ADVERTISEMENT

ಬೆಂಗಳೂರಿನಲ್ಲಿ ಆ್ಯಪಲ್‌ 'ಐಫೋನ್‌ ಎಸ್‌ಇ 2020' ಫೋನ್‌ಗಳ ತಯಾರಿಕೆ ಆರಂಭ

ಏಜೆನ್ಸೀಸ್
Published 24 ಆಗಸ್ಟ್ 2020, 11:58 IST
Last Updated 24 ಆಗಸ್ಟ್ 2020, 11:58 IST
ಐಫೋನ್‌ ಎಸ್‌ಇ (2020)
ಐಫೋನ್‌ ಎಸ್‌ಇ (2020)   

ಬೆಂಗಳೂರು: ಆ್ಯಪಲ್‌ನ 'ಐಫೋನ್‌ ಎಸ್‌ಇ (2020)' ಮಾದರಿಯ ಸ್ಮಾರ್ಟ್‌ಫೋನ್‌ ಜೋಡಿಸುವ (ಅಸೆಂಬ್ಲಿಂಗ್) ಕಾರ್ಯಾಚರಣೆಗೆ ವಿಸ್ಟ್ರನ್‌ ಕಂಪನಿ ಬೆಂಗಳೂರಿನಲ್ಲಿ ಚಾಲನೆ ನೀಡಿದೆ. ಈ ಮೂಲಕ ಭಾರತದಲ್ಲಿ ಐಫೋನ್‌ ಹೊಸ ಮಾದರಿ ತಯಾರಿಕೆ ಆರಂಭವಾದಂತಾಗಿದೆ. ಶೀಘ್ರದಲ್ಲಿಯೇ ದೇಶದ ರಿಟೇಲ್‌ ಮಾರಾಟ ಮಳಿಗೆಗಳು ಹಾಗೂ ಆನ್‌ಲೈನ್‌ನಲ್ಲಿ ಫೋನ್‌ ಖರೀದಿಗೆ ಸಿಗಲಿದೆ.

ತೈವಾನ್‌ ಮೂಲದ ವಿಸ್ಟ್ರನ್‌ ಕಂಪನಿ ಆ್ಯಪಲ್‌ ಫೋನ್‌ಗಳನ್ನು ಸಿದ್ಧಪಡಿಸುತ್ತಿದೆ. 2017ರಲ್ಲಿ ಮೊದಲ ಬಾರಿಗೆ ವಿಸ್ಟ್ರನ್‌ ಐಫೋನ್‌ಗಳ ಜೋಡಿಸುವ ಕಾರ್ಯಾಚರಣೆ ನಡೆಸಿತ್ತು. ಭಾರತದಲ್ಲಿ ಐಫೋನ್‌ XR ಮಾದರಿಯ ಫೋನ್‌ಗಳನ್ನು ಫಾಕ್ಸ್‌ಕಾನ್‌ ಕಂಪನಿ ಸಿದ್ಧಪಡಿಸುತ್ತಿದೆ.

ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿರುವ ಭಾರತದಲ್ಲಿ ಐಫೋನ್‌ ಎಸ್‌ಇ ಮಾದರಿ ತಯಾರಿಕೆಗೆ ಚಾಲನೆ ನೀಡುವ ಮೂಲಕ ಆ್ಯಪಲ್‌ ದೇಶದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗಿದೆ. ವಿದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವ ಸ್ಮಾರ್ಟ್‌ಫೋನ್‌ಗೆ ಸರ್ಕಾರ ಶೇ 20ರಷ್ಟು ತೆರಿಗೆ ವಿಧಿಸುತ್ತಿದ್ದು, ಸ್ಥಳೀಯವಾಗಿ ಬಿಡಿ ಭಾಗಗಳನ್ನು ಜೋಡಿಸಿ ಫೋನ್‌ ಸಿದ್ಧಪಡಿಸುವ ಮೂಲಕ ಆ್ಯಪಲ್‌ ಕಂಪನಿ ತೆರಿಗೆ ಉಳಿಸಬಹುದಾಗಿದೆ.

ADVERTISEMENT

ಆಪಲ್‌ನ ಐಫೋನ್‌ ಹೊಸ ಮಾದರಿಗಳ ಪೈಕಿ ಕೈಗೆಟುಕುವ ಬೆಲೆಯ ಫೋನ್‌ 'ಐಫೋನ್‌ ಎಸ್‌ಇ (2020)'. ಐಫೋನ್‌ 8ರ ರೀತಿಯಲ್ಲಿರುವ ವಿನ್ಯಾಸ ಹಾಗೂ ದುಬಾರಿ ಬೆಲೆಯ ಐಫೋನ್‌ 11ರಲ್ಲಿರುವ ಬಹುತೇಕ ಗುಣಲಕ್ಷಣಗಳನ್ನು ಎಸ್‌ಇ (2020) ಫೋನ್‌ ಒಳಗೊಂಡಿದೆ. ಅದರ ಆರಂಭಿಕ ಬೆಲೆ ₹42,500 ನಿಗದಿಯಾಗಿದೆ.

ಐಫೋನ್‌ 11 ಮತ್ತು ಐಫೋನ್‌ 11 ಪ್ರೊ ಮ್ಯಾಕ್ಸ್‌ನಲ್ಲಿ ಬಳಸಿರುವ ಎ13 ಪ್ರೊಸೆಸರ್‌ನ್ನು ಎಸ್‌ಇ ಮಾದರಿಯ ಫೋನ್‌ಗಳಲ್ಲಿಯೂ ಅಳವಡಿಸಲಾಗಿದೆ. ಹಿಂಬದಿಯಲ್ಲಿ ಒಂದೇ ಕ್ಯಾಮೆರಾ ಇದೆ ಹಾಗೂ ವೈರ್‌ಲೆಸ್‌ ಚಾರ್ಜಿಂಗ್‌ ಆಯ್ಕೆ ಒಳಗೊಂಡಿದೆ.

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆ್ಯಪಲ್‌ ಕೇವಲ ಶೇ 2ರಷ್ಟು ಪಾಲು ಹೊಂದಿದೆ. ದೇಶದಲ್ಲಿ ಆ್ಯಪಲ್‌ ಕಂಪನಿ ಫ್ಲ್ಯಾಗ್‌ಶಿಪ್‌ ಸ್ಟೋರ್‌ ಹಾಗೂ ಆನ್‌ಲೈನ್‌ ಸ್ಟೋರ್‌ ಆರಂಭಿಸುವ ಪ್ರಯತ್ನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.