ADVERTISEMENT

ಮೈಕ್ರೋಮ್ಯಾಕ್ಸ್ ಇನ್ 2ಬಿ: ಅಗ್ಗದ ದರದಲ್ಲಿ ಗೇಮಿಂಗ್‌ಗೆ ಪೂರಕವಾದ ಫೋನ್

ಅವಿನಾಶ್ ಬಿ.
Published 11 ಆಗಸ್ಟ್ 2021, 13:19 IST
Last Updated 11 ಆಗಸ್ಟ್ 2021, 13:19 IST
ಮೈಕ್ರೋಮ್ಯಾಕ್ಸ್ ಇನ್ 2ಬಿ ಸ್ಕ್ರೀನ್ ಹಾಗೂ ಆ್ಯಪ್‌ಗಳ ಸ್ಕ್ರೀನ್
ಮೈಕ್ರೋಮ್ಯಾಕ್ಸ್ ಇನ್ 2ಬಿ ಸ್ಕ್ರೀನ್ ಹಾಗೂ ಆ್ಯಪ್‌ಗಳ ಸ್ಕ್ರೀನ್   

ಕಳೆದ ವರ್ಷ ಭಾರತದಲ್ಲಿ ಎದ್ದಿದ್ದ ಚೀನಾ-ವಿರೋಧಿ ಅಲೆಯ ಮಧ್ಯೆ ದೇಶೀ ಮೊಬೈಲ್ ಉತ್ಪಾದನಾ ಕಂಪನಿ ಮೈಕ್ರೋಮ್ಯಾಕ್ಸ್ ಭರ್ಜರಿಯಾಗಿಯೇ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ 'ಇನ್ ಫಾರ್ ಇಂಡಿಯಾ' ಸ್ಲೋಗನ್ ಜೊತೆಗೆ ಮರುಪ್ರವೇಶಿಸಿತ್ತು. ಇನ್ 1, ಇನ್ 1ಬಿ, ಇನ್ ನೋಟ್ 1 ಮಾದರಿಗಳ ಬಳಿಕ 4ನೇ ಉತ್ಪನ್ನವಾಗಿ ಅದು 'ಭಾರತದ ಹ್ಯಾಂಗ್ ಆಗದ ಫೋನ್' ಎಂಬ ಘೋಷವಾಕ್ಯದೊಂದಿಗೆ ಮೈಕ್ರೋಮ್ಯಾಕ್ಸ್ ಇನ್ 2ಬಿ ಸ್ಮಾರ್ಟ್ ಫೋನ್ ಅನ್ನು ಜುಲೈ ತಿಂಗಳಾಂತ್ಯದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಮೈಕ್ರೋಮ್ಯಾಕ್ಸ್ ಇನ್ 2ಬಿ ಫೋನ್ ಹೇಗಿದೆ? ತಿಳಿಯೋಣ.

ವಿನ್ಯಾಸ, ಸ್ಪೆಸಿಫಿಕೇಶನ್‌ಗಳು

ಕಡು ಬೂದು ಬಣ್ಣದ ಹಿಂಭಾಗದ ಕವಚದಲ್ಲಿರುವ ವಿನ್ಯಾಸಭರಿತ ಮ್ಯಾಟ್ ಫಿನಿಶ್ ಇದ್ದು, ಸುಲಭವಾಗಿ ಗೀರು ಆಗಲಾರದು. ಇನ್ 1ಬಿಗಿಂತ ಬಿಲ್ಡ್ ಗುಣಮಟ್ಟ ಚೆನ್ನಾಗಿದೆ. ಅವಳಿ ಕ್ಯಾಮೆರಾ ಮಾಡ್ಯೂಲ್‌ನ ಕೆಳಗೆ ಎಐ ಕ್ಯಾಮೆರಾ ಎಂದು ಬರೆಯಲಾಗಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು, ಅಲ್ಲೇ ಕೆಳಗಡೆ ಸ್ಪೀಕರ್ ಗ್ರಿಲ್ ಇದೆ. ಟೈಪ್ ಸಿ ಪೋರ್ಟ್, 3.5 ಮಿಮೀ ಹೆಡ್‌ಫೋನ್ ಜ್ಯಾಕ್, ಮೈಕ್ರೋಫೋನ್ ಇದ್ದು, ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇ (ಎರಡು ಸಿಮ್ ಕಾರ್ಡ್ ಹಾಗೂ ಒಂದು ಎಸ್‌ಡಿ ಕಾರ್ಡ್ ಸ್ಲಾಟ್), ಬಲ ಭಾಗದಲ್ಲಿ ಪವರ್ ಹಾಗೂ ವಾಲ್ಯೂಮ್ ಬಟನ್‌ಗಳಿವೆ.

ADVERTISEMENT

ನೋಡಲು ಇತರ ಬ್ರ್ಯಾಂಡೆಡ್ ಫೋನ್‌ಗಳನ್ನೇ ಹೋಲುವ ಮೈಕ್ರೋಮ್ಯಾಕ್ಸ್ ಇನ್ 2ಬಿಯಲ್ಲಿ 1ಬಿಯಲ್ಲಿರುವಂತೆ ಗೂಗಲ್ ಅಸಿಸ್ಟೆಂಟ್ ಪ್ರತ್ಯೇಕ ಬಟನ್ ಇಲ್ಲ. 190 ಗ್ರಾಂ ತೂಕ, 8.5 ಮಿಮೀ ದಪ್ಪ ಇರುವ ಫೋನ್, ಈ ಶ್ರೇಣಿಯ ಫೋನ್‌ಗಳಲ್ಲಿ ಹೆಚ್ಚಿನ ಆಕರ್ಷಕ ವಿನ್ಯಾಸ ನಿರೀಕ್ಷಿಸಲಾಗದು. 6.5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಸುತ್ತ ಬೆಝೆಲ್ (ಖಾಲಿ ಅಂಚು) ಇದೆ. ವಾಟರ್ ಡ್ರಾಪ್ ನಾಚ್ ಸೆಲ್ಫೀ ಕ್ಯಾಮೆರಾ ಇದೆ. ಫೋನ್ ಜೊತೆಗೆ ದೊರೆಯುವ ಕೇಸ್ (ಕವಚ) ಹಾಗೂ ಸ್ಕ್ರೀನ್ ಪ್ರೊಟೆಕ್ಟರ್ ಶೀಟ್ ಉತ್ತಮ ಗುಣಮಟ್ಟ ಹೊಂದಿದೆ. ಬಾಕ್ಸ್‌ನಲ್ಲಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಮತ್ತು ಚಾರ್ಜರ್ ಇದೆ.

ಸ್ಮಾರ್ಟ್ ವೈಶಿಷ್ಟ್ಯಗಳು

ಆದರೆ ಇದರೊಳಗೆ ಮೈಕ್ರೋಮ್ಯಾಕ್ಸ್ ಸಾಕಷ್ಟು ಸುಧಾರಿತ ಸ್ಮಾರ್ಟ್ ವೈಶಿಷ್ಟ್ಯಗಳನ್ನೂ 'ಇಂಟೆಲಿಜೆಂಟ್ ಅಸಿಸ್ಟೆನ್ಸ್' ಅಂತ ಸೇರಿಸಿದೆ. ಸೆಟ್ಟಿಂಗ್ಸ್‌ನಲ್ಲಿರುವ ಇದನ್ನು ಕ್ಲಿಕ್ ಮಾಡಿದರೆ, ವಿಶೇಷತೆಗಳು ಕಾಣಿಸುತ್ತವೆ. ಫೋನ್ ಕೈಗೆತ್ತಿಕೊಂಡಾಗ ಸ್ಕ್ರೀನ್ ಆನ್ ಆಗುವುದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೂಲಕವೇ ಫೋಟೊ/ವಿಡಿಯೊ ಆನ್ ಮಾಡುವುದು ಅಥವಾ ಸ್ಕ್ರೀನ್ ಶಾಟ್ ತೆಗೆಯುವುದು ಇಲ್ಲವೇ ಹೋಂ ಸ್ಕ್ರೀನ್‌ಗೆ ಮರಳುವುದು ಮುಂತಾದ ಆಯ್ಕೆಗಳಿವೆ. ಜೊತೆಗೆ, ಮ್ಯೂಟ್ ಮಾಡಲು ಫೋನನ್ನು ಫ್ಲಿಪ್ ಮಾಡುವುದು, ಮೂರು ಬೆರಳಿಂದ ಸ್ವೈಪ್ ಮಾಡಿದಾಗ ಸ್ಕ್ರೀನ್ ಶಾಟ್ ತೆಗೆಯುವುದು, ಫೋನ್ ರಿಂಗ್ ಆಗುವಾಗ ಎತ್ತಿಕೊಂಡರೆ ರಿಂಗಿಂಗ್ ಸದ್ದು ಕಡಿಮೆ ಮಾಡುವುದು, ಫ್ಲ್ಯಾಶ್ ಲೈಟ್ ಆನ್ ಮಾಡಲು ವಾಲ್ಯೂಮ್ ಹೆಚ್ಚಿಸುವ ಬಟನ್ ಒತ್ತುವುದು ಮುಂತಾದ ವಿಶೇಷತೆಗಳೂ ಇದರಲ್ಲಿ ಅಡಕವಾಗಿವೆ. ಇಷ್ಟೇ ಅಲ್ಲ, ಫೋನ್ ಬಂದಾಗ, ಬೇರಾವುದೇ ಬಟನ್ ಒತ್ತದೆಯೇ, ಕಿವಿಯ ಬಳಿ ಹಿಡಿದಾಗ ಸ್ವಯಂಚಾಲಿತವಾಗಿ ಕರೆಗೆ ಉತ್ತರಿಸುವುದು ಸಾಧ್ಯವಾಗುತ್ತದೆ.

ಕ್ಯಾಮೆರಾ

ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಈ ಬೆಲೆಯ ಫೋನ್‌ಗಳಲ್ಲಿ ಮೈಕ್ರೋಮ್ಯಾಕ್ಸ್ ಹೆಚ್ಚಿನ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡಲು ಪ್ರಯತ್ನಿಸಿದೆ. 13 ಹಾಗೂ 2 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾಗಳು ಸಾಮಾನ್ಯ ಫೋಟೊ ವಿಡಿಯೊಗಳಿಗೆ ಸೂಕ್ತ. ಆದರೆ, ಕ್ಯಾಮೆರಾದಲ್ಲಿ ಸಾಕಷ್ಟು ಮೋಡ್‌ಗಳಿವೆ. ಪನೋರಮಾ, ಪೋರ್ಟ್ರೇಟ್, ಪ್ರೋ, ಸಾಮಾನ್ಯ ಫೋಟೊ, ವಿಡಿಯೊ, ಸ್ಲೋ ಮೋಷನ್ ಮಾತ್ರವಲ್ಲದೆ, ಇಂಟರ್ವಲ್, ಟೈಮ್ ಲ್ಯಾಪ್ಸ್, ಫಿಲ್ಟರ್, ನೈಟ್ ಮೋಡ್‌ಗಳೂ ಇದ್ದು, ಕ್ಯುಆರ್ ಕೋಡ್ ಸ್ಕ್ಯಾನರ್ ಕೂಡ ಅಡಕವಾಗಿರುವುದು ವಿಶೇಷ.

ಈ ಶ್ರೇಣಿಯ ಫೋನ್‌ಗಳಿಗೆ ಹೋಲಿಸಿದರೆ ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಫೋಟೊ ಕೂಡ ಹೊರಾಂಗಣದಲ್ಲಿ ಚಿತ್ರ ಸ್ಪಷ್ಟವಾಗಿ ಸೆರೆಯಾಗುತ್ತದೆ. ಮಂದ ಬೆಳಕಿನಲ್ಲಿ ಗುಣಮಟ್ಟ ನಿರೀಕ್ಷಿಸಿದಷ್ಟಿಲ್ಲ.

ಬ್ಯಾಟರಿ, ಕಾರ್ಯಕ್ಷಮತೆ

ಫೋನ್‌ನಲ್ಲಿ 5000 mAh ಬ್ಯಾಟರಿ ಇದ್ದು, 10W ವೇಗದ ಚಾರ್ಜಿಂಗ್ ಬೆಂಬಲವಿದೆ. ಸಾಮಾನ್ಯ ಬಳಕೆಯಲ್ಲಿ ಒಂದುವರೆ ದಿನದವರೆಗೂ ಯಾವುದೇ ಸಮಸ್ಯೆಯಾಗಲಿಲ್ಲ.

ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆಯು ಸ್ಟಾಕ್ ಆಂಡ್ರಾಯ್ಡ್‌ನಂತಿದೆ. ಯಾವುದೇ ಅನಗತ್ಯ ಆ್ಯಪ್‌ಗಳನ್ನು ಇದರೊಳಗೆ ಸೇರಿಸಲಾಗಿಲ್ಲ, ಜಾಹೀರಾತು ನೋಟಿಫಿಕೇಶನ್ ಕಿರಿಕಿರಿ ಇಲ್ಲ ಮತ್ತು ಯಾವುದೇ ಗ್ರಾಹಕೀಯ ಬದಲಾವಣೆಯೂ ಇಲ್ಲ. ಈ ಬೆಲೆಯಲ್ಲಿ ಕ್ಲೀನ್ ಆಂಡ್ರಾಯ್ಡ್ ಫೋನ್‌ಗಳನ್ನು ನೋಡುವುದೇ ಖುಷಿ.

4 ಜಿಬಿ RAM, 64 ಜಿಬಿ ಸ್ಟೋರೇಜ್ ಸಾಮರ್ಥ್ಯ ಇರುವ ಫೋನ್‌ನಲ್ಲಿ ಹಿಂದಿನ 1ಬಿ ಫೋನ್‌ಗಿಂತ ಗಮನಿಸಬಹುದಾದ ಅಂಶವೆಂದರೆ ಅತ್ಯಾಧುನಿಕ ಯುನಿಸಾಕ್ ಟಿ610 ಒಕ್ಟಾಕೋರ್ ಪ್ರೊಸೆಸರ್ ಬಳಸಿರುವುದು. ಇದು ಹೀಲಿಯೊ ಜಿ 85 ಪ್ರೊಸೆಸರ್‌ಗೆ ಬಹುತೇಕ ಹತ್ತಿರವಿರುವ ಕಾರ್ಯಕ್ಷಮತೆ ಹೊಂದಿದೆ.

ಎರಡೂ ಸಿಮ್ ಕಾರ್ಡ್‌ಗಳಿಗೆ VoWiFi ಹಾಗೂ VoLTE ಬೆಂಬಲವಿದ್ದು, ಕರೆಯ ಗುಣಮಟ್ಟವೂ ಚೆನ್ನಾಗಿದೆ. ಇದರ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಗಲೀ, ಮುಖ ಗುರುತಿಸಿ ಫೋನ್ ಅನ್‌ಲಾಕ್ ಆಗುವ ವೈಶಿಷ್ಟ್ಯವಾಗಲೀ, ತುಂಬ ಕ್ಷಿಪ್ರವಾಗಿ ಕೆಲಸ ಮಾಡುವುದು ಕೂಡ ಈ ಶ್ರೇಣಿಯ ಫೋನ್‌ಗಳಲ್ಲೇ ಒಳ್ಳೆಯ ಸಂಗತಿ ಎನ್ನಬಹುದು.

ಸ್ಟಾಕ್ ಆಂಡ್ರಾಯ್ಡ್‌ನಿಂದಾಗಿ ಕಾರ್ಯಾಚರಣೆ ಸುಲಲಿತವಾಗಿ ಗೋಚರಿಸುತ್ತದೆ. ಟಿ610 ಪ್ರೊಸೆಸರ್‌ನ ನೆರವಿನಿಂದಾಗಿ, ಕೆಲವೊಂದಿಷ್ಟು ಗ್ರಾಫಿಕ್ಸ್ ಹೆಚ್ಚಿರುವ ಗೇಮ್‌ಗಳನ್ನು ಕೂಡ ಯಾವುದೇ ಸಮಸ್ಯೆಯಿಲ್ಲದೆ ಆಡಬಹುದಾಗಿರುವುದು ವಿಶೇಷ. ಅದು ಕೂಡ 10 ಸಾವಿರ ರೂ. ಒಳಗಿನ ಫೋನ್‌ನಲ್ಲಿ ಇದು ಸಾಧ್ಯವಾಗಿದೆ. ಬೆಲೆ ₹7999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.