ADVERTISEMENT

ವಾಣಿಜ್ಯ ಉದ್ದೇಶಕ್ಕೆ ಪರ್ಫೆಕ್ಟ್‌: ಎಪ್ಸನ್‌ ಇಕೊ ಟ್ಯಾಂಕ್‌ ಎಲ್‌15160

ವಿಶ್ವನಾಥ ಎಸ್.
Published 31 ಡಿಸೆಂಬರ್ 2020, 10:29 IST
Last Updated 31 ಡಿಸೆಂಬರ್ 2020, 10:29 IST
ಎಪ್ಸನ್‌ ಎಲ್‌15160
ಎಪ್ಸನ್‌ ಎಲ್‌15160   

ಎಪ್ಸನ್‌ ಕಂಪನಿಯು ಪ್ರಿಂಟರ್‌ ಉದ್ಯಮದಲ್ಲಿ ತನ್ನದೇ ಆದ ಖ್ಯಾತಿ ಹೊಂದಿದೆ. ವಾಣಿಜ್ಯ ಉದ್ದೇಶದ ಪ್ರಿಂಟರ್‌ಗಳಲ್ಲಿ ಇಂಕ್‌ ಟ್ಯಾಂಕ್‌ ತಂತ್ರಜ್ಞಾನ ಪರಿಚಯಿಸಿದ ಮೊದಲ ಬ್ರ್ಯಾಂಡ್‌ ಇದಾಗಿದೆ. ತನ್ನ ಪ್ರತಿ ಮಾದರಿಯಲ್ಲಿಯೂ ಹಲವು ಸುಧಾರಣೆಗಳನ್ನು ಮಾಡುತ್ತಲೇ ಬರುತ್ತಿದೆ. ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ಆಲ್‌ಇನ್‌ ಒನ್‌ ಇಂಕ್‌ ಟ್ಯಾಂಕ್‌ ಪ್ರಿಂಟರ್‌ Epson EcoTank L15160 ಹಲವು ಆಯಾಮಗಳಲ್ಲಿ ವಾಣಿಜ್ಯ ಉದ್ದೇಶದ ಬಳಕೆಗೆ ಹೇಳಿ ಮಾಡಿಸಿದ್ದಾಗಿದೆ.

ಮೊದಲಿಗೆ, ಇದರಲ್ಲಿರುವ ಆಯ್ಕೆಗಳು, ಬಳಸಿರುವ ತಂತ್ರಜ್ಞಾನ, ಕಾರ್ಯಸಾಮರ್ಥ್ಯದ ಬಗ್ಗೆ ಕಂಪನಿ ಹೇಳಿರುವುದನ್ನು ಗಮನಿಸೋಣ. ಈ ಮಾದರಿಯು ಡ್ಯುಪ್ಲೆಕ್ಸ್ ಪ್ರಿಂಟ್‌, ಸ್ಕ್ಯಾನ್‌, ಕಾಪಿ, ಫ್ಯಾಕ್ಸ್‌ ವಿತ್‌ ಎಡಿಎಫ್‌ ಆಯ್ಕೆಗಳನ್ನು ಹೊಂದಿದೆ. ಇದರ ಗರಿಷ್ಠ ಪ್ರಿಂಟಿಂಗ್ ರೆಸಲ್ಯೂಷನ್‌ 4800X1200 ಡಿಪಿಐ. 2.4 ಗಿಗಾಹರ್ಟ್ಸ್‌ ವೈಫೈ, ಎಥರ್‌ನೆಟ್‌, ಯುಎಸ್‌ಬಿ 2.0 ಇದೆ. ವಿಂಡೋಸ್‌ ಮತ್ತು ಮ್ಯಾಕ್‌ ಒಎಸ್‌ಗೆ ಬೆಂಬಲಿಸುತ್ತದೆ. ಪ್ರಿಂಟ್‌ ಆಗುವಾಗ ಬರುವ ಶಬ್ಧವು 52 ಡೆಸಿಬಲ್ಸ್ ಇದೆ.‌

ಇದು ಮಧ್ಯಮ ಗಾತ್ರದ ಪ್ರಿಂಟರ್ ಆಗಿದ್ದು, ಬೆಲೆ ₹ 86,999 ಇದೆ. ಬಿಲ್ಟ್‌ ಇನ್‌ ಸ್ಕ್ಯಾನರ್‌ ಇದ್ದು, ಎ3 ಪ್ಲಸ್‌ ಗಾತ್ರದವರೆಗಿನ ಪೇಪರ್‌ ಸ್ಕ್ಯಾನ್‌ ಮಾಡಬಹುದು. ಅಲ್ಲದೆ, ಎ3 ಗಾತ್ರದ ಡಾಕ್ಯುಮೆಂಟ್‌ಗಳನ್ನು ಪ್ರಿಂಟ್‌ ಮತ್ತು ಫೊಟೊಕಾಪಿ (ಜರಾಕ್ಸ್) ಸಹ ಮಾಡಬಹುದು. ಟಚ್‌ ಸ್ಕ್ರೀನ್‌ ಮತ್ತು ಮತ್ತು ಬಟನ್‌ ಆಯ್ಕೆಗಳಿರುವುದರಿಂದ ಬಳಕೆ ಸುಲಭ.

ADVERTISEMENT

ಯುಎಸ್‌ಬಿ–2,0 ಪೋರ್ಟ್‌ ಇರುವುದರಿಂದ ಪೆನ್ ಡ್ರೈವ್ ಮೂಲಕ ನೇರವಾಗಿ ಡಾಕ್ಯುಮೆಂಟ್‌ ಮತ್ತು ಫೊಟೊಗಳನ್ನು ಪ್ರಿಂಟ್‌ ಮಾಡಬಹುದು. ಕಂಪ್ಯೂಟರ್‌ ಜತೆ ಸಂಪರ್ಕಿಸಲು ಡೇಟಾ ಕೇಬಲ್‌ ಇದೆ. ಸ್ಮಾರ್ಟ್‌ಫೋನ್‌ನಲ್ಲಿ Epson iPrint ಆ್ಯಪ್‌ ಬಳಸಿಯೂ ಫೊಟೊ ಮತ್ತು ಡಾಕ್ಯುಮೆಂಟ್‌ಗಳನ್ನು ನೇರವಾಗಿ ಪ್ರಿಂಟ್ ಮಾಡಬಹುದು. ರೂಟರ್‌ ಇಲ್ಲದೆಯೇ ಗರಿಷ್ಠ 8 ಸಾಧನಗಳನ್ನು ವೈಫೈ ಡೈರೆಕ್ಟ್‌ ಮೂಲಕ ಪ್ರಿಂಟರ್‌ನೊಂದಿಗೆ ಸಂಪರ್ಕಿಸಬಹುದಾಗಿದೆ. ಕಾರ್ಪೊರೇಟ್ ಆಫೀಸ್ ಬಳಕೆಗೆ ಈ ಆಯ್ಕೆ ಬಹು ಉಪಯುಕ್ತ. ಇಂಟರ್‌ನೆಟ್‌ ಸಂಪರ್ಕದ ಮೂಲಕ ರಿಮೋಟ್‌ ಪ್ರಿಂಟ್‌ ಡ್ರೈವರ್‌ ಬಳಸಿ ಎಲ್ಲಿಂದ ಬೇಕಿದ್ದರೂ ಪ್ರಿಂಟ್‌ ಮಾಡಬಹುದು. ಅದೇ ರೀತಿ, ಸ್ಕ್ಯಾನ್‌ ಮಾಡಿದ ಇಮೇಜ್‌ಗಳನ್ನು ಕ್ಲೌಡ್‌ ಸ್ಟೋರೇಜ್‌ಗೆ ಕಳುಹಿಸಬಹುದು.

ಲೇಸರ್‌ ಪ್ರಿಂಟರ್‌ಗೆ ಹೋಲಿಸಿದರೆ ಇಂಕ್‌ ಟ್ಯಾಂಕ್‌ ಪ್ರಿಂಟರ್‌ ಕಡಿಮೆ ಬೆಲೆಗೆ ಪ್ರಿಂಟ್‌ ತೆಗೆಯಬಹುದು. ಕಲರ್‌ ಪ್ರಿಂಟೌಟ್‌ ಒಂದಕ್ಕೆ 48 ಪೈಸೆ, ಬ್ಲಾಕ್‌ ಆ್ಯಂಡ್ ವೈಟ್‌ ಪ್ರಿಂಟೌಟ್ಗೆ 12 ಪೈಸೆ ಖರ್ಚು ಬೀಳುತ್ತದೆ. ಬ್ಲಾಕ್‌ ಆ್ಯಂಡ್ ವೈಟ್‌ ಇಂಕ್‌ ರಿಫಿಲ್‌ ಮಾಡಲು ₹ 899 ಹಾಗೂ ಕಲರ್‌ ಇಂಕ್‌ಗೆ ₹ 799 ತೆರಬೇಕು. ಒಂದು ಬಾರಿ ರಿಫಿಲ್‌ ಮಾಡಿದರೆ 6,000 ಕಾಪಿ ಕಲರ್‌ ಪ್ರಿಂಟ್‌ ಹಾಗೂ 7,500 ರವರೆಗೆ ಬ್ಲಾಕ್‌ ಆ್ಯಂಡ್‌ ವೈಟ್‌ ಪ್ರಿಂಟೌಟ್‌ ತೆಗೆಯಬಹುದು ಎಂದು ಕಂಪನಿ ತಿಳಿಸಿದೆ.

ಡ್ಯೂರಾ ಬ್ರೈಟ್‌ ಪಿಗ್ಮೆಂಟ್‌ ಇಂಕ್‌ ಮತ್ತು ವಾಟರ್‌ಪ್ರೂಫ್‌ ತಂತ್ರಜ್ಞಾನವನ್ನು ಈ ಪ್ರಿಂಟರ್‌ನಲ್ಲಿ ಬಳಸಲಾಗಿದೆ. ಪ್ರಿಸಿಶನ್‌ ಕೋರ್‌ ಹೀಟ್‌ಫ್ರೀ ತಂತ್ರಜ್ಞಾನ ಬಳಸಿರುವುದರಿಂದ ಕಡಿಮೆ ವಿದ್ಯುತ್‌ ಬಳಸುತ್ತದೆ. ಎಪ್ಸನ್‌ ಹೀಟ್‌ ಫ್ರೀ ತಂತ್ರಜ್ಞಾನ ಬಳಸಿರುವುದರಿಂದ ಇಂಕ್‌ ಅನ್ನು ಹೊರಸೂಸುವ ಪ್ರಕ್ರಿಯೆಗೆ ಹೀಟ್‌ ಅಗತ್ಯವಿಲ್ಲ. ತೀಕ್ಷ್ಣ, ಸ್ಪಷ್ಟ ಮತ್ತು ನೀರು ನಿರೋಧಕ ಗುಣಮಟ್ಟದ ಪ್ರಿಂಟ್‌ಗಾಗಿ ಹೊಸ 4 ಕಲರ್‌ ಪಿಗ್ಮೆಂಟ್ ಇಂಕ್‌ ಬಳಸಲಾಗಿದೆ. ಇದಕ್ಕೆ ಇಂಕ್‌ ಭರ್ತಿ ಮಾಡುವುದು ಬಹಳ ಸುಲಭ.

ಡ್ರಾಫ್ಟ್‌ ಪ್ರಿಂಟಿಂಗ್‌ ಆಯ್ಕೆಯಲ್ಲಿ ಪ್ರತಿ ಒಂದು ನಿಮಿಷಕ್ಕೆ 32 ಪುಟ ಹಾಗೂ ಸ್ಟ್ಯಾಂಡರ್ಡ್‌ ಪ್ರಿಂಟ್‌‌ ಆಯ್ಕೆಯಲ್ಲಿ ಪ್ರತಿ ಒಂದು ನಿಮಿಷಕ್ಕೆ 24 ಪುಟ ಪ್ರಿಂಟ್‌ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್‌ ಪ್ರಿಂಟ್‌ ಆಯ್ಕೆಯಲ್ಲಿ 40 ನಿಮಿಷಗಳಲ್ಲಿ ಹಾಳೆಯ ಎರಡೂ ಕಡೆಯಲ್ಲಿ ಒಟ್ಟಾರೆ 688 ಪುಟ (ಬ್ಲಾಕ್ ಆ್ಯಂಡ್ ವೈಟ್) ಪ್ರಿಂಟ್ ಆಗಿದೆ. ಅಂದರೆ ಪ್ರತಿ ಒಂದು ನಿಮಿಷಕ್ಕೆ ಸರಾಸರಿ 17 ಪುಟ (ಹಾಳೆಯ ಎರಡೂ ಕಡೆಗಳಲ್ಲಿ) ಪ್ರಿಂಟ್‌ ಆದಂತಾಗಿದೆ. ಹಾಳೆಯ ಒಂದೇ ಕಡೆ ಪ್ರಿಂಟ್‌ ಆಗಲು ಕಡಿಮೆ ಸಮಯ ಸಾಲುವುದರಿಂದ ಕಂಪನಿ ಹೇಳಿಕೊಂಡಿರುವುದಕ್ಕಿಂತಲೂ ಹೆಚ್ಚೇ ಹಾಳೆ ಪ್ರಿಂಟ್ ಆಗಲಿದೆ. 4/6 ಸೈಜ್‌ನ ಫೊಟೊ ಪ್ರಿಂಟ್‌ ಮಾಡಲು, ಬಾರ್ಡರ್‌ ಇರುವ ಒಂದು ಫೊಟೊ ಪ್ರಿಂಟ್‌ ಆಗಲು 26 ಸೆಕೆಂಡ್‌, ಬಾರ್ಡರ್‌ ಇಲ್ಲದೇ ಇರುವ ಫೊಟೊ ಪ್ರಿಂಟ್‌ ಆಗಲು 27 ಸೆಕೆಂಡ್‌ ಸಮಯ ಬೇಕು.

ಪೇಪರ್‌ ಹ್ಯಾಂಡ್ಲಿಂಗ್‌: ಮೂರು ಟ್ರೇ ಇದೆ. ಕ್ಯಾಸೆಟ್ 1 ಮತ್ತು 2ರಲ್ಲಿ ಗರಿಷ್ಠ 250ರವರೆಗೆ ಎ4 ಪ್ಲೇನ್‌ ಶೀಟ್‌ ಹಾಕಬಹುದು. ಪ್ರೀಮಿಯಂ ಗ್ಲಾಸಿ ಫೊಟೊ ಪೇಪರ್‌ ಆದಲ್ಲಿ ಕ್ಯಾಸೆಟ್‌ 1ರಲ್ಲಿ 50 ಶೀಟ್‌ ಹಿಡಿಯತ್ತದೆ. ರಿಯರ್‌ ಸ್ಲಾಟ್‌ನಲ್ಲಿ 50 ಶೀಟ್‌ ಎ4 ಪ್ಲೇನ್‌ ಪೇಪರ್‌ ಹಿಡಿಯುತ್ತದೆ.

ಒಟ್ಟಾರೆಯಾಗಿ ಕಡಿಮೆ ಖರ್ಚು, ಗುಣಮಟ್ಟದ ಪ್ರಿಂಟಿಂಗ್‌, ಪ್ರಿಂಟಿಂಗ್‌ ವೇಗ, ಇಂಕ್‌ ರಿ ಫಿಲ್ಲಿಂಗ್‌ ನಿರ್ವಹಣೆ ಹೀಗೆ ಎಲ್ಲಾ ದೃಷ್ಟಿಯಿಂದಲೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು, ಕಾರ್ಪೊರೇಟ್‌ ಕಚೇರಿಗಳಿಗೆ ಹಣಕ್ಕೆ ತಕ್ಕ ಮೌಲ್ಯ ತಂದುಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.