ADVERTISEMENT

ಚೀನಾ: ಬಾಹ್ಯಾಕಾಶ ನಿಲ್ದಾಣ ‘ಘಟಕ’ ಉಡ್ಡಯನ

ಪಿಟಿಐ
Published 29 ಏಪ್ರಿಲ್ 2021, 5:31 IST
Last Updated 29 ಏಪ್ರಿಲ್ 2021, 5:31 IST
ಚೀನಾ ನಿರ್ಮಿಸಲಿರುವ ಬಾಹ್ಯಾಕಾಶ ನಿಲ್ದಾಣದ ಘಟಕವಾದ ‘ತಿಯಾನ್ಹೆ’ಯ ಉಡ್ಡಯನ ಗುರುವಾರ ನಡೆಯಿತು –ಎಎಫ್‌ಪಿ ಚಿತ್ರ
ಚೀನಾ ನಿರ್ಮಿಸಲಿರುವ ಬಾಹ್ಯಾಕಾಶ ನಿಲ್ದಾಣದ ಘಟಕವಾದ ‘ತಿಯಾನ್ಹೆ’ಯ ಉಡ್ಡಯನ ಗುರುವಾರ ನಡೆಯಿತು –ಎಎಫ್‌ಪಿ ಚಿತ್ರ   

ಬೀಜಿಂಗ್‌: ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ತನ್ನ ಕಾರ್ಯಕ್ರಮದ ಅಂಗವಾಗಿ ಚೀನಾ ದೇಶವು ನಿಲ್ದಾಣದ ಘಟಕವಾದ ‘ತಿಯಾನ್ಹೆ’ಯನ್ನು ಗುರುವಾರ ಉಡ್ಡಯನ ಮಾಡಿತು.

ದಕ್ಷಿಣದಲ್ಲಿರುವ ಹೈನನ್‌ ಪ್ರಾಂತ್ಯದ ವೆಂಚಾಂಗ್‌ ಸ್ಪ್ರೇಸ್‌ಕ್ರಾಫ್ಟ್‌ ಲಾಂಚ್‌ ಸೈಟ್‌ ಎಂಬ ಉಡ್ಡಯನ ಕೇಂದ್ರದಿಂದ, ಬಾಹ್ಯಾಕಾಶ ನಿಲ್ದಾಣದ ಈ ಘಟಕವನ್ನು ಹೊತ್ತ ‘ ದಿ ಲಾಂಗ್‌ ಮಾರ್ಚ್‌–5ಬಿ ವೈ2’ ಎಂಬ ರಾಕೆಟ್‌ ನಭದತ್ತ ಚಿಮ್ಮಿತು.

ಮುಂದಿನ ವರ್ಷದ ಅಂತ್ಯದ ವೇಳೆಗೆ ಬಾಹ್ಯಾಕಾಶ ನಿಲ್ದಾಣ ನಿರ್ಮಾಣವನ್ನು ಪೂರ್ಣಗೊಳಿಸುವ ಗುರಿ ಹೊಂದಿರುವ ಚೀನಾ, ಈ ನಿಟ್ಟಿನಲ್ಲಿ ಹಲವಾರು ಉಡ್ಡಯನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ADVERTISEMENT

‘ಟಿಯಾಂಗಾಂಗ್‌’ ಎಂಬ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ‘ದೇವಲೋಕದ ಅರಮನೆ’ ಎಂಬುದು ಇದರ ಅರ್ಥ.

‘ಈಗ ಉಡ್ಡಯನ ಮಾಡಿರುವ ವ್ಯೋಮಘಟಕವು (ತಿಯಾನ್ಹೆ) ಈ ನಿಲ್ದಾಣದ ನಿರ್ವಹಣೆ ಹಾಗೂ ನಿಯಂತ್ರಣ ಕಾರ್ಯ ಮಾಡುತ್ತದೆ. ಈ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂರು ಗಗನನೌಕೆಗಳು ಕೆಲ ಕಾಲ ತಂಗಲು ಅವಕಾಶ ಇರುತ್ತದೆ’ ಎಂದು ಚೀನಾ ಅಕಾಡೆಮಿ ಆಫ್‌ ಸ್ಪೇಸ್‌ ಟೆಕ್ನಾಲಜಿ (ಸಿಎಎಸ್‌ಟಿ)ಯ ಉಪಮುಖ್ಯ ವಿನ್ಯಾಸಕಾರ ಬಾಯಿ ಲಿನ್‌ಹೊ ಹೇಳಿದ್ದಾರೆ.

ತಿಯಾನ್ಹೆಯ ಉದ್ದ 16.6 ಮೀ. ಇದ್ದು, ಇದರ ವ್ಯಾಸ 4.2 ಮೀ. ಇದೆ. ಇದರ ಒಟ್ಟು ತೂಕ 22.5 ಟನ್‌ ಇದ್ದು, ಇದು ಚೀನಾ ಅಭಿವೃದ್ಧಿಪಡಿಸಿರುವ ದೊಡ್ಡ ಗಗನನೌಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.