ADVERTISEMENT

ಮುಟ್ಟಿನ ಪ್ಯಾಡ್‌ ವಿಲೇವಾರಿ ಹೇಗೆ?

ಡಾ.ಪ್ರಿಯಾಂಕ ಎಂ.ಜಿ.
Published 18 ಜೂನ್ 2021, 19:30 IST
Last Updated 18 ಜೂನ್ 2021, 19:30 IST
ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ (ಇನ್‌ಸೈನ್‌ರೇಟರ್ಸ್‌)
ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ (ಇನ್‌ಸೈನ್‌ರೇಟರ್ಸ್‌)   

ಸಾಮಾನ್ಯವಾಗಿ ಈ ಋತುಸ್ರಾವ ಎನ್ನುವುದು ಪ್ರತಿಯೊಬ್ಬ ಮಹಿಳೆಯರಿಗೂ ವಿಭಿನ್ನವಾಗಿರುತ್ತದೆ. ಋತುಚಕ್ರದ ಸಂದರ್ಭದಲ್ಲಿ ಆಗಾಗ ಸ್ಯಾನಿಟರಿ ನ್ಯಾಪ್‌ಕಿನ್‌ ಅನ್ನು ಬದಲಾಯಿಸುತ್ತಾ ಇರಬೇಕು. ಈಗ ಈ ನ್ಯಾಪ್‌ಕಿನ್‌ಗಳು ಕೈಗೆಟಕುವ ದರದಲ್ಲಿ ಕೂಡ ಲಭ್ಯ. ಹೀಗಾಗಿ ಈ ದಿನಗಳಲ್ಲಿ ಇದನ್ನು ಬಳಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಅದನ್ನು ಬಳಸಿದ ನಂತರ ವಿಲೇವಾರಿ ಮಾಡುತ್ತಿರುವ ರೀತಿ ಮಾತ್ರ ಪರಿಸರಕ್ಕೆ ಅಪಾಯಕಾರಿ ಎನಿಸಿದೆ. ಇದರ ಸಾಲಿಗೆ ಮಕ್ಕಳ ಡೈಪರ್, ಮಾಸ್ಕ್‌, ಕಾಂಡೋಮ್, ಟ್ಯಾಂಪನ್‌ಗಳ ವಿಲೇವಾರಿ ಇಡೀ ಜಗತ್ತಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಅದರಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ಅದರಿಂದ ವಿಘಟನೆಗೊಳ್ಳದೆ ಪ್ರಕೃತಿಗೆ ನೇರವಾಗಿ ಬಿಸಾಡುತ್ತಿರುವುದರಿಂದ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.

ಭಾರತದಲ್ಲಿ ಘನತ್ಯಾಜ್ಯ ಉತ್ಪಾದನೆಯು ವರ್ಷಕ್ಕೆ 63 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 44 ದಶಲಕ್ಷ ಕೆಜಿ ನ್ಯಾಪ್‌ಕಿನ್‌, ಮುಟ್ಟಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಒಂದು ಸ್ಯಾನಿಟರಿ ಪ್ಯಾಡ್ ಮಣ್ಣಿನಲ್ಲಿ ಕರಗಲು ಸುಮಾರು 500ರಿಂದ 800 ವರ್ಷಗಳು ಬೇಕು. ಏಕೆಂದರೆ ಈ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಅಂಶ ಇರುವುದರಿಂದ ಮಣ್ಣಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೇ ಹೆಚ್ಚಿನ ಮಹಿಳೆಯರು ತಾವು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಘನತ್ಯಾಜ್ಯ ಅಥವಾ ಕಸದ ತೊಟ್ಟಿಯಲ್ಲಿ ವಿಲೇವಾರಿ ಮಾಡುತ್ತಾರೆ. ಅದು ಅಂತಿಮವಾಗಿ ಘನತ್ಯಾಜ್ಯಗಳ ಭಾಗವಾಗುತ್ತದೆ.

ಸುಡುವ ಯಂತ್ರ
ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಭಾರತದಲ್ಲಿಯೇ ಸ್ಯಾನಿಟರಿ ಪ್ಯಾಡ್ ವಿಲೇವಾರಿಗೊಂದು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇದೇ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ (ಇನ್‌ಸೈನ್‌ರೇಟರ್ಸ್‌). ಆಲ್ಫಾ ಥರ್ಮ್, ಸನ್‌ಶೈನ್ ಟೆಕ್ನೋ ಸಿಸ್ಟಮ್ಸ್, ಸುವಿಧಾ 360, ಬೆಲ್ಲಾ ಎ50.. ಹೀಗೆ ನಾನಾ ಬ್ರ್ಯಾಂಡ್‌ಗಳ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯ. ನಮ್ಮ ಅವಶ್ಯಕತೆಗಳ ಅನುಸಾರವಾಗಿ ಅಂದರೆ ಐದು ಪ್ಯಾಡ್‌ನಿಂದ 50, 100, 200.. ಹೀಗೆ ಎಷ್ಟು ಪ್ಯಾಡ್‌ಗಳನ್ನು ಬೇಕಾದರೂ ಸುಡುವ ವಿದ್ಯುತ್ ಮತ್ತು ಬ್ಯಾಟರಿ ಚಾಲಿತ ಯಂತ್ರಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಯಂತ್ರಗಳು ಬೆಂಗಳೂರಲ್ಲದೇ, ಇತರ ನಗರಗಳಲ್ಲೂ ದೊರೆಯುತ್ತವೆ. ಇದಕ್ಕೆ ₹ 6 ಸಾವಿರದಿಂದ ಹಿಡಿದು ಒಂದು ಲಕ್ಷದವರೆಗೂ ಯಂತ್ರದ ಸಾಮರ್ಥ್ಯದ ಮೇಲೆ ಬೆಲೆ ನಿಗದಿಯಾಗಿದೆ. ಈ ಯಂತ್ರವನ್ನು ನಮ್ಮ ವೈಯಕ್ತಿಕ ಅಥವಾ ದೊಡ್ಡ ಪ್ರಮಾಣದಲ್ಲಿಯೂ ಈ ಯಂತ್ರದ ಬಳಕೆ ಮಾಡಬಹುದಾಗಿದೆ.

ADVERTISEMENT

ವಿಸರ್ಜನೆ ಹೇಗೆ?
ನಾವು ವಿದ್ಯುತ್ ಯಂತ್ರವನ್ನು ಬಳಸುವುದಾದರೆ, ಪ್ಯಾಡ್ ಹಾಕುವ ಮುನ್ನ 5–10 ನಿಮಿಷಗಳ ಮುಂಚೆ ಯಂತ್ರದ ಸ್ವಿಚ್ ಆನ್ ಮಾಡಬೇಕು. ನಂತರ ಪ್ಯಾಡ್‌ಗಳನ್ನು ಅದರಲ್ಲಿ ಹಾಕಿ ಬಾಗಿಲು ಮುಚ್ಚಿ ಯಂತ್ರದಲ್ಲಿನ ಕೆಂಪು ಬಟನ್ ಒತ್ತಿದರೆ ಸುಮಾರು 15 ನಿಮಿಷಗಳಲ್ಲಿ ಅದು ಸುಟ್ಟುಹೋಗುತ್ತದೆ. ಅದರ ಹೊಗೆ ಹೋಗಲು ಪ್ರತ್ಯೇಕ ಕೊಳವೆ ಇರುತ್ತದೆ. ಆ ಕೊಳವೆ ಮುಖಾಂತರ ಕೆಟ್ಟ ಹೊಗೆ ಹೊರಹೋಗುತ್ತದೆ. ನಂತರ ಟ್ರೇಯಲ್ಲಿ ಬೂದಿ ಉಳಿಯುತ್ತದೆ. ಆ ಬೂದಿಯನ್ನು ಕಸದಲ್ಲಿ ಹಾಕಬೇಕು.

ಎಲ್ಲೆಲ್ಲಿ ಈ ಯಂತ್ರದ ಬಳಕೆ ಅಗತ್ಯವಿದೆ?
ಮನೆ, ಸರ್ಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ, ಮಹಿಳಾ ಹಾಸ್ಟೆಲ್‌ಗಳಲ್ಲಿ, ಮಾಲ್‌ಗಳಲ್ಲಿ, ಮುಖ್ಯವಾಗಿ ಮಹಿಳೆಯರು ಕೆಲಸ ಮಾಡುವ ಪ್ರತಿ ಸಂಸ್ಥೆಗಳಲ್ಲಿ ಈ ಯಂತ್ರವನ್ನು ಕಡ್ಡಾಯಗೊಳಿಸಿದರೆ ಮಾತ್ರ ನಾವು ಒಂದಿಷ್ಟು ಮಾಲಿನ್ಯದ ನಿಯಂತ್ರಣ ಮಾಡಬಹುದು. ಮಹಿಳೆಯರು ಶೌಚಾಲಯಕ್ಕೆ ಹೋದಾಗ, ತಮ್ಮ ಮುಟ್ಟಿನ ಪ್ಯಾಡ್‌ಗಳನ್ನು ಒಂದು ಕಾಗದದಲ್ಲಿ ಸುತ್ತಿ ಯಂತ್ರದ ಬಾಯಲ್ಲಿ ಹಾಕಿದರೆ ಸಾಕು ಅದು ತುಂಬಿದಾಗ ಶೌಚಾಲಯದ ನಿರ್ವಾಹಕರು ದಿನದ ಕೊನೆಯಲ್ಲಿ ಯಂತ್ರವನ್ನು ಆನ್ ಮಾಡಿ ಸುಡಬಹುದು. ದಿನದ ಕೊನೆಯಲ್ಲಿ ಈ ಕೆಲಸ ಜರಗುವುದರಿಂದ ವಿದ್ಯುತ್ ಕೂಡ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.