ADVERTISEMENT

ಮಂಗಳನ ಅಂಗಳದ ಚಿತ್ರ ರವಾನಿಸಿದ ಚೀನಾದ ‘ಟಿಯಾನ್ವೆನ್‌–1’

ಏಜೆನ್ಸೀಸ್
Published 6 ಫೆಬ್ರುವರಿ 2021, 11:00 IST
Last Updated 6 ಫೆಬ್ರುವರಿ 2021, 11:00 IST
‘ಟಿಯಾನ್ವೆನ್‌–1’ ಕಳುಹಿಸಿರುವ ಮಂಗಳ ಗ್ರಹದ ಚಿತ್ರ      ಎಎಫ್‌ಪಿ ಚಿತ್ರ
‘ಟಿಯಾನ್ವೆನ್‌–1’ ಕಳುಹಿಸಿರುವ ಮಂಗಳ ಗ್ರಹದ ಚಿತ್ರ      ಎಎಫ್‌ಪಿ ಚಿತ್ರ   

ಬೀಜಿಂಗ್‌: ಮಂಗಳ ಗ್ರಹದ ಮೊದಲ ಛಾಯಾಚಿತ್ರಗಳನ್ನು ಚೀನಾದ ‘ಟಿಯಾನ್ವೆನ್‌–1’ ಬಾಹ್ಯಾಕಾಶ ನೌಕೆ ಕಳುಹಿಸಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ.

ಕಳೆದ ವರ್ಷ ಜುಲೈನಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಮಂಗಳ ಗ್ರಹದ ಕಕ್ಷೆಗೆ ಈ ನೌಕೆ ಫೆಬ್ರುವರಿ 10ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಕಪ್ಪು–ಬಿಳುಪಿನ ಚಿತ್ರಗಳನ್ನು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದೆ. ಈ ಚಿತ್ರಗಳನ್ನು ಮಂಗಳ ಗ್ರಹದಿಂದ ಸುಮಾರು 22 ಲಕ್ಷ ಕಿಲೋ ಮೀಟರ್‌ ದೂರದಿಂದ ತೆಗೆಯಲಾಗಿದೆ ಎಂದು ಸಿಎಎನ್‌ಎಸ್‌ಎ ತಿಳಿಸಿದೆ.

ADVERTISEMENT

ಐದು ಟನ್‌ ತೂಕದ ‘ಟಿಯಾನ್ವೆನ್‌–1’ ಬಾಹ್ಯಾಕಾಶ ನೌಕೆಯು ‘ರೋವರ್‌’ ಮತ್ತು ‘ಲ್ಯಾಂಡರ್‌’ ಅನ್ನು ಒಳಗೊಂಡಿದೆ. ಮಂಗಳ ಗ್ರಹದ ಮೇಲಿನ ಮಣ್ಣಿನ ಬಗ್ಗೆ ಈ ನೌಕೆ ಅಧ್ಯಯನ ಮಾಡಲಿದೆ.

ಬಾಹ್ಯಾಕಾಶ ಯೋಜನೆಗಳಿಗೆ ಚೀನಾ ಅಪಾರ ಮೊತ್ತದ ಹಣವನ್ನು ವಿನಿಯೋಗಿಸಿದ್ದು, ಅಮೆರಿಕದ ಜತೆ ಪೈಪೋಟಿಗೂ ಇಳಿದಿದೆ. ಕಳೆದ ದಶಕದಲ್ಲಿ ಹಲವು ಉತ್ತಮ ಸಾಧನೆಗಳನ್ನು ಸಹ ಮಾಡಿದೆ.

ಮಂಗಳ ಅಂಗಳಕ್ಕೆ ತಲುಪಲು ಚೀನಾ ಈ ಹಿಂದೆಯೂ ಹಲವು ಬಾರಿ ಪ್ರಯತ್ನಿಸಿದೆ. 2011ರಲ್ಲಿ ರಷ್ಯಾ ಜತೆ ಸೇರಿ ರೂಪಿಸಿದ್ದ ಯೋಜನೆ ವಿಫಲಗೊಂಡಿತ್ತು.

ಟಿಯಾನ್‌ವೆನ್‌-1 ಈ ವರ್ಷದ ಅಂತ್ಯಕ್ಕೆ ಮಂಗಳನ ಅಂಗಳದಲ್ಲಿ ಇಳಿಯುವ ಸಾಧ್ಯತೆ ಇದೆ. ಸದ್ಯಕ್ಕೆ ‘ಟಿಯಾನ್ವೆನ್‌–1’ ಉತ್ತಮ ಸ್ಥಿತಿಯಲ್ಲಿದೆ ಎಂದು ಸಿಎನ್‌ಎಸ್‌ಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.