ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ: ದೊಡ್ಡ ಗಾತ್ರ, ಪ್ರೀಮಿಯಂ ನೋಟದ ಆಕರ್ಷಕ ಫೋನ್

ಅವಿನಾಶ್ ಬಿ.
Published 4 ಆಗಸ್ಟ್ 2021, 11:48 IST
Last Updated 4 ಆಗಸ್ಟ್ 2021, 11:48 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ ಫೋನ್ ಮತ್ತು ಅದರ ಆಕರ್ಷಕ ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ ಫೋನ್ ಮತ್ತು ಅದರ ಆಕರ್ಷಕ ಕ್ಯಾಮೆರಾ ಸೆಟಪ್   

ಭಾರತದಲ್ಲಿನ್ನೂ 5G ಬಂದಿಲ್ಲದಿದ್ದರೂ 5ಜಿ ಫೋನ್‌ಗಳ ಧಾವಂತ ಈಗ. ಈ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್ ತನ್ನ 'ಎ' ಶ್ರೇಣಿಯ ಮೊದಲ 5ಜಿ ಸ್ಮಾರ್ಟ್‌ಫೋನನ್ನು ಜುಲೈ ತಿಂಗಳಾಂತ್ಯದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರಜಾವಾಣಿಗೆ ದೊರೆತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ ಫೋನ್ ಹೇಗಿದೆ? ಇಲ್ಲಿದೆ ಮಾಹಿತಿ.

ವಿನ್ಯಾಸ
ಪ್ರಜಾವಾಣಿಗೆ ರಿವ್ಯೂಗೆ ದೊರೆತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ ಫೋನ್ ಮಿಂಟ್ (ನಸು ಹಸಿರು) ಬಣ್ಣದಲ್ಲಿ ಆಕರ್ಷಕವಾಗಿದೆ. 6.6 ಇಂಚಿನ ದೊಡ್ಡ ಸ್ಕ್ರೀನ್, 203 ಗ್ರಾಂ ತೂಕ, ಕೇವಲ 9.3 ಮಿಮೀ ದಪ್ಪವಿದ್ದು, ಪ್ರೀಮಿಯಂ ನೋಟ ಹೊಂದಿದೆ. 5ಜಿಗಾಗಿ ಸಾಕಷ್ಟು ಅನ್ಯ ಫೋನ್‌ಗಳಿದ್ದರೂ, ಸ್ಯಾಮ್‌ಸಂಗ್‌ನ ಬೇರೆ ದುಬಾರಿ ಫೋನ್‌ಗಳಲ್ಲಿರುವ ಕೆಲವೊಂದು ವೈಶಿಷ್ಟ್ಯಗಳು ಇದರಲ್ಲಿರುವುದು ವಿಶೇಷ. ಸ್ಯಾಮ್‌ಸಂಗ್ ಬಳಕೆದಾರರಿಗೇ ಇದು ಅಪ್‌ಗ್ರೇಡ್ ಮಾಡಿಕೊಳ್ಳಲು ಆಮಿಷವೊಡ್ಡುವಂತಿದೆ.

ಮ್ಯಾಟ್ ಫಿನಿಶ್, ಫ್ಲ್ಯಾಟ್ ಮೇಲ್ಮೈಗಳು ಈಗಿನ ಫೋನ್‌ಗಳ ನಡುವೆ ಎದ್ದುಕಾಣುವಂತೆ ಮಾಡುವ ಅಂಶಗಳು. ಜೊತೆಗೆ, ಚೌಕಾಕಾರದಲ್ಲಿರುವ ಕ್ಯಾಮೆರಾ ಸೆಟಪ್ ಈ ವಿನ್ಯಾಸದ ಸೌಂದರ್ಯಕ್ಕೆ ತನ್ನದೇ ಕೊಡುಗೆ ನೀಡುತ್ತದೆ. ಒನ್ ಯುಐ 3.1 ಆವೃತ್ತಿಯ ಆಂಡ್ರಾಯ್ಡ್ 11 ಆಧಾರಿತ ಅತ್ಯಾಧುನಿಕ ಕಾರ್ಯಾಚರಣೆ ವ್ಯವಸ್ಥೆ ಈ ಫೋನ್‌ನಲ್ಲಿದೆ. 2 ವರ್ಷ ಕಾರ್ಯಾಚರಣಾ ವ್ಯವಸ್ಥೆ ಅಪ್‌ಗ್ರೇಡ್ ಮಾಡುವ ಭರವಸೆಯಿದೆ.

ADVERTISEMENT

ಗುಣಮಟ್ಟದ ಪ್ಲಾಸ್ಟಿಕ್ ಬಳಸಲಾಗಿದ್ದು, ನೋಡಲು ಗಟ್ಟಿಯಾಗಿದೆ ಎಂಬ ಭಾವನೆ ಬರುತ್ತದೆ. ಪವರ್-ಕೀಯಲ್ಲಿಯೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ವೇಗವಾಗಿ ಕೆಲಸ ಮಾಡುತ್ತದೆ. ಕೇವಲ ಬೆರಳು ತಾಕಿಸಿದರೆ ಸಾಕು, ಸ್ಕ್ರೀನ್ ಅನ್‌ಲಾಕ್ ಆಗುತ್ತದೆ. ಕೆಳಭಾಗದಲ್ಲಿ ಇಯರ್‌ಫೋನ್‌ಗಾಗಿ 3.5 ಮಿಮೀ ಜ್ಯಾಕ್ ಇದೆ. ಆದರೆ, ಸ್ಕ್ರೀನ್ ಮುಂಭಾಗದಲ್ಲಿ ಯಾವುದೇ ವಿಶೇಷತೆ ಕಾಣಿಸುವುದಿಲ್ಲ.

6.6 ಇಂಚಿನ ಡಿಸ್‌ಪ್ಲೇ ಸುತ್ತ ಬೆಝೆಲ್ (ಖಾಲಿ ಅಂಚು) ಆವರಿಸಿಕೊಂಡಿದೆ. FHD+ ರೆಸೊಲ್ಯುಶನ್ ಇರುವ ಸ್ಕ್ರೀನ್ ಮೇಲೆ ಪಾಂಡಾ ಗಾಜಿನ ರಕ್ಷಾ ಕವಚವಿದೆ. ಪಾಂಡಾ ಗಾಜು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ಪ್ರತಿಸ್ಫರ್ಧಿ.

ಸಾಮಾನ್ಯವಾಗಿ ಸ್ಯಾಮ್‌ಸಂಗ್ ಬಳಸುತ್ತಿರುವ AMOLED ಡಿಸ್‌ಪ್ಲೇ ಇಲ್ಲಿಲ್ಲ. ಬದಲಾಗಿ, ವೆಚ್ಚ ತಗ್ಗಿಸುವುದಕ್ಕಾಗಿಯೋ ಎಂಬಂತೆ ಐಪಿಎಸ್ ಎಲ್‌ಸಿಡಿ ಪ್ಯಾನೆಲ್ ಬಳಸಲಾಗಿದೆ. ಅಮೋಲೆಡ್ ಡಿಸ್‌ಪ್ಲೇ ಇರುವ ಇತರ ಫೋನ್‌ಗಳಿಗಿಂತ ಚಿತ್ರ, ವಿಡಿಯೊಗಳ ವೀಕ್ಷಣೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲದಿದ್ದರೂ, AMOLED ಯಾವತ್ತೂ ಹೆಚ್ಚು ತೀಕ್ಷ್ಣ, ಸ್ಪಷ್ಟ ಚಿತ್ರಗಳನ್ನು ಕಾಣಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ 90Hz ರೀಫ್ರೆಶ್ ರೇಟ್ ಇರುವುದರಿಂದ ಸ್ಕ್ರಾಲಿಂಗ್ ತುಂಬ ಸುಲಲಿತವಾಗಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಬಳಸಲಾಗಿರುವುದು ಕೂಡ ವೆಚ್ಚ ತಗ್ಗಿಸುವುದಕ್ಕಾಗಿಯೇ ಎಂಬಂತೆ ತೋರುತ್ತದೆ. 6GB RAM, 128GB ಸ್ಟೋರೇಜ್ ಇರುವ ರಿವ್ಯೂ ಸಾಧನದ ಕಾರ್ಯಾಚರಣೆಯು ಒಟ್ಟಾರೆಯಾಗಿ ವೇಗವಾಗಿಯೇ ಇದೆ. ಎಸ್‌ಡಿ ಕಾರ್ಡ್ ಮೂಲಕ 1ಟಿಬಿವರೆಗೂ ಸ್ಟೋರೇಜ್ ವಿಸ್ತರಿಸಬಹುದು.

ದೊಡ್ಡ ಸ್ಕ್ರೀನ್ ಇರುವುದರಿಂದ ವಿಶೇಷತಃ ಮನರಂಜನೆ ಮತ್ತು ಗೇಮಿಂಗ್ ಆಸಕ್ತರಿಗಾಗಿಯೇ ರೂಪಿಸಿರುವಂತಿದೆ. ಹೆಚ್ಚು ಗ್ರಾಫಿಕ್ಸ್ ಇರುವ, ತೂಕದ ಗೇಮಿಂಗ್ ಆ್ಯಪ್‌ಗಳಲ್ಲಿ ಆಡುವ ಅನುಭವ ಸಾಮಾನ್ಯವಾಗಿತ್ತು. ಜೊತೆಗೆ, ಮಲ್ಟಿಟಾಸ್ಕ್ ಮಾಡುವವರಿಗೆ ಎಡ್ಜ್ ಪ್ಯಾನೆಲ್ ತುಂಬಾ ಅನುಕೂಲಕರವಾಗಿದೆ. ಈ ಎಡ್ಜ್ ಪ್ಯಾನೆಲ್‌ನಲ್ಲಿ ನಾವು ಪದೇ ಪದೇ ಬಳಸುತ್ತಿರುವ ಆ್ಯಪ್‌ಗಳ ಶಾರ್ಟ್ ಕಟ್ ಇರಿಸಿಕೊಳ್ಳಬಹುದಾಗಿದ್ದು, ಬಲ ಮೇಲ್ಭಾಗದಿಂದ ಸ್ವೈಪ್ ಮಾಡಿದರೆ ಈ ಆ್ಯಪ್‌ಗಳು ಕಾಣಿಸುವ ಪ್ಯಾನೆಲ್ ಇದು.

ಇದರಲ್ಲಿ ಹಲವು ಪ್ರೀಲೋಡೆಡ್ ಆ್ಯಪ್‌ಗಳಿವೆ. ಹೆಚ್ಚಿನವನ್ನು ಅನ್ಇನ್‌ಸ್ಟಾಲ್ ಮಾಡಬಹುದು, ಉಳಿದವನ್ನು ಡಿಸೇಬಲ್ ಮಾಡಬಹುದು. ಗೂಗಲ್ ಹಾಗೂ ಮೈಕ್ರೋಸಾಫ್ಟ್‌ನ ಹಲವಾರು ಉಪಯುಕ್ತ ಆ್ಯಪ್‌ಗಳು ಕೂಡ ಇದರಲ್ಲಿ ಅಳವಡಿಸಿಯೇ ಬರುತ್ತವೆ.

ಡಾಲ್ಬಿ ಅಟ್ಮೋಸ್ ಧ್ವನಿ ಎಫೆಕ್ಟ್ ಇರುವುದರಿಂದ, ಹಾಡುಗಳು, ಸಂಗೀತ ಕೇಳುವುದು ಆನಂದದಾಯಕ. ಇದಲ್ಲದೆ, 5ಜಿಯಲ್ಲಿ 11 ಬ್ಯಾಂಡ್ ಬೆಂಬಲ ಇರುವುದರಿಂದ, ಯಾವುದೇ 5ಜಿ ಸೇವಾದಾರರ ನೆಟ್‌ವರ್ಕ್‌ಗೆ ಅಡಚಣೆಗಳಿಲ್ಲದೆಯೇ ಹೊಂದಿಕೊಳ್ಳಬಹುದೆಂಬ ನಿರೀಕ್ಷೆ.

ಕ್ಯಾಮೆರಾ
ಹಿಂಭಾಗದಲ್ಲಿ 3 ಕ್ಯಾಮೆರಾಗಳು ಮತ್ತು ಫ್ಲ್ಯಾಶ್ ಇರುವ ಚೌಕಾಕಾರದ ಸೆಟಪ್ ಇದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾವಿದ್ದು, ಇದರಲ್ಲಿಯೂ ಬೊಕೇ ಎಫೆಕ್ಟ್ ವೈಶಿಷ್ಟ್ಯವಿದೆ. ಪ್ರಧಾನ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸಾಮರ್ಥ್ಯ ಇರುವುದರಿಂದ ಉತ್ತಮ ಚಿತ್ರ ಹಾಗೂ ವಿಡಿಯೊಗಳು ಸೆರೆಯಾಗುತ್ತವೆ. ಸೂಕ್ತ ಬೆಳಕಿನಲ್ಲಿ ಅದ್ಭುತವಾಗಿ, ಮಂದ ಬೆಳಕಿನಲ್ಲಿಯೂ ಚೆನ್ನಾಗಿದೆ ಎಂದು ಹೇಳಬಹುದಾದ ಚಿತ್ರಗಳು ಮೂಡಿಬರುತ್ತವೆ. ಕ್ಯಾಮೆರಾಪ್ರಿಯರಿಗೆ ಇದು ಇಷ್ಟವಾಗಬಹುದು. ನೈಟ್ ಮೋಡ್ ಇದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಉದ್ದೇಶಿತ ವಸ್ತುವಿನ ಮೇಲೆ ಬೆಳಕು ಚೆನ್ನಾಗಿರುವಂತೆ ಫೋಕಸ್ ಆಗುತ್ತದೆ. 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆ್ಯಂಗಲ್ ಲೆನ್ಸ್, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ - ಇವು ಪೋರ್ಟ್ರೇಟ್ ಚಿತ್ರಗಳಿಗೆ (ಹಿನ್ನೆಲೆ ಮಸುಕಾಗಿಸುವ, ವಸ್ತುವಿನ ಮೇಲೆ ಗಮನ ಕೇಂದ್ರೀಕೃತ ಬೊಕೇ ಎಫೆಕ್ಟ್) ಉತ್ತಮ ಬೆಂಬಲ ನೀಡುತ್ತವೆ.

ಬ್ಯಾಟರಿ
5000 mAh ಸಾಮರ್ಥ್ಯದ ಬ್ಯಾಟರಿಯು 4ಜಿ ನೆಟ್‌ವರ್ಕ್‌ನಲ್ಲೇ ಸದ್ಯ ಕೆಲಸ ಮಾಡುವುದರಿಂದ, ಒಂದುವರೆ ದಿನಗಳ ಸಾಮಾನ್ಯ ಬಳಕೆಗೆ ತೊಂದರೆಯಿಲ್ಲದೆ ಒದಗಿಬಂದಿದೆ. ಅಂದರೆ 2-3 ಗಂಟೆ ಸೋಷಿಯಲ್ ಮೀಡಿಯಾ, ದಿನಪೂರ್ತಿ ವಾಟ್ಸ್ಆ್ಯಪ್, ಒಂದು ಗಂಟೆ ಕರೆ, ಒಂದಷ್ಟು ಫೋಟೋ, ವಿಡಿಯೊ ಶೂಟಿಂಗ್ ಈ ಸಾಮಾನ್ಯ ಕಾರ್ಯಗಳು. ಆದರೆ, ಚಾರ್ಜಿಂಗ್‌ಗೆ 15W ಸಾಮರ್ಥ್ಯ ಮಾತ್ರ ಇರುವುದರಿಂದ, ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಸಮಯ ಜಾಸ್ತಿ ಬೇಕಾಗುತ್ತದೆ. 5ಜಿ ಪೀಳಿಗೆಯವರಿಗಾಗಿ ಇದನ್ನು ರೂಪಿಸಿರುವುದರಿಂದ ಹೆಚ್ಚು ವೇಗದ ಚಾರ್ಜಿಂಗ್ ವ್ಯವಸ್ಥೆ ನೀಡಬಹುದಾಗಿತ್ತು.

ನಸು ಹಸಿರು (ಮಿಂಟ್), ನೇರಳೆ (ವೈಲೆಟ್) ಹಾಗೂ ಕಡು ಬೂದು (ಗ್ರೇ) ಬಣ್ಣಗಳಲ್ಲಿ ಲಭ್ಯ ಇರುವ ಈ ಫೋನ್‌ನ ಬೆಲೆ ₹19,999.

ಒಟ್ಟಾರೆಯಾಗಿ ಹೇಳಬಹುದಾದರೆ, ಈಚೆಗಷ್ಟೇ ಬಿಡುಗಡೆಯಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 (4ಜಿ ಅಥವಾ LTE)ಫೋನ್‌ನ ಆಧುನೀಕೃತ ರೂಪವಿದು. 20 ಸಾವಿರ ರೂ. ಒಳಗಿನ 5ಜಿ ಫೋನ್, ಉತ್ತಮ ಪ್ರೀಮಿಯಂ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು, ಉತ್ತಮ ಬಿಲ್ಡ್ ಗುಣಮಟ್ಟ, ಉತ್ತಮ ಬ್ಯಾಟರಿಯುಳ್ಳ ಹಾಗೂ ಸ್ಯಾಮ್‌ಸಂಗ್‌ನಂತಹಾ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್ ಇಷ್ಟಪಡುವವರಿಗೆ ಇದು ಇಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.