ್ಕೆ ಒಳಗಾಗಿದೆ. 

ಹರ್ಮನ್‌ಪ್ರೀತ್‌ ಉತ್ತಮ ಪ್ರದರ್ಶನ ನೀಡಿದರೂ, ಅಮಿತ್ ರೋಹಿದಾಸ್ ಮತ್ತು ಸುಮಿತ್ ಒತ್ತಡಕ್ಕೆ ಒಳಗಾಗಿದ್ದು ಎದ್ದುಕಂಡಿದೆ. ಅವರಿಂದ ಗೋಲ್‌ಕೀಪರ್‌ಗಳಾದ ಕೃಷನ್ ಬಹಾದೂರ್ ಪಾಠಕ್‌ ಮತ್ತು ಸೂರಜ್ ಕರ್ಕೇರಾ ಅವರಿಗೆ ಬೆಂಬಲ ಸಿಗಬೇಕಾಗಿದೆ. ಮುನ್ಪಡೆ ಕೂಡ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಪೆನಾಲ್ಟಿ ಕಾರ್ನರ್‌ ಪರಿವರ್ತನೆ ದರ ಅಷ್ಟೇನೂ ಉತ್ತಮವಾಗಿಲ್ಲ.

ಮಹಿಳಾ ತಂಡಕ್ಕೂ ಹಿನ್ನಡೆ...

ಭಾರತ ಮಹಿಳಾ ತಂಡವೂ ಯುರೋಪ್‌ ಲೆಗ್‌ನಲ್ಲಿ ಸತತ ನಾಲ್ಕು ಸೋಲುಗಳನ್ನು ಕಂಡು ಬಸವಳಿದಿದೆ. ಆಸ್ಟ್ರೇಲಿಯಾ ಎದುರು 2–3, 1–2 ಮತ್ತು ಅರ್ಜೆಂಟೀನಾ ಎದುರು 1–4, 0–2 ರಿಂದ ಸೋಲನುಭವಿಸಿದೆ.

ಆದರೆ ಮಹಿಳಾ ತಂಡ ಸೋತರೂ ಆಕ್ರಮಣಕಾರಿಯಾಗಿ ಆಡಿದೆ. ಪೆನಾಲ್ಟಿ ಕಾರ್ನರ್ ಪರಿವರ್ತಿಸುವಲ್ಲಿ ಈ ತಂಡವೂ ಹಿಂದೆಬಿದ್ದಿದೆ.

ಮಹಿಳಾ ತಂಡವೂ ಶನಿವಾರ ಮತ್ತು ಭಾನುವಾರ ಬೆಲ್ಜಿಯಂ ತಂಡವನ್ನು ಎದುರಿಸಲಿದ್ದು, ಈ ಲೆಗ್‌ನಲ್ಲಿ ಮೊದಲ ಜಯದ ತವಕದಲ್ಲಿದೆ.

9 ತಂಡಗಳ ಲೀಗ್‌ನಲ್ಲಿ ಈಗ ಭಾರತ ವನಿತೆಯರು ಏಳನೇ ಸ್ಥಾನದಲ್ಲಿದ್ದಾರೆ. ಬರ್ಲಿನ್‌ನಲ್ಲಿ ಚೀನಾ ವಿರುದ್ಧ ಇದೇ 28 ಮತ್ತು 29ರಂದು ಆಡುವ ಮೂಲಕ ಈ ಲೆಗ್‌ ಕೊನೆಗೊಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.