ADVERTISEMENT

ಕಾಡ್ಗಿಚ್ಚನ್ನು ಆರಿಸಬಲ್ಲದೆ ಕೃತಕ ಬುದ್ಧಿಮತ್ತೆ?

ಉದಯ ಯು.
Published 17 ಮೇ 2022, 20:30 IST
Last Updated 17 ಮೇ 2022, 20:30 IST
ಕಾಡ್ಗಿಚ್ಚು
ಕಾಡ್ಗಿಚ್ಚು    

ಅಮೆರಿಕ, ಗ್ರೀಸ್, ಭಾರತ, ಕೆನಡಾ, ಸ್ಪೇನ್, ಮೆಕ್ಸಿಕೋ, ಸ್ವೀಡನ್, ಬ್ರಿಟನ್ ಮೊದಲಾದ ದೇಶಗಳಲ್ಲಿ ಬೆಂಕಿ ಬಿದ್ದು, ಪ್ರತಿವರ್ಷ ಲಕ್ಷಾಂತರ ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ತಂತ್ರಜ್ಞಾನ ಪರಿಣತರು, ಕಾಳ್ಗಿಚ್ಚಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದಾರೆ.

ಪ್ರಕೃತಿ ಸಹಜ ಕಾರಣಗಳಿಂದಾಗಿ ಉಂಟಾಗುವ ಕಾಳ್ಗಿಚ್ಚು ಪ್ರಕರಣಗಳನ್ನು ಎಷ್ಟು ದಿನ ಮುಂಚಿತವಾಗಿ ತಿಳಿಯಬಹುದು?
ಕಾಳ್ಗಿಚ್ಚು ಉಂಟಾದಾಗ, ಅತ್ಯಂತ ಕಡಿಮೆ ಸಮಯದಲ್ಲಿ ಈ ಕಾಳ್ಗಿಚ್ಚು ಎಷ್ಟು ಬೇಗ ಮತ್ತು ಯಾವ ದಿಕ್ಕಿನಲ್ಲಿ ಹರಡಬಹುದು ಎಂದು ತಿಳಿಯಲು ಸಾಧ್ಯವೇ?

ADVERTISEMENT

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಲೇಸರ್ ಆಧಾರಿತ ಉಪಕರಣಗಳಿಂದ ಕಾಳ್ಗಿಚ್ಚು ಹರಡಂತೆ ನಿಯಂತ್ರಿಸಲು ಸಾಧ್ಯವೇ?

53 ವರ್ಷಗಳ ಹವಾಮಾನ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಿದ ಈ ತಜ್ಞರ ತಂಡ, ಈಗ ಲಭ್ಯವಿರುವ ಹವಾಮಾನ ಮಾಹಿತಿಯನ್ನು ಸಂಗ್ರಹಿಸಿದರು. ಈ ಮಾಹಿತಿಗಳನ್ನು ಆಧರಿಸಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ, ಅರಣ್ಯಪ್ರದೇಶದ ಹೊಸ ನಕ್ಷೆಯನ್ನು ಸಿದ್ಧಪಡಿಸಲಾಯಿತು. ಅರಣ್ಯ ಪ್ರದೇಶದಾದ್ಯಂತ ಇರುವ ಎತ್ತರದ ಪ್ರದೇಶಗಳು ಮತ್ತು ಕಂದಕಗಳಲ್ಲಿ ಇರುವ ಒತ್ತಡದ ಪ್ರಮಾಣವನ್ನು ಆಧರಿಸಿ ರಚಿಸಲಾದ ಈ ನಕ್ಷೆಯಿಂದ, ಏಳು ದಿನಗಳು ಮುಂಚಿತವಾಗಿ ಅರಣ್ಯಪ್ರದೇಶದಲ್ಲಿ ಎಲ್ಲಿ ಕಾಳ್ಗಿಚ್ಚು ಆರಂಭವಾಗಬಹುದು ಎಂದು ಮುನ್ನೆಚರಿಕೆ ನೀಡಲು ಸಾಧ್ಯವಿದೆ.

‘ವೈಫೈರ್’ ಹೆಸರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕಾಳ್ಗಿಚ್ಚು ಮುನ್ಸೂಚನೆ ಮತ್ತು ನಿಯಂತ್ರಣ ತಂತ್ರಾಂಶ ವ್ಯವಸ್ಥೆಯನ್ನು ಅಮೆರಿಕದ ಲಾಸ್ ಏಂಜೆಲಿಸ್‍ನ ಅಗ್ನಿಶಾಮಕ ಸಿಬ್ಬಂದಿ ಬಳಸುತ್ತಿದ್ದಾರೆ. ಕಾಳ್ಗಿಚ್ಚು ನಂದಿಸಲು ಹೋರಾಡುವ ಸಿಬ್ಬಂದಿ, ಕಾಳ್ಗಿಚ್ಚಿನ ಕುರಿತು ಅಧ್ಯಯನ ಮಾಡುವ ಸಂಶೋಧಕರು ಮತ್ತು ಕಾಳ್ಗಿಚ್ಚು ಎಲ್ಲಿ ಸಂಭವಿಸಿದೆ ಎಂದು ಆತಂಕದಲ್ಲಿರುವ ಜನಸಾಮಾನ್ಯರು ವೈಫೈರ್‌ನಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಫೌಂಡೇಷನ್ ಆರ್ಥಿಕ ನೆರವು ನೀಡಿರುವ ವೈಫೈರ್ ಯೋಜನೆಯಲ್ಲಿ ಅಗ್ನಿಶಾಮಕ ಮತ್ತು ಅರಣ್ಯತಜ್ಞರು ಹಾಗೂ ಸೂಪರ್ ಕಂಪ್ಯೂಟರ್ ಪರಿಣತರು ಜೊತೆಗೂಡಿ ಕೆಲಸ ಮಾಡಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಹಲವು ದಿನ ಮುಂಚಿತವಾಗಿ ಕಾಳ್ಗಿಚ್ಚು ಸಂಭವಿಸುವ ಬಗ್ಗೆ ಮಾಹಿತಿ ದೊರೆತರೆ, ಅದರಿಂದಾಗುವ ಪ್ರಮುಖ ಪ್ರಯೋಜನಗಳು ಹೀಗಿವೆ:

1.→ಕಾಳ್ಗಿಚ್ಚು ನಿಯಂತ್ರಣಕ್ಕೆ ಅಗತ್ಯವಾದ ಕಾರ್ಯಾಚರಣೆಯನ್ನು ರೂಪಿಸುವುದು ಮತ್ತು ಅಗ್ನಿನಿಯಂತ್ರಣಕ್ಕೆ ಬೇಕಾದ ಸಿಬ್ಬಂದಿ, ವಾಹನಗಳು ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

2. ಕಾಳ್ಗಿಚ್ಚಿನ ಹತ್ತಿರದ ವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವುದು ಸಾಧ್ಯವಾಗುತ್ತದೆ.

3.→ಕಾಳ್ಗಿಚ್ಚಿನಲ್ಲಿ ಹಾಳಾಗುವ ದೂರವಾಣಿ, ವಿದ್ಯುತ್, ಕುಡಿಯುವ ನೀರು, ಆಹಾರ ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಕಾಳ್ಗಿಚ್ಚಿಗೆ ಮುಖ್ಯ ಇಂಧನವಾಗುವುದು ಮರ, ಗಿಡಗಂಟಿ ಮತ್ತು ಹುಲ್ಲಿನ ಒಣಗಿದ ಭಾಗಗಳು ಮತ್ತು ತರಗೆಲೆಗಳು. ಕಾಳ್ಗಿಚ್ಚು ಹರಡಲು ಬಿಸಿಲು, ಗಾಳಿಯ ವೇಗ ಮತ್ತು ದಿಕ್ಕು ಪ್ರಮುಖ ಕಾರಣಗಳಾಗುತ್ತವೆ. ಇನ್ನು ಕಾಳ್ಗಿಚ್ಚು ಶುರುವಾಗಲು ಪ್ರಮುಖ ಕಾರಣ ಮನುಷ್ಯನ ಉದ್ದೇಶಪೂರ್ವಕ ಕುಕೃತ್ಯಗಳು ಅಥವಾ ನಿರ್ಲಕ್ಷ್ಯದ ವರ್ತನೆ. ಈ ಅಂಶಗಳನ್ನು ಪರಿಗಣಿಸಿ ಅಭಿವೃದ್ಧಿಪಡಿಸಲಾಗಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕಾಳ್ಗಿಚ್ಚು ಮುನ್ನೆಚರಿಕೆ ವ್ಯವಸ್ಥೆಯಿಂದ ಕಾಳ್ಗಿಚ್ಚು ಉಂಟಾದಾಗ ಕಾಡಿನಲ್ಲಿ ಯಾವ ದಿಕ್ಕಿನಲ್ಲಿ ಮತ್ತು ಎಷ್ಟು ವೇಗವಾಗಿ ಹರಡಬಹುದು ಎಂದು ಅತ್ಯಂತ ಕಡಿಮೆ ಸಮಯದಲ್ಲಿ ತಿಳಿಯಲು ಸಾಧ್ಯವಿದೆ. ಇಂತಹ ಸೌಲಭ್ಯವನ್ನು ವೈಫೈರ್‌ನಂತಹ ಮುನ್ನೆಚ್ಚರಿಕೆ ಮತ್ತು ಕಾಳ್ಗಿಚ್ಚು ನಿಯಂತ್ರಣ ವ್ಯವಸ್ಥೆಯಲ್ಲಿ ನೀಡಲು ಪ್ರಯತ್ನ ನೆಡೆದಿದೆ.

ನೆಲದ ಮಟ್ಟದಲ್ಲಿ ಹರಡುವ ಕಾಳ್ಗಿಚ್ಚು, ಮರಗಳನ್ನು ಆವರಿಸಿಕೊಂಡಂತೆ, ನೋಡುನೋಡುತ್ತಿರುವಂತೆ ಮರಗಳ ಎತ್ತರದಲ್ಲಿ ಹರಡಲು ಪ್ರಾರಂಭಿಸುತ್ತದೆ. ಕಾಡಿನ ಸೂರಿಗೆ ಬೆಂಕಿ ಬಿದ್ದಂತಹ ಪರಿಸ್ಥಿತಿ ಅದು. ಗಾಳಿಯೂ ಪೂರಕವಾದರೆ ವೇಗವಾಗಿ ಹರಡುವ ಇಂತಹ ಕಾಳ್ಗಿಚ್ಚನ್ನು ನಿಯಂತ್ರಿಸುವುದು ಅತ್ಯಂತ ಕಷ್ಟದ ಕೆಲಸವಾಗುತ್ತದೆ ಎಂಬುದು ಕಾಳ್ಗಿಚ್ಚು ನಂದಿಸಲು ಹೋರಾಡುವ ಸಿಬ್ಬಂದಿಗಳ ಅಭಿಪ್ರಾಯವಾಗಿದೆ.

ಕಾಳ್ಗಿಚ್ಚು ನಿಯಂತ್ರಿಸಲು ಬಳಸಲಾಗುವ ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ವಾಹನಗಳು ಅಥವಾ ಕಾಡಿನ ಕಚ್ಚಾ ರಸ್ತೆಗಳಲ್ಲಿ ಸಂಚರಿಸುವ ಅರಣ್ಯ ಇಲಾಖೆ ಬಳಸುವ ವಾಹನಗಳು, ಇವುಗಳಿಗೆ ವಿಶೇಷವಾದ ಲೇಸರ್ ಆಧಾರಿತ ಉಪಕರಣವನ್ನು ಅಳವಡಿಸಲಾಗುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ಕೆಲಸ ಮಾಡುವ ಈ ಲೇಸರ್ ಉಪಕರಣವು, ಮರಗಳಲ್ಲಿ ಎತ್ತರದಲ್ಲಿರುವ ಒಣಗಿದ ಎಲೆಗಳು, ಕೊಂಬೆಗಳು ಮತ್ತು ಹೂವು, ಕಾಯಿಗಳನ್ನು ಗುರುತಿಸುತ್ತದೆ. ನಂತರ ಅವುಗಳನ್ನು ಗುರಿಯಾಗಿಟ್ಟುಕೊಂಡು ಅರೆಕ್ಷಣ ಚಿಮ್ಮುವ ಲೇಸರ್‌ನಿಂದಾಗಿ, ಈ ಒಣಗಿದೆ ಎಲೆಗಳು, ಕೊಂಬೆಗಳು, ಹೂವು, ಕಾಯಿಗಳು ಕತ್ತರಿಸಿ ನೆಲಕ್ಕೆ ಬೀಳುತ್ತವೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಬಳಸಲಾಗುವ ಲೇಸರ್‌ನಿಂದಾಗಿ ಮರಗಳಿಗಾಗಲಿ, ಮನುಷ್ಯರು ಮತ್ತು ವನ್ಯಜೀವಿಗಳಿಗಾಗಲಿ ತೊಂದರೆಯಾಗದಂತೆ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಮರಗಳನ್ನು ಆವರಿಸಿಕೊಳ್ಳುವ ಬೆಂಕಿ, ಮರವನ್ನೇರಿ, ಕಾಡಿನ ಸೂರಿನಂತೆ ಹರಡಲು ಒಣಗಿದೆ ಕೊಂಬೆಗಳು, ಎಲೆಗಳು, ಹೂವು, ಕಾಯಿಗಳು ಇಂಧನವಾಗುತ್ತವೆ. ಇದು ಇಲ್ಲದಂತೆ ಮಾಡಿದಾಗ, ಕಾಳ್ಗಿಚ್ಚು ನೆಲಮಟ್ಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ಆಗ ಅದನ್ನು ನಿಯಂತ್ರಿಸಲು ಸುಲಭವಾಗುತ್ತದೆ.

ಕೆಲವೊಮ್ಮೆ ಕಾಳ್ಗಿಚ್ಚಿನ ನಡುವೆ ಸಿಕ್ಕಿಕೊಳ್ಳುವ ವನ್ಯಜೀವಿಗಳು ಮತ್ತು ಮನುಷ್ಯರನ್ನು ಸುರಕ್ಷಿತ ಪ್ರದೇಶಕ್ಕೆ ತರಲು ದಾರಿಗಳಿರುವುದಿಲ್ಲ. ಅಂತಹ ತುರ್ತು ಸಂದರ್ಭಗಳಲ್ಲಿ ಕೂಡ ಈ ಲೇಸರ್ ಆಧಾರಿತ ಉಪಕರಣವನ್ನು ಬಳಸಿ, ಕಾಳ್ಗಿಚ್ಚನ್ನು ನಿಯಂತ್ರಿಸಿ, ಜನ ಮತ್ತು ವನ್ಯಜೀವಿಗಳು ಹೊರಬರಲು ದಾರಿ ಮಾಡಿಕೊಡಲು ಸಾಧ್ಯವಿದೆ.

ಕಾಡಿಗೆ ಬೆಂಕಿ ಇಡುವ ಅಪರಾಧಿಗಳಿಂದಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಸಾವಿರಾರು ಎಕರೆ ಅರಣ್ಯಪ್ರದೇಶ ಅಗ್ನಿಗೆ ಆಹುತಿಯಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ತಂತ್ರಜ್ಞಾನ ಬಳಸಿ ಕಾಳ್ಗಿಚ್ಚು ಮುನ್ನೆಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಬಳಸಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.