ADVERTISEMENT

5ಜಿಗೆ ಶಕ್ತಿ ನೀಡುವ ಸ್ಮಾಲ್‌ ಸೆಲ್‌ಗಳು

ಕೃಷ್ಣ ಭಟ್ಟ
Published 3 ಜನವರಿ 2023, 20:30 IST
Last Updated 3 ಜನವರಿ 2023, 20:30 IST
   

ಕಳೆದ ಒಂದು ವರ್ಷದಿಂದಲೂ ನಮ್ಮ ಮೊಬೈಲ್‌ಗೆ 5ಜಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು. ಈಗ ಮೊಬೈಲ್‌ಗೆ 5ಜಿ ಬಂದಿದೆ. ಅದರ ಜೊತೆಗೇ ನಾವು ಡೇಟಾ ಬಳಸುವ ಪ್ರಮಾಣವೂ ಹೆಚ್ಚಾಗುತ್ತಿದೆ. 5ಜಿಯಲ್ಲಿ ಒಂದು ಬಾರಿ ನೆಟ್‌ವರ್ಕ್‌ನ ಸ್ಪೀಡ್‌ ಟೆಸ್ಟ್‌ ಮಾಡಿದರೆ 300ರಿಂದ 500 ಎಂಬಿ ಡೇಟಾ ಖಾಲಿಯಾಗುತ್ತಿದೆ. ಇದೇ ಡೇಟಾವನ್ನು ಕೆಲವೇ ವರ್ಷಗಳ ಹಿಂದೆ 3ಜಿ ನೆಟ್‌ವರ್ಕ್‌ ಇದ್ದಾಗ ನಾವು ಇಡೀ ತಿಂಗಳು ಬಳಸುತ್ತಿದ್ದೆವು!

ಈ ಬಳಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲ, ಈ ಡೇಟಾದ ವೇಗವೂ ನಮಗೆ ಸಾಲುವುದಿಲ್ಲ. ಈಗ ನಮಗೆ 5ಜಿಯಲ್ಲಿ ಸೆಕೆಂಡಿಗೆ 500 ಎಂಬಿ ವರೆಗೆ ವೇಗದ ಡೇಟಾ ಸಿಗುತ್ತಿದೆ. ಆದರೆ ಇದು ಸಾಲದು ಎಂಬ ಸ್ಥಿತಿಗೆ ಇನ್ನೇನು ಸ್ವಲ್ಪ ದಿನಗಳಲ್ಲೇ ನಾವು ತಲುಪುವುದರಲ್ಲಿದ್ದೇವೆ. ನಮಗೆ ಈಗ ವರ್ಚುವಲ್ ರಿಯಾಲಿಟಿಯಲ್ಲಿ ಗೇಮಿಂಗ್‌, ವಿಡಿಯೊ ಸ್ಟ್ರೀಮಿಂಗ್‌ಗಳಿಗೆಲ್ಲ ಇನ್ನಷ್ಟು ಡೇಟಾ ಬೇಕಾಗುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್‌ಗಳು ವರ್ಚುವಲ್ ಆಗುವ ಹೊತ್ತಿಗೆ ಅಂಗಿಯನ್ನೋ ಪ್ಯಾಂಟನ್ನೋ ವರ್ಚುವಲ್ ಆಗಿ ನಾವು ನೋಡುವುದಕ್ಕೆ ನಮಗೆ ಒಂದಾದ ಮೇಲೆ ಒಂದರಂತೆ ಪಟಪಟನೆ ನೋಡಲು ಸೆಕೆಂಡಿಗೆ 500 ಎಂಬಿ ವೇಗದ ಡೇಟಾ ಸಾಲದು ಎಂಬ ಪರಿಸ್ಥಿತಿ ಬರುತ್ತದೆ. ಆಗ ನಮಗೆ 5ಜಿಯಿಂದ ಮುಂದೇನು ಎಂಬ ಸವಾಲು ಕಾಡಲು ಶುರುವಾಗುತ್ತದೆ.

ಇದಕ್ಕೆ ಈಗಾಗಲೇ ಟೆಲಿಕಾಂ ಕಂಪನಿಗಳು ತಯಾರಾಗಿವೆ. ಅದೇ ‘ಸ್ಮಾಲ್‌ ಸೆಲ್‌’ಗಳು. ಇವುಗಳನ್ನು ‘ಬೇಸ್ ಸ್ಟೇಷನ್‌’ಗಳು, ‘ಮ್ಯಾಕ್ರೋ ಬೇಸ್‌ ಸ್ಟೇಷನ್‌’ಗಳು ಎಂದೂ ಕರೆಯಲಾಗುತ್ತದೆ. ನಮಗೆ ಈಗ ಸಿಗುತ್ತಿರುವ 5ಜಿ ಸಂಕೇತಗಳು ಮೊಬೈಲ್‌ ಟವರ್‌ನಿಂದ ಹೊರಟು, ನೇರವಾಗಿ ಮೊಬೈಲ್ ತಲುಪುತ್ತಿವೆ. ಇವೆಲ್ಲ 700 ಮೆಗಾಹರ್ಟ್ಸ್‌ ತರಂಗಾಂತರಗಳು. ಇದರಲ್ಲಿ ಹೆಚ್ಚೆಂದರೆ 500 ಎಂಬಿ ಡೇಟಾ ಹೊತ್ತೊಯ್ಯಬಲ್ಲದು. ಈ ತರಂಗಾಂತರಗಳ ಅನುಕೂಲವೆಂದರೆ ಇವು ದೂರದವರೆಗೆ ಸಾಗಬಲ್ಲವು. ಗೋಡೆಯಂತಹ ಘನವಸ್ತುವನ್ನೂ ಭೇದಿಸಿ ಸಾಗುತ್ತವೆ.

ADVERTISEMENT

ಆದರೆ ಹೆಚ್ಚಿನ ಡೇಟಾ ಬೇಕು ಎಂದರೆ 26 ಗಿಗಾಹರ್ಟ್ಸ್‌ ತರಂಗಾಂತರಗಳನ್ನು ನಾವು ಬಳಸಬೇಕು. ಆದರೆ, ಇದರ ಸಮಸ್ಯೆಯೇನೆಂದರೆ, ಒಂದು ಸಣ್ಣ ತರಗೆಲೆ ಎದುರಾದರೂ ಈ ತರಂಗಾಂತರ ಅದನ್ನು ದಾಟಿ ಮುಂದೆ ಹೋಗದು. ಈ ಬ್ಯಾಂಡ್‌ನಿಂದ ಹೊರಡುವ ಸಂಕೇತಗಳು ಹೆಚ್ಚೆಂದರೆ ಒಂದು ಮೈಲು ದೂರ ಹೋಗಬಹುದು. ಹಾಗಾಗಿ ಈ ಮಿಲಿಮೀಟರ್ ವೇವ್‌ ಮೂಲಕ ಸಾಗುವ ಡೇಟಾವನ್ನು ಮನೆಯ ಒಳಗೆ ಬಳಸುವುದಕ್ಕೆ ನಮಗೆ ಸ್ಮಾಲ್‌ ಸೆಲ್‌ ರೇಡಿಯೋ ಉಪಕರಣಗಳು ಬೇಕು. ಈ ಸ್ಮಾಲ್‌ ಸೆಲ್ ರೇಡಿಯೋಗಳು ತರಂಗಾಂತರಗಳನ್ನು ಇನ್ನಷ್ಟು ದೂರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತವೆ. ಸಿಗ್ನಲ್ ಬೂಸ್ಟರ್‌ ರೀತಿ ಇವು ಕೆಲಸ ಮಾಡುತ್ತವೆ.
ಈ ಸ್ಮಾಲ್‌ ಸೆಲ್‌ ರೇಡಿಯೋ ಸಾಧನಗಳಲ್ಲೂ ಹಲವು ರೀತಿ ಇವೆ. ಈಗಾಗಲೇ ರಿಲಾಯನ್ಸ್‌ ಜಿಯೋ ಒಂದು ‘ಜಿಯೋ ಏರ್‌ ಫೈಬರ್’ ಎಂಬ ಉಪಕರಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅದು ವೈಫೈ ಸಾಧನದ ರೀತಿ ಕೆಲಸ ಮಾಡುತ್ತದೆ. ಅದರ ಹೊರತಾಗಿ, ಹೊರಾಂಗಣದಲ್ಲಿ ಅಳವಡಿಸಬಹುದಾದ ಸ್ಮಾಲ್‌ ಸೆಲ್‌ ಸಾಧನಗಳು ವ್ಯಾಪಕವಾಗಿ ಅಳವಡಿಕೆಯಾಗುವ ದಿನಗಳು ದೂರವಿಲ್ಲ. ಇವುಗಳನ್ನು ಹೆಚ್ಚು ಹೆಚ್ಚು ಡೇಟಾ ಬಳಕೆಯಾಗುವ ಪ್ರದೇಶಗಳಾದ ಮಾರ್ಕೆಟ್‌, ಸಂತೆಬೀದಿಗಳು, ಬಸ್‌ಸ್ಟ್ಯಾಂಡ್‌ಗಳು, ಮಾಲ್‌ಗಳಲ್ಲಿ ಅಳವಡಿಸಲಾಗುತ್ತದೆ. ಇವುಗಳಿಗೆ ಬಹುಶಃ 2023ರಲ್ಲಿ ಬಹುದೊಡ್ಡ ಮಾರುಕಟ್ಟೆಯೇ ಸೃಷ್ಟಿಯಾಗುವ ಲಕ್ಷಣವಿದೆ. ಅಲ್ಲದೆ, ಕಂಪನಿಗಳು ತಮ್ಮ ಕ್ಯಾಂಪಸ್ ಒಳಗೆ ಕೂಡ ಇವುಗಳನ್ನು ಖರೀದಿ ಮಾಡಿ ಅಳವಡಿಸಲು ತೊಡಗುತ್ತವೆ. ಈ ಸ್ಮಾಲ್‌ ಸೆಲ್ ಸಾಧನಗಳು ಕೇವಲ 5ಜಿಯಲ್ಲಿ ಮಾತ್ರವಲ್ಲ, ಮುಂಬರುವ 6ಜಿಯಲ್ಲೂ ಬಳಕೆಯಾಗುತ್ತವೆ.

ಇದನ್ನು ಅಳವಡಿಸುವುದು ತುಂಬಾ ಸುಲಭ. ಅಷ್ಟೇ ಅಲ್ಲ, ಇದರ ಬೇಡಿಕೆ ಹೆಚ್ಚುತ್ತಿರುವ ಹಾಗೆಯೇ ಉತ್ಪಾದನೆ ವೆಚ್ಚ ಕೂಡ ಕಡಿಮೆಯಾಗುವುದರಿಂದ ಅಷ್ಟೇ ಬೇಗ ಇವು ಬಳಕೆಗೂ ಬರುವ ಸಾಧ್ಯತೆಗಳಿವೆ.

ಇದರಲ್ಲಿ ಸಾಮಾನ್ಯವಾಗಿ ಮೂರು ಮುಖ್ಯ ವಿಧಗಳನ್ನು ತಾಂತ್ರಿಕವಾಗಿ ಗುರುತಿಸಲಾಗುತ್ತದೆ. ಫೆಮ್‌ಟೋಸೆಲ್‌ಗಳು ಸಾಮಾನ್ಯವಾಗಿ 150 ಅಡಿ ದೂರದವರೆಗೆ ಸಂಕೇತಗಳನ್ನು ಹರಿಬಿಡುತ್ತವೆ. 15 ಜನರು ಇದನ್ನು ಬಳಸಬಹುದು. ಇದರ ವೆಚ್ಚ ಕಡಿಮೆ. ಸಾಮಾನ್ಯವಾಗಿ ಒಂದು ಬೀದಿಗೆ ಈ ಫೆಮ್‌ಟೋಸೆಲ್‌ಗಳು ಸಾಲುತ್ತವೆ. ಹೆಚ್ಚಾಗಿ ಮನೆಗಳಲ್ಲಿ ಇವುಗಳನ್ನು ಬಳಸಬಹುದು. ರಿಲಾಯನ್ಸ್ ಜಿಯೋ ಘೋಷಿಸಿದ ಜಿಯೋ ಏರ್‌ಫೈಬರ್‌ ಇದೇ ವ್ಯಾಪ್ತಿಗೆ ಒಳಪಡುವ ಸಾಧನವಾಗಿದೆ. ಇನ್ನು ಪಿಕೋಸೆಲ್‌ಗಳು ಕಚೇರಿಗಳು, ಆಸ್ಪತ್ರೆ ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಸೂಕ್ತ. ಇವು ಸುಮಾರು 800 ಅಡಿಯವರೆಗೆ ಸಂಕೇತವನ್ನು ಹೊತ್ತೊಯ್ಯಬಲ್ಲವು. 50-60 ಜನರು ಇದನ್ನು ಒಮ್ಮೆಗೆ ಬಳಸಬಹುದು. ಇದಕ್ಕಿಂತ ಮೈಕ್ರೋಸೆಲ್‌ಗಳು ಸ್ವಲ್ಪ ಹೆಚ್ಚು ಸಾಮರ್ಥ್ಯವುಳ್ಳವು. ಇವುಗಳಿಗೆ ಸುಮಾರು 200 ಜನರು ಸಂಪರ್ಕಿಸಿಕೊಂಡು ಡೇಟಾ ಬಳಕೆ ಮಾಡಬಹುದು ಮತ್ತು ಸುಮಾರು 2 ಕಿ.ಮೀ.ವರೆಗೆ ಸಂಕೇತಗಳನ್ನು ಸಾಗಿಸಬಲ್ಲವು.
ಬಹುಶಃ 2022 ಅನ್ನು ನಾವು 5ಜಿ ಜಪಿಸುತ್ತ ಕಳೆದಿದ್ದೇವೆ. 2023ರಲ್ಲಿ 5ಜಿಯ ನಿಜವಾದ ಅನುಭವವನ್ನು ಪಡೆಯಲು ಶುರು ಮಾಡುತ್ತೇವೆ. ಅದರ ನಂತರ, 2024ರ ವರ್ಷವನ್ನು ನಾವು ಸ್ಮಾಲ್‌ ಸೆಲ್‌ಗಳ ಬಗ್ಗೆ ಮಾತನಾಡುತ್ತ ಕಳೆಯಲಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.