
ಬೆಂಗಳೂರು: ಎರಡೂವರೆ ತಾಸಿನ ಜಿದ್ದಾಜಿದ್ದಿ ಹಣಾಹಣಿಯಲ್ಲಿ ರಿಷಭ್ ಅಗರವಾಲ್ ಸವಾಲು ಮೀರಿದ ಭಾರತದ ಶಶಿಕುಮಾರ್ ಮುಕುಂದ್ ಎಸ್‌ಕೆಎಮ್‌ಇ ಐಟಿಎಫ್ ಓಪನ್ ಟೆನಿಸ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಸೆಣಸಾಟದಲ್ಲಿಮಂಗಳವಾರ ಅಗ್ರಶ್ರೇಯಾಂಕದ ಶಶಿಕುಮಾರ್ ಅವರಿಗೆ5-7, 6-3, 6-3ರಿಂದ ಭಾರತದವರೇ ಆದ ರಿಷಭ್ ಎದುರು ಜಯ ಒಲಿಯಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಮತ್ತೊಂದು ಪಂದ್ಯದಲ್ಲಿ ನಿಶಾಂತ್ ದಬಾಸ್6-1, 7-6 (12-10)ರಿಂದ ಕರ್ನಾಟಕದ ಬಿ.ಆರ್. ನಿಕ್ಷೇಪ್ ಅವರಿಗೆ ಸೋಲುಣಿಸಿದರು.
ರಿಷಭ್ ಎದುರಿನ ಪಂದ್ಯದ ಮೊದಲ ಸೆಟ್‌ನ 11ನೇ ಗೇಮ್‌ನಲ್ಲಿ 25 ವರ್ಷದ ಶಶಿಕುಮಾರ್ ಸರ್ವ್ ಕಳೆದುಕೊಂಡರು. ದೀರ್ಘರ‍್ಯಾಲಿಗಳಿಂದ ಕೂಡಿದ್ದ ಗೇಮ್‌ಗಳಲ್ಲಿ ಉಭಯ ಆಟಗಾರರು ಬೆವರು ಹರಿಸಿದರು. ಕೇವಲ ಒಂದು ಪಾಯಿಂಟ್ ಮಾತ್ರ ಕೈಚೆಲ್ಲಿದ ರಿಷಭ್‌ಮೊದಲ ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನ ಆರಂಭದಲ್ಲಿ ಶಶಿಕುಮಾರ್ 4–1ರಿಂದ ಮುನ್ನಡೆದಾಗ ಆಟ ರಂಗೇರಿತು. ಆದರೆ ನಂತರದ ಎರಡು ಗೇಮ್‌ಗಳನ್ನು ಗೆದ್ದ ರಿಷಭ್ ತಿರುಗೇಟಿನ ಸೂಚನೆ ನೀಡಿದರು. ಎಂಟನೇ ಗೇಮ್‌ನಲ್ಲಿ ಶಶಿಕುಮಾರ್, ಎದುರಾಳಿಯ ಸರ್ವ್ ಮುರಿದರಲ್ಲದೆ, ಮುಂದಿನ ಹಂತದಲ್ಲಿ ಪಾರಮ್ಯ ಮೆರೆದು ಸೆಟ್ ಕೈವಶಮಾಡಿಕೊಂಡರು.
ಮೂರನೇ ಸೆಟ್‌ನಲ್ಲಿ 2–1ರ ಮೇಲುಗೈ ಪಡೆದ ರಿಷಭ್ ಪುಟಿದೇಳುವ ನಿರೀಕ್ಷೆ ಮೂಡಿಸಿದ್ದರು. ಆದರೆ ಸ್ವಯಂಕೃತ ತಪ್ಪುಗಳು ಅವರಿಗೆ ಮುಳುವಾದವು. ಸತತ ಐದು ಗೇಮ್‌ಗಳ ಬಲದೊಂದಿಗೆ ಮುನ್ನುಗ್ಗಿದ ಶಶಿಕುಮಾರ್ ಸೆಟ್ ಹಾಗೂ ಪಂದ್ಯ ಗೆದ್ದ ಸಂಭ್ರಮ ಆಚರಿಸಿದರು.
ಮೊದಲ ಸುತ್ತಿನ ಸಿಂಗಲ್ಸ್ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಭಾರತದ ದಲ್ವಿಂದರ್ ಸಿಂಗ್6-4, 6-4ರಿಂದ ಪೋಲೆಂಡ್‌ನ ಯಾನ್ ವೊಜ್‌ಸಿಕ್ ಎದುರು, ಪೋಲೆಂಡ್‌ನ ಮಾಕ್ಸ್ ಕಸ್ನಿವೊಸ್ಕಿ6-1, 6-4ರಿಂದ ಜರ್ಮನಿಯ ರಾಬರ್ಟ್ ಸ್ಟ್ರೊಂಬಾಸ್ ವಿರುದ್ಧ, ಅಭಿನವ್ ಸಂಜೀವ್ ಷಣ್ಮುಗಂ6-2, 6-1ರಿಂದ ತಥಾಗತ್ ಚರಂತಿಮಠ ಎದುರು ಗೆದ್ದು 16ರ ಘಟ್ಟಕ್ಕೆ ಲಗ್ಗೆಯಿಟ್ಟರು.
ಕ್ವಾರ್ಟರ್‌ಫೈನಲ್‌ಗೆ ಸೂರಜ್– ಅರ್ನಾವ್: ಕರ್ನಾಟಕದ ಸೂರಜ್ ಆರ್. ಪ್ರಬೋಧ್ ಹಾಗೂ ಅರ್ನಾವ್ ಪತಂಗೆ ಜೋಡಿಯು ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ತಲುಪಿತು. 16ರ ಘಟ್ಟದ ಹಣಾಹಣಿಯಲ್ಲಿ ಭಾರತದ ಜೋಡಿಯು6-4, 4-6, 10-8ರಿಂದ ಗ್ರೇಟ್ ಬ್ರಿಟನ್‌ನ ಅಲೆಕ್ಸಿಸ್ ಕ್ಯಾಂಟರ್– ಕಜಕಸ್ತಾನದ ದೊಸ್ತನ್‌ಬೆಕ್ ತಷ್ಬುಲತೊವ್ ಅವರನ್ನು ಮಣಿಸಿದರು. ಪ್ರೀಕ್ವಾರ್ಟರ್‌ನ ಇನ್ನುಳಿದ ಪಂದ್ಯಗಳಲ್ಲಿ ಯೂಕಿ ಭಾಂಬ್ರಿ– ಸಾಕೇತ್ ಮೈನೇನಿ6-2, 6-1ರಿಂದ ಆದಿಲ್ ಕಲ್ಯಾಣಪುರ್ ಮತ್ತು ಕರಣ್ ಸಿಂಗ್ ಅವರಿಗೆ ಸೋಲುಣಿಸಿದರೆ, ಭಾರತದ ಪರೀಕ್ಷಿತ್ ಸೋಮಾನಿ– ಫ್ರಾನ್ಸ್‌ನ ಎಂಜೊ ವಾಲಾರ್ಟ್7-6 (2), 6-3ರಿಂದ ಜಪಾನ್‌ನ ದೈಸುಕ್ ಸುಮಿಜಾವ ಮತ್ತು ಫ್ರಾನ್ಸ್‌ನ ನಿಕೋಲಸ್ ಟೆಪ್‌ಮಾಕ್ ಎದುರು ಗೆದ್ದರು.
ಗ್ರೇಟ್ ಬ್ರಿಟನ್‌ನ ಜೂಲಿಯನ್ ಕಾಶ್– ಭಾರತದ ಅರ್ಜುನ್ ಖಾಡೆ, ಭಾರತದ ಪಾರಸ್ ದಹಿಯಾ– ಜಗಮೀತ್ ಸಿಂಗ್, ಶಶಿಕುಮಾರ್ ಮುಕುಂದ್–ವಿಷ್ಣುವರ್ಧನ್, ಅನಿರುದ್ಧ ಚಂದ್ರಶೇಖರ್– ವಿನಾಯಕ್ ಶರ್ಮಾ ಕಜಾ, ಫ್ರಾನ್ಸ್‌ನ ಕಾನ್‌ಸ್ಟಂಟೈನ್ ಬಿಟ್ಟೌನ್ ಕೌಜ್‌ಮೈನ್– ಭಾರತದ ಎಸ್.ಡಿ. ಪ್ರಜ್ವಲ್ ದೇವ್ ಕೂಡ ಡಬಲ್ಸ್ ವಿಭಾಗದಲ್ಲಿ ಎಂಟರಘಟ್ಟ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.