ADVERTISEMENT

ವಿಶ್ವ ಅಥ್ಲೆಟಿಕ್ಸ್‌ | 4x400 ಮೀ. ರಿಲೆ: ಚಿನ್ನ ‘ಕಸಿದ‘ ಬೋಟ್ಸ್‌ವಾನಾ

ಅಂತಿಮ ದಿನ ಮಳೆಯ ‘ಆಟ’

ಏಜೆನ್ಸೀಸ್
Published 21 ಸೆಪ್ಟೆಂಬರ್ 2025, 15:19 IST
Last Updated 21 ಸೆಪ್ಟೆಂಬರ್ 2025, 15:19 IST
<div class="paragraphs"><p>ಹೈಜಂಪ್‌ ಚಿನ್ನ ಗೆದ್ದ ಆಸ್ಟ್ರೇಲಿಯಾದ ನಿಕೋಲಾ ಒಲಿಸ್ಲೇಗರ್ಸ್‌ </p></div>

ಹೈಜಂಪ್‌ ಚಿನ್ನ ಗೆದ್ದ ಆಸ್ಟ್ರೇಲಿಯಾದ ನಿಕೋಲಾ ಒಲಿಸ್ಲೇಗರ್ಸ್‌

   

ಎಎಫ್‌ಪಿ ಚಿತ್ರ

ಟೋಕಿಯೊ: ರೋಮಾಂಚಕ ಹಣಾಹಣಿಯಲ್ಲಿ ಅಮೆರಿಕ ತಂಡವನ್ನು ಕೊನೆಯ ಲೆಗ್‌ನಲ್ಲಿ ಹಿಂದೆಹಾಕಿದ ಬೋಟ್ಸ್‌ವಾನಾ ತಂಡವು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 4x400 ಮೀಟರ್ಸ್ ರಿಲೆ ಚಿನ್ನವನ್ನು ಬಾಚಿಕೊಂಡಿತು. ಈ ಓಟದಲ್ಲಿ ಚಿನ್ನ ಗೆದ್ದ ಆಫ್ರಿಕಾದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ADVERTISEMENT

ಭಾನುವಾರ ಮಳೆ ಜೋರಾಗಿದ್ದು ಸ್ಪರ್ಧೆಗಳ ವೇಳಾಪಟ್ಟಿ ಏರುಪೇರಾಯಿತು. ಬೆಳಿಗ್ಗೆ ರನ್‌ಆಫ್‌ನಲ್ಲಿ ಕೆನ್ಯಾ ತಂಡವನ್ನು ಹಿಂದೆಹಾಕಿ ಫೈನಲ್ ತಲುಪಿದ್ದ ಪ್ರಬಲ ಅಮೆರಿಕವು ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅಂತಿಮ ಲೆಗ್ ಇರುವಾಗ ಅಮೆರಿಕ ಮುಂದಿತ್ತು. ಆದರೆ 400 ಮೀ. ಓಟದಲ್ಲಿ ವೈಯಕ್ತಿಕ ಚಿನ್ನ ಗೆದ್ದಿದ್ದ, ಕಾಲಿನ್ ಕೆಬಿನಾಟ್ಶಿಪಿ  ಅವರು ಮಳೆಯ ನಡುವೆ ಅತ್ಯಮೋಘವಾಗಿ ಅಂತಿಮ ಲೆಗ್‌ ಓಡಿ ಬೋಟ್ಸ್‌ವಾನಾಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟರು. ಈ ತಂಡ 2ನಿಮಿಷ 57.56 ಸೆಕೆಂಡುಗಳಲ್ಲಿ ಗುರಿತಲುಪಿತು.

‘ನಾನು ಕೊನೆಯ 100 ಮೀ. ಇರುವಾಗ ನನ್ನೆಲ್ಲಾ ಸಾಮರ್ಥ್ಯ ಹಾಕಲು ಯೋಚಿಸಿದ್ದು, ಅದು ಈಡೇರಿತು’ ಎಂದು 21 ವರ್ಷ ವಯಸ್ಸಿನ ಕೆಬಿನಾಟ್ಶಿಪಿ ಪ್ರತಿಕ್ರಿಯಿಸಿದರು.

ಅಮೆರಿಕ ತಂಡ ಕೂದಲೆಳೆ ಅಂತರದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದೆಹಾಕಿ ಬೆಳ್ಳಿ ಗೆದ್ದಿತು. ಗಡಿಯಾರದಲ್ಲಿ ಎರಡೂ ತಂಡಗಳ ಕಾಲ 2ನಿ:57.82 ಸೆ. ತೋರಿಸಿತು. ‘ಅಮೆರಿಕ ತಂಡಕ್ಕೆ ಚಿನ್ನ ತಂದುಕೊಡಲು ಆಗದ್ದಕ್ಕೆ ಸ್ವಲ್ಪ ನಿರಾಸೆಯಾಯಿತು’ ಎಂದು  ಮೊದಲ ಲೆಗ್‌ನಲ್ಲಿ ಓಡಿದ ರಾಯ್‌ ಬೆಂಜಮಿನ್ ಹೇಳಿದರು. ಅವರು ಈ ಕೂಟದ 400 ಮೀ. ಹರ್ಡಲ್ಸ್ ಚಿನ್ನ ಗೆದ್ದಿದ್ದರು.

ಆದರೆ ಅಮೆರಿಕದ 4x400 ಮೀ. ಮಹಿಳೆಯರ ರಿಲೇ ತಂಡ ತೇವವಾಗಿದ್ದ ಟ್ರ್ಯಾಕ್‌ನಲ್ಲಿ 3ನಿ.16.61 ಸೆ.ಗಳಲ್ಲಿ ಓಟ ಪೂರೈಸಿ ಚಿನ್ನ ಗೆದ್ದಿತು. 400 ಮೀ. ಚಾಂಪಿಯನ್ ಸಿಡ್ನಿ ಮೆಕ್‌ಲಾಗ್ಲಿನ್ ಲೆವ್ರೊನ್ ಆ್ಯಂಕರ್ ಲೆಗ್ ಓಡಿದರು. ಜಮೈಕಾ (3ನಿ:19.25 ಸೆ.) ಎರಡನೇ ಸ್ಥಾನ ಕಾಪಾಡಿಕೊಂಡು ಬೆಳ್ಳಿ ಗೆದ್ದಿತು. ನೆದರ್ಲೆಂಡ್ಸ್‌ (3ನಿ:20.18 ಸೆ) ಕಂಚಿನ ಪದಕ ಗಳಿಸಿತು.

ನಿಕೋಲಾಗೆ ಚಿನ್ನ:

ಆಸ್ಟ್ರೇಲಿಯಾದ ನಿಕೋಲಾ ಒಲಿಸ್ಲೇಗರ್ಸ್ ಅವರು ಮಹಿಳೆಯರ ಹೈಜಂಪ್‌ ಚಿನ್ನ ಗೆದ್ದರು. ಮಳೆಯಿಂದ ಈ ಸ್ಪರ್ಧೆಯ ಕೊನೆಯ ಸುತ್ತಿನ ಯತ್ನಕ್ಕೆ ಸ್ಪರ್ಧಿಗಳು ಸಾಕಷ್ಟು ಕಾಯಬೇಕಾಯಿತು.

ಎರಡು ಬಾರಿಯ ಒಲಿಂಪಿಕ್ ಬೆಳ್ಳಿ ವಿಜೇತೆಯಾಗಿರುವ ನಿಕೋಲಾ 2.00 ಮೀ. ಜಿಗಿದು ಮೊದಲಿಗರಾದರು. ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಉಕ್ರೇನ್‌ನ ಯರೊಸ್ಲಾವಾ ಮಹುಚಿಕಿ 2.02 ಮೀ. ಎತ್ತರಕ್ಕೆ ಜಿಗಿಯಲು ಉದ್ದೇಶಿಸಿದರೂ ವಿಫಲರಾದರು. ಪೋಲೆಂಡ್‌ನ ಮರಿಯಾ ಜೋಡ್ಜಿಕ್ (2.00) ಬೆಳ್ಳಿ ಗೆದ್ದರು. ಮಹುಚಿಕಿ ಅಂತಿಮವಾಗಿ ಸರ್ಬಿಯಾದ ಆ್ಯಂಜೆಲಿನಾ ಟೋಪಿಕ್ ಅವರೊಂದಿಗೆ  1.97 ಮೀ. ಜಿಗಿದು ಕಂಚಿನ ಪದಕ ಹಂಚಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.