ADVERTISEMENT

ಭಾರತದಲ್ಲಿ ಐಫೋನ್‌–12ರ ಬಿಡಿಭಾಗ ಜೋಡಣೆ

ಪಿಟಿಐ
Published 11 ಮಾರ್ಚ್ 2021, 20:45 IST
Last Updated 11 ಮಾರ್ಚ್ 2021, 20:45 IST
ಆ್ಯಪಲ್‌ ಮೊಬೈಲ್ (ಸಾಂದರ್ಭಿಕ ಚಿತ್ರ)
ಆ್ಯಪಲ್‌ ಮೊಬೈಲ್ (ಸಾಂದರ್ಭಿಕ ಚಿತ್ರ)   

ನವದೆಹಲಿ: ಆ್ಯಪಲ್‌ ಕಂಪನಿಯು ಐಫೋನ್‌–12ರ ಬಿಡಿಭಾಗಗಳ ಜೋಡಣೆ ಕೆಲಸವನ್ನು ಭಾರತದಲ್ಲೇ ಮಾಡಲು ಮುಂದಡಿ ಇರಿಸಿದೆ. ಯಾವ ಕಂಪನಿಯ ಮೂಲಕ ಐಫೋನ್‌–12 ಬಿಡಿಭಾಗಗಳ ಜೋಡಣೆ ಕೆಲಸ ನಡೆಯಲಿದೆ ಎಂಬುದನ್ನು ಆ್ಯಪಲ್‌ ತಿಳಿಸಿಲ್ಲ. ಫಾಕ್ಸ್‌ಕಾನ್‌ ಕಂಪನಿಯು ಬಿಡಿಭಾಗಗಳ ಜೋಡಣೆ ಮಾಡಲಿದೆ ಎಂದು ಮೂಲವೊಂದು ಹೇಳಿದೆ.

ಐಫೋನ್‌ ಎಸ್‌ಇ, ಐಫೋನ್‌ 10ಆರ್‌ ಮತ್ತು ಐಫೋನ್‌ 11 ಮಾದರಿಗಳನ್ನು ತಯಾರಿಸಲು ಆ್ಯಪಲ್‌ ಕಂಪನಿಯು ಫಾಕ್ಸ್‌ಕಾನ್‌, ವಿಸ್ಟ್ರಾನ್‌ನಂತಹ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ಆ್ಯಪಲ್‌ ಕಂಪನಿಯು ಐಫೋನ್‌ ಎಸ್‌ಇ ಸ್ಮಾರ್ಟ್‌ಫೋನ್‌ ಮೂಲಕ 2017ರಲ್ಲಿ ಭಾರತದಲ್ಲಿ ತಯಾರಿಕೆಗೆ ಚಾಲನೆ ನೀಡಿದೆ. ‘ಭಾರತವನ್ನು ಮೊಬೈಲ್‌ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಜಾಗತಿಕ ಕೇಂದ್ರವಾಗಿಸುವ ನಮ್ಮ ಪ್ರಯತ್ನವು ಜಗತ್ತಿನ ಗಮನ ಸೆಳೆದಿರುವುದನ್ನು ನೋಡಲು ಖುಷಿಯಾಗುತ್ತಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ. ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.