ADVERTISEMENT

Google Doodle: ಪ್ರೊ.ಯು.ಆರ್.ರಾವ್‌ಗೆ ಡೂಡಲ್ ಗೌರವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 6:24 IST
Last Updated 10 ಮಾರ್ಚ್ 2021, 6:24 IST
ಗೂಗಲ್‌ ವಿಶೇಷ ಡೂಡಲ್‌
ಗೂಗಲ್‌ ವಿಶೇಷ ಡೂಡಲ್‌   

ಉಡುಪಿ: ಸ್ಯಾಟಲೈಟ್‌ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದ ಉಡುಪಿ ರಾಮಚಂದ್ರ ರಾವ್ (ಪ್ರೊ.ಯು.ಆರ್.ರಾವ್‌) ಅವರ 89ನೇ ಜನ್ಮದಿನವನ್ನು ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವಿಸಿದೆ.

1932ರಲ್ಲಿ ಉಡುಪಿಯ ಅದಮಾರಿನಲ್ಲಿ ಜನಿಸಿದ ಪ್ರೊ.ಯು.ಆರ್.ರಾವ್‌ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಾನೆತ್ತರದ ಸಾಧನೆ ಮಾಡಿದವರು. 1984 ರಿಂದ 1994ರವರೆಗೆ ಇಸ್ರೋ ಚೇರ್ಮನ್ ಆಗಿದ್ದ ರಾವ್‌, 1975ರಲ್ಲಿ ದೇಶದ ಮೊದಲ ಸ್ಯಾಟ್‌ಲೈಟ್‌ ‘ಆರ್ಯಭಟ’ ಯಶಸ್ವಿ ಉಡಾವಣೆಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಕಾರಣೀಕರ್ತರಾದ ಪ್ರೊ.ಯು.ಆರ್.ರಾವ್‌ಅವರನ್ನು ಭಾರತೀಯ ಬ್ಯಾಹಾಕಾಶ ಕಾರ್ಯಕ್ರಮಗಳ ಪಿತಾಮಹ ಎಂದು ಕರೆಯಲಾಗುತ್ತದೆ.

ADVERTISEMENT

ಇಸ್ರೋ ಪಿಎಸ್‌ಎಲ್‌ವಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಾಗೂ ಕ್ರಯೋಜನಿಕ್‌ ತಂತ್ರಜ್ಞಾನ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದಾರೆ ಯು.ಆರ್.ರಾವ್‌. ಇವರ ಸಾಧನೆಗೆ 1976ರಲ್ಲಿ ಪದ್ಮಭೂಷಣ ಹಾಗೂ 2017ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳು ಸಂದಿವೆ. 2013ರಲ್ಲಿ ಅಮೆರಿಕಾದ ಪ್ರತಿಷ್ಠಿತ ‘ಸ್ಯಾಟ್‌ಲೈಟ್‌ ಹಾಲ್‌ಆಪ್‌ ಪೇಮ್‌’ ಹಾಗೂ 2016ರಲ್ಲಿ ಮೆಕ್ಸಿಕೋದಲ್ಲಿ ‘ಐಎಎಫ್‌ ಹಾಲ್‌ ಆಫ್‌ ಫೇವ್‌’ ಗೌರವ ಪಡೆದ ಮೊದಲ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಎಂಬ ಅಗ್ಗಳಿಕೆ ಪ್ರೊ.ಯು.ಆರ್.ರಾವ್‌‌ ಅವರದ್ದು.

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 360ಕ್ಕೂ ಹೆಚ್ಚು ಸಂಶೋಧಾನ್ಮಕ ಲೇಖನ ಹಾಗೂ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅಮೆರಿಕಾದ ಟೆಕ್ಸಾಸ್‌ ವಿವಿಯಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಳಿಕ 1966ರಲ್ಲಿ ಭಾರತಕ್ಕೆ ಮರಳಿದ ರಾವ್‌, ಇಸ್ರೋ ಸಂಸ್ಥೆ ಸೇರಿ ಬಾಹ್ಯಾಕಾಶ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದರು.

2017ರಲ್ಲಿ ಬೆಂಗಳೂರಿನಲ್ಲಿ ಪ್ರೊ.ಯು.ಆರ್.ರಾವ್‌ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.