ADVERTISEMENT

ಅಮೆಜಾನ್ ಅಲೆಕ್ಸಾಗೆ ಅಮಿತಾಬ್‌ ಬಚ್ಚನ್ ಧ್ವನಿ; ಭಾರತದಲ್ಲಿ ಮೊಟ್ಟ ಮೊದಲ ಪ್ರಯತ್ನ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 8:42 IST
Last Updated 14 ಸೆಪ್ಟೆಂಬರ್ 2020, 8:42 IST
ನಟ ಅಮಿತಾಬ್‌ ಬಚ್ಚನ್‌ ಮತ್ತು ಅಮೆಜಾನ್‌ನ ಅಲೆಕ್ಸಾ
ನಟ ಅಮಿತಾಬ್‌ ಬಚ್ಚನ್‌ ಮತ್ತು ಅಮೆಜಾನ್‌ನ ಅಲೆಕ್ಸಾ   

ಶೀಘ್ರದಲ್ಲೇ ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಧ್ವನಿಯು ಅಮೆಜಾನ್‌ನ 'ಅಲೆಕ್ಸಾ'ದಲ್ಲಿ ಕೇಳಲಿದೆ. ಡಿಜಿಟಲ್‌ ವಾಯ್ಸ್‌ ಅಸಿಸ್ಟಂಟ್‌ ಅಲೆಕ್ಸಾದಲ್ಲಿ ಇದೇ ಮೊದಲ ಬಾರಿಗೆ ಭಾರತದ ಸೆಲೆಬ್ರಿಟಿಯೊಬ್ಬರ ಧ್ವನಿ ಕೇಳಿ ಬರಲಿದೆ.

ಭಾರತದಲ್ಲಿ ಅಲೆಕ್ಸಾ 'ಬಚ್ಚನ್' ಅವರ ಧ್ವನಿಯಲ್ಲಿ ಹವಾಮಾನ ಸೂಚನೆಗಳು, ಶಾಯರಿಗಳು (ಉರ್ದು ಕವನಗಳು), ಸ್ಫೂರ್ತಿದಾಯಕ ಸಂದೇಶಗಳು, ಜೋಕ್ಸ್‌,...ಮತ್ತಷ್ಟು ನೀಡಲಿದೆ. ಪಾವತಿ ಮಾಡಿ ಪಡೆಯಬಹುದಾದ ಸೇವೆಯ ರೂಪದಲ್ಲಿ 2021ಕ್ಕೆ ಇದನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಆದರೆ, ಅಲೆಕ್ಸಾ ಸಂಪರ್ಕಿತ ಸಾಧನಗಳಲ್ಲಿ 'ಅಲೆಕ್ಸಾ, ಸೇ ಹೆಲೊ ಟು ಮಿ.ಅಮಿತಾಬ್‌ ಬಚ್ಚನ್' ಎಂದು ಹೇಳುವ ಮೂಲಕ ಅಮಿತಾಬ್‌ ಧ್ವನಿಯ ಅನುಭವ ಪಡೆಯಬಹುದು.

'ಹೊಸತನಕ್ಕೆ ಅಳವಡಿಸಿಕೊಳ್ಳಲು ತಂತ್ರಜ್ಞಾನ ಸದಾ ನನಗೆ ಅವಕಾಶ ನೀಡಿದೆ. ಸಿನಿಮಾಗಳಲ್ಲಾಗಲಿ, ಟಿವಿ ಕಾರ್ಯಕ್ರಮಗಳು, ಪಾಡ್‌ಕಾಸ್ಟ್‌ಗಳು ಹಾಗೂ ಈಗ, ಅಮೆಜಾನ್‌ ಮತ್ತು ಅಲೆಕ್ಸಾ ಜೊತೆಗಿನ ಒಪ್ಪಂದ ಮೂಲಕ ಧ್ವನಿಯ ಅನುಭವ ರೂಪಿಸಲು ಉತ್ಸುಕನಾಗಿದ್ದೇನೆ...' ಎಂದು ಅಮಿತಾಬ್‌ ಬಚ್ಚನ್‌ ಪ್ರತಿಕ್ರಿಯಿಸಿರುವುದಾಗಿ ಗ್ಯಾಡ್ಜೆಟ್ಸ್‌ 360 ವರದಿ ಮಾಡಿದೆ.

ADVERTISEMENT

ಅಲೆಕ್ಸಾಗೆ ಧ್ವನಿಯಾಗಿರುವ ಭಾರತದ ಮೊದಲ ಸೆಲೆಬ್ರಿಟಿ ಅಮಿತಾಬ್‌. ಆದರೆ, ಜಗತ್ತಿನಲ್ಲಿ ಮೊದಲ ಬಾರಿಗೆ ಅಲೆಕ್ಸಾಗೆ ಧ್ವನಿಯಾಗಿರುವುದು ಅಮೆರಿಕದ ನಟ ಸ್ಯಾಮುಲ್‌ ಎಲ್‌. ಜಾಕ್ಸನ್‌. ಅವರ ಧ್ವನಿ ಅಮೆರಿಕನ್ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ. ಅಮಿತಾಬ್‌ ಬಚ್ಚನ್‌ ಅವರ ಅಲೆಕ್ಸಾ ಭಾರತಕ್ಕೆ ಸೀಮಿತವಾಗಲಿದೆ ಹಾಗೂ ಮೊದಲಿಗೆ ಹಿಂದಿಯಲ್ಲಿ ಮಾತನಾಡಲಿದ್ದಾರೆ ಎಂದು ಟ್ವೀಟ್‌ಗಳಿಂದ ತಿಳಿದು ಬಂದಿದೆ.

ಅಮೆಜಾನ್‌ ಇಂಡಿಯಾ ಮುಖ್ಯಸ್ಥ ಅಮಿತ್‌ ಅಗರ್‌ವಾಲ್‌, 'ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಲೆಕ್ಸಾ ಸೆಲೆಬ್ರಿಟಿ ಧ್ವನಿಯ ಅನುಭವ ನೀಡಲಿದೆ. ಸುಳಿವು: ರಿಶ್ತೆ ಮೇ ತೋ ಹಮ್‌ ತುಮ್ಹಾರೆ ಬಾಪ್‌ ಲಗ್ತೆ ಹೇ, ನಾಮ್‌ ಹೇ...- ಯಾವುದೇ ಊಹೆ?' ಎಂದು ಟ್ವೀಟಿಸಿದ್ದಾರೆ.

ಅಮೆಜಾನ್‌ ಇಕೊ ಸಾಧನಗಳು, ಫೈರ್‌ ಟಿವಿ ಸ್ಟಿಕ್‌, ಕೆಲವು ಫೋನ್‌ಗಳು, ಬ್ಲೂಟೂಥ್‌ ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ವಾಚ್‌ಗಳು ಹಾಗೂ ಟಿವಿಗಳಲ್ಲಿ ಅಲೆಕ್ಸಾ ಲಭ್ಯವಿದೆ. ಅಲೆಕ್ಸಾ ಅಥವಾ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಅಮೆಜಾನ್‌ ಆ್ಯಪ್‌ನಲ್ಲೂ ಅಲೆಕ್ಸಾ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.