ADVERTISEMENT

ಬ್ಯಾಕ್ಟೀರಿಯಾಗಳು ಕೆಟ್ಟದ್ದು ಮಾತ್ರವಲ್ಲ ಒಳ್ಳೆಯದ್ದನ್ನೂ ಮಾಡುತ್ತವೆ!

ಅಮೃತೇಶ್ವರಿ ಬಿ.
Published 30 ನವೆಂಬರ್ 2022, 2:41 IST
Last Updated 30 ನವೆಂಬರ್ 2022, 2:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬ್ಯಾಕ್ಟೀರಿಯಾಗಳು ಎಂದ ಕೂಡಲೇ ಸಾಮಾನ್ಯವಾಗಿ ಎಲ್ಲರೂ ರೋಗಕಾರಕಗಳೆಂದೇ ಅರ್ಥಮಾಡುಕೊಳ್ಳುತ್ತೇವಷ್ಟೆ. ಆದರೆ ಹಾಲು ಮೊಸರಾಗುವುದು, ದೋಸೆ-ಇಡ್ಲಿ ಹಿಟ್ಟು ಹುದುಗುವುದು, ನಾವು ತಿಂದ ಆಹಾರ ಜೀರ್ಣವಾಗುವುದು, ಅದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು – ಇವೆಲ್ಲವೂ ಬ್ಯಾಕ್ಟೀರಿಯಾಗಳಿಂದಲೇ ಆಗುವುದು. ಅಲ್ಲದೇ ಯಾವುದೋ ಬ್ಯಾಕ್ಟೀರಿಯಾದಿಂದ ತಗುಲುವ ಸೋಂಕನ್ನು ಗುಣಪಡಿಸುವ ಆ್ಯಂಟಿಬಯೋಟಿಕ್‌ ಔಷಧಗಳನ್ನು ತಯಾರಿಸುವುದೂ ಮತ್ತೊಂದು ಬ್ಯಾಕ್ಟೀರಿಯಾದಿಂದಲೇ!

ಅರ್ಥಾತ್‌, ಇವುಗಳಲ್ಲಿ ಒಂದಿಷ್ಟು ಬ್ಯಾಕ್ಟೀರಿಯಾಗಳು ನಮಗೆ ಒಳ್ಳೆಯದನ್ನೂ ಮಾಡುತ್ತವೆ. ಇವನ್ನೇ ಪ್ರೋಬಯೋಟಿಕ್ಸ್‌ ಎನ್ನುವುದು. ಇವು ನಮ್ಮ ಸುತ್ತಲೂ ಇವೆ. ನಮ್ಮ ಕರುಳಿನಲ್ಲಿಯೂ ಇರುತ್ತವೆ. ಜೀರ್ಣಕ್ರಿಯಾವ್ಯವಸ್ಥೆಯನ್ನು ಸ್ವಾಸ್ಥ್ಯವಾಗಿರಿಸುತ್ತವೆ; ತನ್ಮೂಲಕ ಇಡೀ ದೇಹವನ್ನು ಆರೋಗ್ಯವಾಗಿರಿಸುತ್ತವೆ. ಕರುಳಿನಲ್ಲಿರುವ ಈ ಬ್ಯಾಕ್ಟೀರಿಯಾಗಳು ಮತ್ತೊಂದು ಮಹತ್ಕಾರ್ಯವನ್ನು ಮಾಡುತ್ತಿವೆ ಎಂದು ಈಗ ವರದಿಯಾಗಿದೆ. ಅದುವೇ ಕ್ಯಾನ್ಸರ್‌ ಕಿಮೋಥೆರಪಿ ತೆಗೆದುಕೊಂಡಿರುವ ರೋಗಿಗಳ ದೇಹದಲ್ಲಿ ಬಿಳಿರಕ್ತಕಣಗಳನ್ನು ಉತ್ಪಾದಿಸಲೂ ಸಹಕಾರಿಯಾಗಿವೆ ಎನ್ನುತ್ತಿದೆ, ಜಪಾನಿನ ಹೊಕೈಡೋ ವಿಶ್ವವಿದ್ಯಾನಿಲಯದ ಡೈಗೋ ಹಶಿಮೋಟೋ ಮತ್ತು ಟಕೋನರಿ ತೇಷಿಮಾ ಅವರ ಸಂಶೋಧನೆ.

ಕ್ಯಾನ್ಸರ್‌ ಎನ್ನುವ ಹೆಸರು ಕೇಳಿದಾಗ ಭಯಬೀಳುವುದು ಸಹಜ. ಕಾಯಿಲೆಯ ಭಯ ಅಥವಾ ಗುಣಪಡಿಸಲು ತೆಗೆದುಕೊಳ್ಳುವ ಔಷಧ ಕಿಮೋಥೆರಪಿಗಳ ಪರಿಣಾಮದಿಂದಲೇ ಒಂದಿಷ್ಟು ಜನ ಮರಣಿಸಬಹುದು. ದೀರ್ಘಕಾಲದ ಕ್ಯಾನ್ಸರ್‌ ಕಿಮೋಥೆರಪಿಯು ಅಷ್ಟೊಂದು ತ್ರಾಸದಾಯಕವಾಗಿರುತ್ತದೆ. ವಿಕಿರಣಗಳು ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುವ ಜೊತೆಗೆ ಆರೋಗ್ಯಕರ ರಕ್ತಕಣಗಳನ್ನೂ ನಾಶಮಾಡಿಬಿಡುತ್ತವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯೇ ಇರುವುದಿಲ್ಲ. ಆಗ ಹೊಸ ರಕ್ತಕಣಗಳ ಉತ್ಪಾದನೆಯೂ ಸುಲಭವಲ್ಲ. ಆದರೆ ದೀರ್ಘಕಾಲದ ಕಿಮೋಥೆರಪಿಯ ನಂತರ ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಇರುವಂತೆ ನೋಡಿಕೊಂಡರೆ ಅವು ಬಿಳಿರಕ್ತಕಣಗಳನ್ನು ಉತ್ಪಾದಿಸಬಲ್ಲವು ಎನ್ನುತ್ತಾರೆ, ಹಶಿಮೋಟೋ ಮತ್ತು ತೇಷಿಮಾ.

ADVERTISEMENT

ಕ್ಯಾನ್ಸರ್‌ ಕಿಮೋಥೆರಪಿಯ ನಂತರ ದೇಹವು ಯಾವುದೇ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಬಿಳಿರಕ್ತಕಣಗಳು ಸರಿಯಾದ ಪ್ರಮಾಣದಲ್ಲಿ ಇದೆಯೆಂದರೆ ಮತ್ತಾವುದೇ ಸೋಂಕುಗಳನ್ನು ಸುಲಭವಾಗಿ ಹತ್ತಿಕ್ಕಲು ಸಾಧ್ಯವಂತೆ. ಇದನ್ನು ಪರೀಕ್ಷಿಸಲು ಹಶಿಮೋಟೋ ಮತ್ತು ತೇಷಿಮಾ, ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಮೊದಲು ಇಲಿಗಳ ದೇಹಕ್ಕೆ ಕ್ಯಾನ್ಸರ್‌ ಕಾಯಿಲೆಯನ್ನು ತರಿಸಿದ್ದಾರೆ. ನಂತರ ‘5-ಫ್ಲೋರೋಯುರಾಸಿಲ್‌’ ಎನ್ನುವ ಚುಚ್ಚುಮದ್ದು, ಅಂದರೆ ಕ್ಯಾನ್ಸರ್‌ ಅನ್ನು ಗುಣಪಡಿಸುವ ಔಷಧವನ್ನು ನೀಡಿ, ಜೊತೆಗೆ ರಕ್ತಕಣಗಳನ್ನು ಉತ್ಪಾದಿಸುವ ಆರೋಗ್ಯಕರ ಅಸ್ಥಿಮಜ್ಜೆಯನ್ನು ಕಸಿಮಾಡಿದ್ದಾರೆ. ಅಸ್ಥಿಮಜ್ಜೆಯಲ್ಲಿರುವ ‘ಟಿ-ಲಿಂಫೋಸೈಟ್‌’ ಎನ್ನುವ ಕೋಶಗಳಲ್ಲಿ ಉತ್ಪಾದನೆಯಾಗುವ ‘ಇಂಟರ್‌ಲ್ಯುಕಿನ್ಸ್‌ -17’ (IL-17) ಎನ್ನುವ ಪ್ರೋಟಿನ್‌ಗಳಿಂದ ಬಿಳಿರಕ್ತಕಣಗಳು ಉತ್ಪಾದನೆಯಾಗುತ್ತವೆ. ಆದರೆ ಕಿಮೋಥೆರಪಿಯ ನಂತರ ಈ ಟಿ-ಲಿಂಫೋಸೈಟುಗಳು IL-17 ಪ್ರೋಟಿನ್‌ನನ್ನು ರೂಪಿಸುವುದರಲ್ಲಿ ವ್ಯತ್ಯಾಸವಾಗಿಬಿಡುತ್ತದೆ. ಬಿಳಿರಕ್ತಕಣಗಳ ಉತ್ಪಾದನೆಯೂ ಆಗುವುದಿಲ್ಲ. ಈ ಕ್ಯಾನ್ಸರ್‌ ಚಿಕಿತ್ಸೆಯನ್ನು ಪಡೆದ ಇಲಿಗಳಲ್ಲಿ ಆಗಿದ್ದೂ ಇದೆ. ಆ್ಯಂಟಿಬಯೋಟಿಕ್‌ ಮಾತ್ರೆಗಳನ್ನು ನೀಡಿದಾಗ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳೂ ನಾಶವಾಗಿ ಟಿ-ಜೀವಕೊಶಗಳಿಂದಾಗಬೇಕಿದ್ದ IL-17 ಪ್ರೋಟಿನ್‌ ಉತ್ಪಾದನೆಯಾಗದೆ ಬಿಳಿರಕ್ತಕಣಗಳೂ ಹುಟ್ಟದಾಗುತ್ತದೆ.

ಬಿಳಿರಕ್ತಕಣಗಳು ನಮ್ಮ ಪ್ರತಿರೋಧ ವ್ಯವಸ್ಥೆಯ ಒಂದು ಭಾಗ. ಅವುಗಳಲ್ಲೂ ಗ್ರ್ಯಾನ್ಯುಲೋಸೈಟು, ಮಾನೋಸೈಟು ಮತ್ತು ಲಿಂಫೋಸೈಟುಗಳೆಂಬ ಬಗೆಗಳಿವೆ. ಗ್ರ್ಯಾನುಲೋಸೈಟುಗಳ ಸಾಮಾನ್ಯ ಬಗೆಯೆಂದರೆನ್ಯೂಟ್ರೋಫಿಲ್. ಇವು ನಮ್ಮ ದೇಹವನ್ನು ಅತಿಕ್ರಮಿಸುವ ಸೂಕ್ಷ್ಮಾಣುಜೀವಿಗಳನ್ನು ಕೊಂದು ನಮ್ಮನ್ನು ಸೋಂಕಿನಿಂದ ಪಾರುಮಾಡುತ್ತವೆ. ದೇಹ ಸೋಂಕಿಗೆ ತುತ್ತಾದಾಗ ತುರ್ತಾಗಿ ಇರುವುದಕ್ಕಿಂತಲೂ ಹೆಚ್ಚಿನ ನ್ಯೂಟ್ರೋಫಿಲ್‌ಗಳನ್ನು ಉತ್ಪಾದಿಸುತ್ತದೆ. ಇದನ್ನು ‘ಎಮರ್ಜೆನ್ಸಿ ಗ್ರ್ಯಾನ್ಯುಲೋಪಯೋಸಿಸ್‌’ ಎನ್ನುತ್ತೇವೆ. ಸಾಮಾನ್ಯವಾಗಿ ಕ್ಯಾನ್ಸರ್‌ ರೋಗಿಗಳಲ್ಲಿ ಹಾಗೂ ಕಿಮೋಥೆರಪಿಯ ನಂತರ ರಕ್ತದಲ್ಲಿ ಈ ನ್ಯೂಟ್ರೋಫಿಲ್‌ಗಳ ಸಂಖ್ಯೆ ಕಡಿಮೆಯಾಗಿರುತ್ತದೆ. ಆಗಲೂ ನಮ್ಮ ದೇಹ ಬಿಳಿರಕ್ತಕಣಗಳನ್ನು ಉತ್ಪಾದನೆ ಮಾಡುತ್ತದೆ. ಕಿಮೋಥೆರಪಿಯ ನಂತರ ಯಾವುದೇ ಸೋಂಕು ಇಲ್ಲದಾಗಲೂ ಬಿಳಿರಕ್ತಕಣಗಳು ಹೆಚ್ಚಾಗಿ ಉತ್ಪಾದನೆಯಾಗುವುದನ್ನು ಇವರು ಗಮನಿಸಿದರು. ಅದನ್ನು ಪ್ರತಿಕ್ರಿಯಾತ್ಮಕ, ಎಂದರೆ ‘ರಿಯಾಕ್ಟಿವ್‌ ಗ್ರ್ಯಾನ್ಯುಲೋಪಯೋಸಿಸ್‌’ ಎನ್ನುತ್ತಾರೆ. ಆದರೆ ಹೀಗೇಕೆ ನ್ಯೂಟ್ರೋಫಿಲ್‌ ಬಿಳಿರಕ್ತಕಣಗಳು ಉತ್ಪಾದನೆಯಾಗುತ್ತವೆ ಎನ್ನುವುದು ಹಶಿಮೋಟೋ ಮತ್ತು ತೇಷಿಮಾ ಅವರಿಗೆ ಖಚಿತವಾಗಲಿಲ್ಲವಂತೆ. ಇವರು ಇದಕ್ಕೆ ಮತ್ತೊಂದು ಪರೀಕ್ಷೆಯನ್ನು ಮಾಡಿದರು. ಅದುವೇ ‘ಫೀಕಲ್‌ ಮೈಕ್ರೋಬಯೋಟಾ ಟ್ರಾನ್ಸ್ ಪ್ಲಾಂಟೇಷನ್’.‌ ಎಂದರೆ ಆರೋಗ್ಯವಂತ ಇಲಿಗಳ ಚರಟ(ಮಲ)ದಿಂದ ಬ್ಯಾಕ್ಟೀರಿಯಾಗಳನ್ನು ಪ್ರತ್ಯೇಕಿಸಿ ಈ ಕ್ಯಾನ್ಸರ್‌ ಇಲಿಗಳಿಗೆ ಕಸಿ ಮಾಡುವುದು. ಆಗ ಬಿಳಿರಕ್ತಕಣಗಳ ಉತ್ಪಾದನೆಯ ವೇಗ ಹೆಚ್ಚಾಯಿತು. ಸಹಜಸ್ಥಿತಿಯಲ್ಲಿರುವಾಗ ನ್ಯೂಟ್ರೋಫಿಲ್‌ಗಳು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತವೆ. ಈ ನ್ಯೂಟ್ರೋಫಿಲ್‌ಗಳ ಸಂಖ್ಯೆ ಕ್ಷೀಣಿಸಿದಾಗ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿಯೂ ವ್ಯತ್ಯಾಸವಾಗುತ್ತದೆ ಹಾಗೂ ಟಿ-ಲಿಂಫೋಸೈಟುಗಳಿಗೆ IL-17 ಪ್ರೊಟೀನು ಉತ್ಪಾದಿಸುವಂತೆ ಪ್ರಚೋದಿಸುತ್ತದೆ. ತಕ್ಷಣವೇ ಅಸ್ಥಿಮಜ್ಜೆಯಲ್ಲಿ ನ್ಯೂಟ್ರೋಫಿಲ್‌ಗಳ ಉತ್ಪಾದನೆಯಾಗುತ್ತವೆ. ಕ್ಯಾನ್ಸರ್‌ ಪೀಡಿತ ಇಲಿಗಳ ಕರುಳಲ್ಲಿ ಈಗ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸಿತು ಮತ್ತು ನ್ಯೂಟ್ರೋಫಿಲ್‌ಗಳ ಸಂಖ್ಯೆಯೂ ಹೆಚ್ಚಿತು. ಹಾಗಾಗಿ ನ್ಯೂಟ್ರೋಫಿಲ್‌ಗಳು ಹಾಗೂ ಕರುಳಿನ ಬ್ಯಾಕ್ಟೀರಿಯಾಗಳ ಸಂಖ್ಯೆಯು ಒಂದಕ್ಕೊಂದು ಪೂರಕವೆನ್ನುವುದು ಖಚಿತವಾಯಿತು. ಅರ್ಥಾತ್‌, ಕ್ಯಾನ್ಸರ್‌ ಕಿಮೋಥೆರಪಿಯ ನಂತರ ಕಾಡುವ ಬಿಳಿರಕ್ತಕಣಗಳ ಕೊರತೆಯನ್ನು ನೀಗಿಸಲು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚೆಚ್ಚು ವೃದ್ಧಿಸಿಕೊಳ್ಳಬೇಕು. ಇದು ಕಿಮೋಥೆರಪಿಯಲ್ಲಿ ನೀಡುವ ಆ್ಯಂಟಿಬಯೋಟಿಕ್‌ಗಳು ಕರುಳಿನಲ್ಲಿರುವ ಇತರೆ ಬ್ಯಾಕ್ಟೀರಿಯಾಗಳನ್ನು ನಾಶಮಾಡದಂತೆ ಮಾಡುವುದು ಹೇಗೆ ಎನ್ನುವದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಲು ಹಾದಿಮಾಡಿಕೊಟ್ಟಿದೆ ಎನ್ನುತ್ತಾರೆ, ಹಶಿಮೋಟೋ ಮತ್ತು ತೇಷಿಮಾ.

ಸ್ವಾಭಾವಿಕವಾಗಿ ನಮ್ಮ ಶರೀರವ್ಯವಸ್ಥೆ ಎಷ್ಟು ಅದ್ಭುತವೆಂದರೆ, ಯಾವ ರೋಗಕಾರಕಗಳು ಪ್ರವೇಶವಾಗಿವೆ, ಅವನ್ನು ಹೇಗೆ ಹತ್ತಿಕ್ಕಬೇಕು, ಯಾವ ಜೀವಕೋಶಗಳು ಕಡಿಮೆಯಾಗಿವೆ, ಎಷ್ಟು ಉತ್ಪಾದಿಸಬೇಕು ಎಲ್ಲವೂ ನಮ್ಮ ಅರಿವಿಗೆ ಬಾರದೆಯೇ ನಡೆಯುತ್ತಿರುತ್ತವೆ. ಒಟ್ಟಾರೆ ಇವೆಲ್ಲವನ್ನೂ ನಿರ್ವಹಿಸುವ, ನಮ್ಮ ರೋಗನಿರೋಧಕ ವ್ಯವಸ್ಥೆಯಲ್ಲಿ ಸೈನಿಕರಂತಿರುವ ಬಿಳಿರಕ್ತಕಣಗಳನ್ನು ಸರಿಯಾದ ಪ್ರಮಾಣದಲ್ಲಿರಿಸಿಕೊಳ್ಳಬೇಕು ಹಾಗೂ ಕರುಳಿನ ಬ್ಯಾಕ್ಟೀರಿಯಾಗಳನ್ನು ಸುಸ್ಥಿಯಲ್ಲಿಡಬೇಕು. ಆಗ ಕ್ಯಾನ್ಸರ್‌ನಂತಹ ಭಯಾನಕ ರೋಗವನ್ನೂ ಗೆದ್ದು ಎಲ್ಲರಂತೆ ಆರೋಗ್ಯದಿಂದ ಬದುಕಬಹುದು ಎನ್ನುತ್ತದೆ ಈ ಸಂಶೋಧನೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.