ADVERTISEMENT

ಮುಂದಿನ ವರ್ಷ ಮಾನವಸಹಿತ ಗಗನಯಾನ: ಇಸ್ರೊದಿಂದ ಭರದ ಸಿದ್ಧತೆ

ವ್ಯೋಮಯಾನಿಗಳಿರುವ ಘಟಕಗಳ ಲ್ಯಾಂಡಿಂಗ್‌ಗೆ ಎರಡು ಸ್ಥಳಗಳ ಆಯ್ಕೆ

ಪಿಟಿಐ
Published 4 ಜನವರಿ 2022, 14:30 IST
Last Updated 4 ಜನವರಿ 2022, 14:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಮುಂದಿನ ವರ್ಷ ಮಾನವಸಹಿತ ಗಗನಯಾನಕ್ಕೆ ಭರದ ಸಿದ್ಧತೆ ನಡೆಸುತ್ತಿರುವ ಇಸ್ರೊ, ವ್ಯೋಮನೌಕೆಯಲ್ಲಿ ಗಗನಯಾನಿಗಳ ಬಳಕೆಗಾಗಿ ವಿಶಿಷ್ಟ ಘಟಕವನ್ನು ವಿನ್ಯಾಸಗೊಳಿಸುತ್ತಿದೆ.

ವ್ಯೋಮನೌಕೆ ಭೂಮಿಗೆ ಮರಳಿದ ಮೇಲೆ, ಗಗನಯಾನಿಗಳಿರುವ ಘಟಕ ‘ಕ್ರ್ಯೂ ಮಾಡ್ಯೂಲ್’ (ಸಿಎಂ) ಸುರಕ್ಷಿತವಾಗಿ ಇಳಿಯಲು ಎರಡು ಸ್ಥಳಗಳನ್ನು ಇಸ್ರೊ ಗುರುತಿಸಿ, ಅಭಿವೃದ್ಧಿಪಡಿಸುತ್ತಿದೆ. ಈ ಘಟಕ ಇಳಿಯಲು ಅರಬ್ಬಿ ಸಮುದ್ರ ತೀರ ಮೊದಲ ಆಯ್ಕೆಯಾಗಿದೆ ಎಂದು ಬೆಂಗಳೂರಿನಲ್ಲಿರುವ ಇಸ್ರೊದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್‌ಎಸ್‌ಎಫ್‌ಸಿ) ನಿರ್ದೇಶಕ ಡಾ.ಉನ್ನಿಕೃಷ್ಣನ್ ನಾಯರ್ ಹೇಳಿದ್ದಾರೆ.

‘ಮನೋರಮಾ ಇಯರ್‌ಬುಕ್–2022’ರಲ್ಲಿ ಪ್ರಕಟವಾಗಲಿರುವ ‘ಇಂಡಿಯನ್‌ ಹ್ಯೂಮನ್ ಸ್ಪೇಸ್ ಮಿಷನ್’ ಎಂಬ ಲೇಖನದಲ್ಲಿ ಅವರು ಈ ವಿಷಯ ಕುರಿತು ವಿವರಿಸಿದ್ದಾರೆ.

ADVERTISEMENT

ಗಗನಯಾನಿಗಳಿರುವ ಘಟಕದ ಲ್ಯಾಂಡಿಂಗ್‌ಗೆ ಬಂಗಾಳ ಕೊಲ್ಲಿಯು ಎರಡನೇ ಆಯ್ಕೆಯಾಗಿದೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆಹೆಚ್ಚು ಶಾಂತವಾಗಿರುವ ಅರಬ್ಬಿ ಸಮುದ್ರವೇ‘ಸಿಎಂ’ ಲ್ಯಾಂಡಿಂಗ್‌ಗೆ ಮೊದಲ ಆಯ್ಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಾನವಸಹಿತ ವ್ಯೋಮಯಾನಕ್ಕೂ ಮೊದಲು ಮಾನವರಹಿತ ಗಗನನೌಕೆ ಉಡ್ಡಯನ ನಡೆಸಲಾಗುವುದು. ಈ ವರ್ಷದ ಮಧ್ಯ ಭಾಗದಲ್ಲಿ ಇದನ್ನು ನಿಗದಿಪಡಿಸಲಾಗಿದೆ. ಗಗನಯಾನ್ ಆರ್ಬಿಟಲ್ ಮಾಡ್ಯೂಲ್‌ (ಒಎಂ) ಎಂದು ಕರೆಯಲಾಗುವ ವ್ಯೋಮನೌಕೆ ಎರಡು ಘಟಕಗಳನ್ನು ಹೊಂದಿರುತ್ತದೆ. ಗಗನಯಾನಿಗಳು ಇರುವ ಘಟಕ (ಸಿಎಂ) ಹಾಗೂ ಸೇವಾ ಘಟಕ (ಎಸ್‌ಎಂ). ಇದರ ಒಟ್ಟು ತೂಕ 8,000 ಕೆಜಿ ಇರಲಿದೆ ಎಂದು ಅವರು ವಿವರಿಸಿದ್ದಾರೆ.

ಗಗನಯಾನಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಸಿಎಂ’ ಅನ್ನು ರೂಪಿಸಲಾಗಿದೆ. ಈ ಘಟಕ ಭೂಮಿಗೆ ಮರಳಿ, ಸಮುದ್ರದಲ್ಲಿ ನಿಗದಿತ ಸ್ಥಳದಲ್ಲಿ ಲ್ಯಾಂಡ್‌ ಆದ ತಕ್ಷಣ, ಅದರ ಸ್ಥಾನಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗುವುದು. ಈ ಸ್ಥಳಕ್ಕೆ ಸಮೀಪದಲ್ಲಿಯೇ ಇರುವ ಹಡಗುಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿರುವ ತಂಡಕ್ಕೆ ಈ ವಿವರಗಳನ್ನು ರವಾನಿಸಲಾಗುವುದು.

ಗಗನಯಾನಿಗಳು ಈ ಘಟಕದಲ್ಲಿಯೇ ಎರಡು ದಿನಗಳ ಕಾಲ ವಾಸವಾಗಿರಲು ಬೇಕಾದ ವ್ಯವಸ್ಥೆಯನ್ನು ‘ಸಿಎಂ’ನಲ್ಲಿ ಅಳವಡಿಸಲಾಗಿರುತ್ತದೆ. ಆದರೆ, ಭೂಮಿಗೆ ಬಂದಿಳಿದ ಎರಡು ಗಂಟೆಗಳ ನಂತರ ಗಗನಯಾನಿಗಳನ್ನು ಈ ಘಟಕದಿಂದ ಹೊರಕ್ಕೆ ಕರೆಸಿಕೊಳ್ಳುವ ವಿಶ್ವಾಸವನ್ನು ಇಸ್ರೊ ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.