
ಗುಮಿ (ದಕ್ಷಿಣ ಕೊರಿಯಾ): ಭಾರತದ ಅಗ್ರ ಹರ್ಡಲ್ಸ್ ಓಟಗಾರ್ತಿ ಜ್ಯೋತಿ ಯರ್‍ರಾಜಿ ಮತ್ತು ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆವೀರ ಅವಿನಾಶ್ ಸಾಬ್ಳೆ ಅವರು ಅತ್ಯಮೋಘ ಪ್ರದರ್ಶನ ನೀಡಿ, 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‌ನ ಮೂರನೇ ದಿನವಾದ ಗುರುವಾರ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ದಿನದ ಕೊನೆಗೆ ಮಹಿಳೆಯರ 4x400 ಮೀ. ರಿಲೇ ಓಟದಲ್ಲೂ ಬಂಗಾರದ ಪದಕ ಭಾರತದ ಪಾಲಾಯಿತು. ಭಾರತ ಒಂದೇ ದಿನ ಮೂರು ಚಿನ್ನ, ಎರಡು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದುಕೊಂಡು ಪ್ರಾಬಲ್ಯ ಮೆರೆಯಿತು.
ಪದಕ ಪಟ್ಟಿಯಲ್ಲಿ ಐದು ಚಿನ್ನ ಸೇರಿ 14 ಪದಕಗಳೊಂದಿಗೆ ಭಾರತವು ಎರಡನೇ ಸ್ಥಾನ ದಲ್ಲಿದೆ. 12 ಚಿನ್ನ ಸೇರಿದಂತೆ 21 ಪದಕಗಳೊಂದಿಗೆ ಚೀನಾ ಅಗ್ರಸ್ಥಾನದಲ್ಲಿದೆ.
ಜ್ಯೋತಿ 100 ಮೀ. ಹರ್ಡಲ್ಸ್‌ನಲ್ಲಿ ನೂತನ ಕೂಟ ದಾಖಲೆಯೊಡನೆ (12.96 ಸೆ) ಚಿನ್ನ ಗೆದ್ದರು. 13.04 ಸೆ.ಗಳ ಹಳೆಯ ದಾಖಲೆಯನ್ನು ಕಜಕಸ್ತಾನದ ಓಲ್ಗಾ ಶಿಶಿಗಿನಾ (1998ರಲ್ಲಿ) ಮತ್ತು ಸುನ್ ಯಾವಿಗಿ (2011ರಲ್ಲಿ) ಜಂಟಿಯಾಗಿ ಹೊಂದಿದ್ದರು.
ಜ್ಯೋತಿ 2023ರ ಆವೃತ್ತಿಯಲ್ಲೂ 13.09 ಸೆ.ಗಳ ಅವಧಿಯೊಡನೆ ಚಿನ್ನ ಗೆದಿದ್ದರು. ಆದರೆ ಅವರ ವೈಯಕ್ತಿಕ ಶ್ರೇಷ್ಠ ಅವಧಿ (12.78 ಸೆ.) ಇಂದಿನ ಕಾಲಾವಧಿಗಿಂತ ಉತ್ತಮವಾಗಿದೆ. ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದ ಜ್ಯೋತಿ, ಹಿಂದೆ ಈ ಕೂಟದಲ್ಲಿ ಹರ್ಡಲ್ಸ್ ಚಿನ್ನ ಉಳಿಸಿಕೊಂಡ ನಾಲ್ವರು ಅಥ್ಲೀಟ್‌ಗಳ ಸಾಲಿಗೆ ಸೇರಿದರು. ಜಪಾನ್‌ನ ಎಮಿ ಅಕಿಮೊಟೊ (1979, 1981, 1983), ಚೀನಾದ ಝಾಂಗ್ ಯು (1991, 93), ಸು ಯಿನ್‌ಪಿಂಗ್ (2003, 2005) ಮತ್ತು ಸುನ್ ಯಾವಿ (2009, 2011) ಈ ನಾಲ್ವರು.
3000 ಮೀ. ಸ್ಟೀಪಲ್‌ಚೇಸ್ ಓಟವನ್ನು ಸಾಬ್ಳೆ 8ನಿ.20.92 ಸೆ.ಗಳಲ್ಲಿ ಪೂರೈಸಿದರು. ಅವರು 2019ರ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿ ದ್ದರು. ಈ ಚಾಂಪಿಯನ್‌ಷಿಪ್‌ನ ಸ್ಟೀಪಲ್‌ಚೇಸ್ ನಲ್ಲಿ 36 ವರ್ಷಗಳ ನಂತರ ಚಿನ್ನ ಗೆದ್ದ ಗೌರವ ಸಾಬ್ಳೆ ಅವರದಾಯಿತು. ಈ ಹಿಂದೆ, 1989ರಲ್ಲಿ ದೀನಾ ರಾಮ್ ಕೊನೆಯ ಬಾರಿ ಸ್ಟೀಪಲ್‌ಚೇಸ್‌ನಲ್ಲಿ ಭಾರತದ ಪರ ಚಿನ್ನ ಗೆದಿದ್ದರು.
ಜಪಾನ್‌ನ ಯುತಾರೊ ನೀನೆ (8:24.41 ಸೆ.) ಬೆಳ್ಳಿ, ಕತಾರ್‌ನ ಝಕಾರಿಯಾ ಇಲಾಹ್ಲಾಮಿ (8:27.12 ಸೆ.) ಕಂಚಿನ ಪದಕ ಗೆದ್ದರು.
ಮಹಿಳೆಯರ 4x400 ಮೀ. ರಿಲೇ ಸ್ಪರ್ಧೆಯಲ್ಲಿ ಜಿಸ್ನಾ ಮ್ಯಾಥ್ಯೂ, ರೂಪಲ್ ಚೌಧರಿ, ಕುಂಜಾ ರಜಿತಾ ಮತ್ತು ಶುಭಾ ವೆಂಕಟೇಶನ್ ಅವರನ್ನು ಒಳಗೊಂಡ ಭಾರತದ 3ನಿ.34.18 ಸೆ.ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆಯಿತು. ಇದು ತಂಡದ ಈ ವರ್ಷದ ಉತ್ತಮ ಅವಧಿ. ವಿಯೆಟ್ನಾಮ್ (3:34.77) ಬೆಳ್ಳಿ ಗೆದ್ದರೆ, ಶ್ರೀಲಂಕಾ (3:36.67 ಸೆ.) ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಲಾಂಗ್‌ಜಂಪ್‌ನಲ್ಲಿ ಆನ್ಸಿ ಸೋಜನ್ (6.33 ಮೀ.) ಮತ್ತು ಶೈಲಿ ಸಿಂಗ್ (6.30 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ಇರಾನಿನ ರೀಹಾನೇಶ್ ಮೊಬಿನಿ ಅರನಿ ಅವರು 6.40 ಮೀ. ಜಿಗಿದು ಚಿನ್ನ ಗೆದ್ದರು.
ಜಯ್ ಕುಮಾರ್, ಧರ್ಮವೀರ ಚೌಧರಿ, ಮನು ಶಾಜಿ ಮತ್ತು ವಿಶಾಲ್ ಟಿ.ಕೆ. ಅವನ್ನು ಒಳಗೊಂಡ ಪುರುಷರ 4x400 ಮೀ. ರಿಲೇ ತಂಡ 3ನಿ.03.67 ಸೆ.ಗಳಲ್ಲಿ ಓಟ ಪೂರೈಸಿ ಬೆಳ್ಳಿ ಪದಕ ಪಡೆಯಿತು. ಇದು ತಂಡದ ಇದುವರೆಗಿನ ಉತ್ತಮ ಸಾಧನೆ ಎನಿಸಿತು. ಕತಾರ್ ತಂಡ (3:03.52) ಚಿನ್ನದ ಪದಕ ಗೆದ್ದರೆ, ಚೀನಾ (3:03.73 ಸೆ.) ಕಂಚಿನ ಪದಕ ಗಳಿಸಿತು.
ಬೆಳಿಗ್ಗೆ, ಪುರುಷರ 4x400 ಮೀ. ರಿಲೇ ತಂಡ, ದಿನದ ಅತ್ಯುತ್ತಮ ಕಾಲಾವಧಿಯಲ್ಲಿ ಓಡಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ರಿನ್ಸ್ ಜೋಸೆಫ್, ಧರ್ಮವೀರ್ ಚೌಧರಿ, ಮನು ತೆಕ್ಕಿನಲಿಲ್ ಶಾಜಿ ಮತ್ತು ಮೋಹಿತ್ ಕುಮಾರ್ ಅವರನ್ನು ಒಳಗೊಂಡ ತಂಡ 3ನಿ.06.28 ಸೆ.ಗಳಲ್ಲಿ ಗುರಿತಲುಪಿತು.
ಹೀಟ್ಸ್‌ನಲ್ಲಿ ಭಾರತ ತಂಡವು ಚೀನಾ (3:06.79 ಸೆ.) ಮತ್ತು ಆತಿಥೇಯ ದಕ್ಷಿಣ ಕೊರಿಯಾ (3:10.05 ಸೆ.) ತಂಡಗಳನ್ನು ಹಿಂದೆಹಾಕಿ ಅರ್ಹತೆ ಪಡೆಯಿತು. ಫೈನಲ್‌ನಲ್ಲಿ ಶ್ರೀಲಂಕಾ, ಚೀನಾ, ಕಜಕಸ್ತಾನವು ಭಾರತಕ್ಕೆ ಪೈಪೋಟಿ ನೀಡುವ ಸಾಧ್ಯತೆಯಿದೆ. ಲಂಕಾ ತಂಡ, ಈ ಓಟದಲ್ಲಿ ವರ್ಷದ ಉತ್ತಮ ಕಾಲಾವಧಿ (3:01.56 ಸೆ.) ದಾಖಲಿಸಿದೆ.
ಮಹಿಳೆಯರ 10,000 ಮೀ. ಓಟದಲ್ಲಿ ಭಾರತದ ಸಂಜೀವನಿ ಜಾಧವ್ ವರ್ಷದ ಉತ್ತಮ ಓಟ (33ನಿ.08.17ಸೆ.) ದಾಖಲಿಸಿದರೂ ಐದನೇ ಸ್ಥಾನ ಪಡೆಯಬೇಕಾಯಿತು. ಸೀಮಾ (33:08.23 ಸೆ.) ಆರನೇ ಸ್ಥಾನ ಪಡೆದರು.
ಕಜಕಸ್ತಾನದ ಡೇಯ್ಸಿ ಜೆಪ್ಕೇಮಿ (30:48.44) ಚಿನ್ನ ಗೆದ್ದುಕೊಂಡರೆ, ಜಪಾನ್‌ನ ರಿರಿರಕ್ ಹಿರೋನಿಕಾ (30:56.32) ಮತ್ತು ಮಿಕುನಿ ಯಡಾ (31:12.21) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.