ADVERTISEMENT

ಒನ್‌ಪ್ಲಸ್‌ 9: ನೈಜ ಫೋಟೊ, ದೀರ್ಘ ಬ್ಯಾಟರಿ ಬಾಳಿಕೆ

ವಿಶ್ವನಾಥ ಎಸ್.
Published 4 ಮೇ 2021, 19:30 IST
Last Updated 4 ಮೇ 2021, 19:30 IST
ಒನ್‌ಪ್ಲಸ್‌ 9
ಒನ್‌ಪ್ಲಸ್‌ 9   

ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಒನ್‌ಪ್ಲಸ್‌ ಕಂಪನಿಯು ಈಚೆಗಷ್ಟೇ ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ನೈಜ ಫೋಟೊ, ವೇಗದ ಕಾರ್ಯಾಚರಣೆ, ದೀರ್ಘ ಬ್ಯಾಟರಿ ಬಾಳಿಕೆ, ವಿನ್ಯಾಸ ಹೀಗೆ ಎಲ್ಲಾ ದೃಷ್ಟಿಯಿಂದಲೂ ಕಂಪನಿಯ ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಭಿನ್ನವಾಗಿದೆ.

ವಿನ್ಯಾಸ: ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್‌ ವಿನ್ಯಾಸವು ಆಕರ್ಷಕವಾಗಿದೆ. ಮುಂಭಾಗದಿಂದ ನೋಡಿದರೆ ತಕ್ಷಣಕ್ಕೆ ಒನ್‌ಪ್ಲಸ್‌ 8ಟಿ ರೀತಿಯಲ್ಲಿಯೇ ಕಾಣಿಸುತ್ತದೆ. ಫ್ಲ್ಯಾಟ್‌ ಸ್ಕ್ರೀನ್‌ ಡಿಸ್‌ಪ್ಲೇ, ಪಂಚ್‌ ಹೋಲ್ ಸೆಲ್ಫಿ ಕ್ಯಾಮೆರಾ ಎರಡರಲ್ಲೂ ಒಂದೇ ರೀತಿಯಲ್ಲಿ ಇರುವುದರಿಂದ ಎರಡು ಹ್ಯಾಂಡ್‌ಸೆಟ್‌ಗಳ ಮಧ್ಯೆ ವ್ಯತ್ಯಾಸ ಕಾಣಿಸುವುದಿಲ್ಲ. ಫೋನ್‌ನ ಹಿಂಭಾಗದಲ್ಲಿ ಕ್ಯಾಮೆರಾ ಸೆಟಪ್ ಭಿನ್ನವಾಗಿದೆ. ರೆಕ್ಟ್ಯಾಂಗಲ್‌ ಮಾದರಿಯಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ನೀಡಲಾಗಿದೆ. ಹೀಗಾಗಿ ಒನ್‌ಪ್ಲಸ್‌ 9 ಎಂದು ತಿಳಿಯುತ್ತದೆ. ಕಂಪನಿಯು ಹ್ಯಾಸಲ್‌ಬ್ಲಾಡ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನುವುದನ್ನು ತಿಳಿಯುವಂತೆ ಹೆಸರನ್ನೂ ಹಾಕಲಾಗಿದೆ.

ಈ ಸ್ಮಾರ್ಟ್‌ಫೋನ್‌ 6.55 ಇಂಚು ಅಮೊ ಎಲ್‌ಇಡಿ ಡಿಸ್‌ಪ್ಲೇ, ಪೂರ್ಣ ಪ್ರಮಾಣದ ಎಚ್‌ಡಿ+ ರೆಸಲ್ಯೂಷನ್‌ (1080X2400) ಹೊಂದಿದೆ. ಬಣ್ಣಗಳ ನಿಖರತೆ, ಆಟೊಮೆಟಿಕ್‌ ಬ್ರೈಟ್‌ನೆಸ್‌ ಕಂಟ್ರೋಲ್‌ನಲ್ಲಿಯೂ ಸುಧಾರಣೆ ಆಗಿದೆ.5ಜಿ ಬೆಂಬಲಿತ ಈ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರ್ಯಾಗನ್‌ 888 ಪ್ರೊಸೆಸರ್‌, ಆಂಡ್ರಾಯ್ಡ್‌11 ಒಎಸ್‌ಆಧಾರಿತ ಆಕ್ಸಿಜನ್‌ ಒಎಸ್‌ನಿಂದ ಕಾರ್ಯಾಚರಿಸುತ್ತದೆ. ಡಾಲ್ಬಿ ಅಟ್ಮಾಸ್‌ ಸ್ಪೀಕರ್‌ ಇರುವುದರಿಂದ ಧ್ವನಿ ಸ್ಪಷ್ಟವಾಗಿದೆ. ಗೇಮ್‌ ಆಡುವಾಗ ಮತ್ತು ವಿಡಿಯೊ ನೋಡುವಾಗ ಇದರ ನೈಜ ಅನುಭವ ಆಗುತ್ತದೆ.

ADVERTISEMENT

ಕ್ಯಾಮೆರಾ: ಈ ಹ್ಯಾಂಡ್‌ಸೆಟ್‌ನ ಹಿಂಬದಿಯಲ್ಲಿ 48+50+2 ಎಂಪಿ ಕ್ಯಾಮೆರಾ, ಮುಂಬದಿ 16ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಸಮಸ್ಯೆ ಇತ್ತು. ಝೂಮ್‌ ಮಾಡಿದಾಗ ಸ್ಪಷ್ಟತೆ ಇರುತ್ತಿರಲಿಲ್ಲ, ಮಂದ ಬೆಳಕಿನಲ್ಲಿ ತೆಗೆದ ಚಿತ್ರ ಅಷ್ಟೇನು ಚೆನ್ನಾಗಿ ಇರುತ್ತಿರಲಿಲ್ಲ. ಹೀಗಾಗಿ ಒನ್‌ಪ್ಲಸ್‌ 9ರಲ್ಲಿ ಕ್ಯಾಮೆರಾ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲುವೃತ್ತಿಪರ ಕ್ಯಾಮೆರಾ ತಯಾರಿಸುವ ಹ್ಯಾಸೆಲ್‌ಬ್ಲಾಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಚಿತ್ರಗಳು ಹೆಚ್ಚು ನೈಜ ಬಣ್ಣದಲ್ಲಿ ಮೂಡಿಬರುತ್ತವೆ. ಚಿತ್ರವನ್ನು ತೆಗೆದ ಬಳಿಕ ಝೂಮ್‌ ಮಾಡಿದರೆ ಸ್ಪಷ್ಟತೆಯಲ್ಲಿ ಯಾವುದೇ ಕೊರತೆ ಕಾಣಿಸುವುದಿಲ್ಲ. ಪೊರ್ಟ್ರೇಟ್‌ ಆಯ್ಕೆಯಲ್ಲಿಯೂ ಸಹಜವಾದ ಮೈಬಣ್ಣದಲ್ಲಿ ಚಿತ್ರ ಸೆರೆಯಾಗುತ್ತದೆ. ಈ ಹಿಂದಿನ ಹ್ಯಾಂಡ್‌ಸೆಟ್‌ಗಳಲ್ಲಿನೈಟ್‌ಸ್ಕೇಪ್‌ ಆಯ್ಕೆಯಲ್ಲಿ ಚಿತ್ರ ತೆಗೆಯುವಾಗ ಕ್ಲಿಕ್ ಮಾಡಿದ ಬಳಿಕ ಕೆಲಹೊತ್ತು ಮೊಬೈಲ್‌ ಅಲ್ಲಾಡಿಸದೇ ಹಾಗೆಯೇ ಹಿಡಿದಿರಬೇಕಿತ್ತು. ಇದರಲ್ಲಿಯೂ ಆ ಸಮಸ್ಯೆ ಇದೆ.

ಬ್ಯಾಟರಿ: 4,500 ಎಂಎಎಚ್‌ ಬ್ಯಾಟರಿ ಹೊಂದಿದ್ದು, 65ಟಿ ವಾರ್ಪ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ. 30 ನಿಮಿಷದಲ್ಲಿ ಪೂರ್ತಿ ಬ್ಯಾಟರಿ ಚಾರ್ಜ್ ಆಗುತ್ತದೆ. ಆಡಿಯೊ, ವಿಡಿಯೊ, ಸರ್ಫಿಂಗ್‌, ಚ್ಯಾಟ್‌, ಕಾಲ್‌ ಹೀಗೆ ಎಲ್ಲವನ್ನೂ ಬಳಸಿದರೆ ಬ್ಯಾಟರಿ ಒಂದು ದಿನ ಬಾಳಿಕೆ ಬರುತ್ತದೆ.

ಕೊರತೆ: ಕಾಲ್‌ ರೆಕಾರ್ಡಿಂಗ್‌ ಆಯ್ಕೆಯಲ್ಲಿ ಇರುವ ಸಮಸ್ಯೆಗೆ ಇಲ್ಲಿಯೂ ಪರಿಹಾರ ನೀಡಿಲ್ಲ. ಇನ್‌ಬಿಲ್ಟ್‌ ಆಗಿ ಕಾಲ್‌ ರೆಕಾರ್ಡಿಂಗ್‌ ಆಯ್ಕೆ ಇದೆ. ಕರೆ ಸ್ವೀಕರಿಸಿದ ಬಳಿಕವಷ್ಟೇ ರೆಕಾರ್ಡ್ ಆನ್‌ ಮಾಡಲು ಸಾಧ್ಯ. ಆಗ, ‘ನಿಮ್ಮ ಕರೆಯನ್ನು ಈಗ ರೆಕಾರ್ಡ್‌ ಮಾಡಲಾಗುತ್ತದೆ’ ಎನ್ನುವ ಧ್ವನಿ ಕೇಳಿಸುತ್ತದೆ. ಇದು ಕರೆ ಮಾಡಿದವರು ಮತ್ತು ಸ್ವೀಕರಿಸಿದವರು ಇಬ್ಬರಿಗೂ ಕೇಳಿಸುತ್ತದೆ.

ಒಟ್ಟಾರೆ ಹೇಳುವುದಾದರೆ, ವಿನ್ಯಾಸ, ಚಾರ್ಜಿಂಗ್‌, ಕ್ಯಾಮೆರಾ ಗುಣಮಟ್ಟ ಹೀಗೆ ಎಲ್ಲಾ ದೃಷ್ಟಿಯಿಂದಲೂ ಒನ್‌ಪ್ಲಸ್‌ 9 ಹ್ಯಾಂಡ್‌ಸೆಟ್‌ ಕಂಪನಿಯ ಈ ಹಿಂದಿನ ಎಲ್ಲಾ ಹ್ಯಾಂಡ್‌ಸೆಟ್‌ಗಳಿಗಿಂತಲೂ ಉತ್ತಮವಾಗಿದೆ.

ವೈಶಿಷ್ಟ್ಯ

ಪರದೆ: 6.55 ಇಂಚ್‌ ಫ್ಲ್ಯೂಯಿಡ್ ಅಮೊ ಎಲ್‌ಇಡಿ ಡಿಸ್‌ಪ್ಲೇ

ಒಎಸ್‌; ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್‌ ಒಎಸ್‌

ಪ್ರೊಸೆಸರ್; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 888

ಕ್ಯಾಮೆರಾ; 48+50+2 ಎಂಪಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ; 16ಎಂಪಿ

ಬ್ಯಾಟರಿ; 4,500 ಎಂಎಎಚ್‌

ಫೇಸ್‌ ಅನ್‌ಲಾಕ್‌, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್

ಬೆಲೆ: 8ಜಿಬಿ ರ್‍ಯಾಮ್‌+ 128 ಜಿಬಿ ಸ್ಟೊರೇಜ್‌; ₹49,999. 12 ಜಿಬಿ ರ್‍ಯಾಮ್‌+ 256 ಜಿಬಿ ಸ್ಟೊರೇಜ್‌; ₹54,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.