ADVERTISEMENT

ಚಂದ್ರನ ಮೇಲಿಳಿದ ಚೀನಾದ ಗಗನನೌಕೆ

ಚಂದ್ರನ ಶಿಲೆಗಳನ್ನು ಭೂಮಿಗೆ ತರುವ ಮೊದಲ ಪ್ರಯತ್ನ

ಏಜೆನ್ಸೀಸ್
Published 2 ಡಿಸೆಂಬರ್ 2020, 6:29 IST
Last Updated 2 ಡಿಸೆಂಬರ್ 2020, 6:29 IST
ಚೀನಾ ಉಡ್ಡಯನ ಮಾಡಿರುವ ‘ಚಾಂಗಿ 5’ ಗಗನನೌಕೆ ಚಂದ್ರ ಮೇಲ್ಮೈಯಲ್ಲಿ ಇಳಿದಿದ್ದು, ಗಗನನೌಕೆಯ ನೆರಳು ಇರುವ ಚಿತ್ರವನ್ನು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿದೆ – ಎಎಫ್‌ಪಿ ಚಿತ್ರ
ಚೀನಾ ಉಡ್ಡಯನ ಮಾಡಿರುವ ‘ಚಾಂಗಿ 5’ ಗಗನನೌಕೆ ಚಂದ್ರ ಮೇಲ್ಮೈಯಲ್ಲಿ ಇಳಿದಿದ್ದು, ಗಗನನೌಕೆಯ ನೆರಳು ಇರುವ ಚಿತ್ರವನ್ನು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿದೆ – ಎಎಫ್‌ಪಿ ಚಿತ್ರ   

ಬೀಜಿಂಗ್‌: ಚಂದ್ರನ ಮೇಲಿನ ಶಿಲೆಗಳನ್ನು ತರುವ ಸಲುವಾಗಿ ಉಡಾವಣೆ ಮಾಡಿರುವ ’ಚಾಂಗಿ 5‘ ಗಗನನೌಕೆ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ ಎಂದು ಚೀನಾ ಹೇಳಿದೆ.

ಚಂದ್ರನ ಮೇಲೆ ಇಳಿಯುವ ಸಲುವಾಗಿ 1970ರಿಂದ ಬಾಹ್ಯಾಕಾಶ ಅನ್ವೇಷಣೆಗಳು ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಭೂಮಿಯ ಈ ಉಪಗ್ರಹದ ಮೇಲಿನ ಶಿಲೆಗಳನ್ನು ತರಲಾಗುತ್ತಿದೆ.

‘ಮಂಗಳವಾರ ರಾತ್ರಿ 11 ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 3) ಗಗನನೌಕೆ ‘ಚಾಂಗಿ 5’ ಚಂದ್ರನ ಮೇಲ್ಮೈ ಮೇಲೆ ಗುರುತಿಸಿದ್ದ ನಿಗದಿತ ಸ್ಥಳದಲ್ಲಿ ಯಶಸ್ವಿಯಾಗಿ ಇಳಿಯಿತು’ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ADVERTISEMENT

ಎರಡು ದಿನಗಳ ಕಾಲ ಅಲ್ಲಿನ ಮೇಲ್ಮೈಯನ್ನು ಕೊರೆಯಲಾಗುತ್ತದೆ. ಚಂದ್ರನ ಅಂಗಳದಿಂದ ಒಟ್ಟು 2 ಕೆ.ಜಿಯಷ್ಟು ಶಿಲೆಗಳನ್ನು ಈ ಗಗನನೌಕೆ ಸಂಗ್ರಹಿಸಲಿದೆ. ಈ ಸಂಗ್ರಹಿತ ಶಿಲೆಗಳನ್ನು ಪುನಃ ಭೂ ಕಕ್ಷೆಗೆ ತರಲಾಗುವುದು. ಅಲ್ಲಿಂದ ಮತ್ತೊಂದು ವ್ಯೋಮನೌಕೆ (ಕ್ಯಾಪ್ಸೂಲ್‌) ಮೂಲಕ ಭೂಮಿಗೆ ತರಲಾಗುತ್ತದೆ. ಈ ಶಿಲೆಗಳನ್ನು ಹೊತ್ತ ಈ ವ್ಯೋಮನೌಕೆ ಈ ತಿಂಗಳ ಮಧ್ಯ ಭಾಗದಲ್ಲಿ ಮಂಗೋಲಿಯಾದಲ್ಲಿ ಇಳಿಯಲಿದೆ.

ಗಗನನೌಕೆ ಇಳಿದ ಸ್ಥಳದಲ್ಲಿನ ಚಿತ್ರಗಳನ್ನು ಸಂಸ್ಥೆ ಪ್ರಕಟಿಸಿದೆ. ಚಂದ್ರನ ಬಂಜರು ಮೇಲ್ಮೈ ಹಾಗೂ ಗಗನನೌಕೆಯ ನೆರಳು ಈ ಚಿತ್ರಗಳಲ್ಲಿ ಕಾಣಿಸುತ್ತದೆ.

ಚೀನಾದ ದಕ್ಷಿಣ ದ್ವೀಪ ಹೈನಾನ್‌ನಲ್ಲಿನ ಉಡ್ಡಯನ ಕೇಂದ್ರದಿಂದ ಚಾಂಗಿ–5 ಗಗನನೌಕೆಯನ್ನು ಚಂದ್ರನತ್ತ ಉಡಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.