ADVERTISEMENT

ಮಂಗಳನ ಅಂಗಳದಿಂದ ಹೆಲಿಕಾಪ್ಟರ್ ಹಾರುತಿದೆ...

ಬಿ.ಆರ್‌.ಗುರುಪ್ರಸಾದ್‌
Published 24 ಏಪ್ರಿಲ್ 2021, 19:30 IST
Last Updated 24 ಏಪ್ರಿಲ್ 2021, 19:30 IST
ಮಂಗಳನ ಅಂಗಳದ ಮೇಲೆ ಹೆಲಿಕಾಪ್ಟರ್‌ ಹಾರಾಟ
ಮಂಗಳನ ಅಂಗಳದ ಮೇಲೆ ಹೆಲಿಕಾಪ್ಟರ್‌ ಹಾರಾಟ   

1903ರ ಡಿಸೆಂಬರ್ 17ರಂದು ಮಾನವನು ವಿಮಾನವೊಂದರ ಹಾರಾಟವನ್ನು ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದ. ಯಂತ್ರವೊಂದರ ನೆರವಿನೊಡನೆ ಚಲಿಸುವ ಆ ವಿಮಾನದ ಚಾರಿತ್ರಿಕ ಹಾರಾಟದ ನಂತರ 1940ರಲ್ಲಿ ಅಮೆರಿಕದ ಈಗೋರ್ ಸಿಕೋರ್ಸ್ಕಿ ನೆಲದಿಂದ, ನೇರವಾಗಿ ಮೇಲೇರಬಲ್ಲ ಹಾರುವ ಯಂತ್ರವಾದ ಹೆಲಿಕಾಪ್ಟರ್ ಒಂದರ ಹಾರಾಟವನ್ನು ಪ್ರಥಮ ಬಾರಿ ಯಶಸ್ವಿಯಾಗಿ ಸಾಧಿಸಿದ.

ಈ ಎರಡು ಹಾರುವ ಯಂತ್ರಗಳ ಯಾನ ನಡೆದದ್ದು ಮಾನವನ ವಾಸಸ್ಥಾನವಾದ ಭೂಮಿಯ ಮೇಲೆ.

ಮಾನವನನ್ನು ಹೊತ್ತ ವಿಮಾನವೊಂದರ ಯಶಸ್ವಿ ಹಾರಾಟದ 117 ವರ್ಷಗಳ ನಂತರ ಹಾಗೂ ವಿಮಾನವೊಂದರಂತೆ ಓಡುದಾರಿಯನ್ನು ಬೇಡದೇ ಧರೆಯಿಂದ ನೇರವಾಗಿ ಗಗನಕ್ಕೇರುವ ಹೆಲಿಕಾಪ್ಟರ್‌ನ ಮೊದಲ ಯಶಸ್ವಿ ಹಾರಾಟದ ನಂತರ ಅಂತಹ ಮತ್ತೊಂದು ಚರಿತ್ರಾರ್ಹ ಘಟನೆ ಈಚೆಗೆ ಜರುಗಿತು.

ADVERTISEMENT

ಕಳೆದ ಸೋಮವಾರ, ಪುಟ್ಟ ಆಟದ ಹೆಲಿಕಾಪ್ಟರ್ ಒಂದರಂತೆ ಕಾಣುವ ಹಾರುವ ಯಂತ್ರದ ಮೊದಲ ಹಾರಾಟ ಜಗತ್ತಿನಾದ್ಯಂತ ಖ್ಯಾತಿಯನ್ನು ಪಡೆಯಿತು. ಆಟದ ಅಥವಾ ಮಾದರಿ ಹೆಲಿಕಾಪ್ಟರ್‌ನ ಹಾರಾಟಕ್ಕೇಕೆ ಇಷ್ಟು ಪ್ರಾಮುಖ್ಯ?

ಇದಕ್ಕೆ ಉತ್ತರ ತುಂಬಾ ಸುಲಭವಾದುದು.

ಇನ್‌ಜೆನ್ಯೂಯಿಟಿ (ಚಾತುರ್ಯ) ಎಂಬ ಹೆಸರಿನ ಆ ಮಾದರಿ ಹೆಲಿಕಾಪ್ಟರ್ ಹಾರಿದ್ದು ಭೂಮಿಯ ಮೇಲಲ್ಲ. ಭೂಮಿಯಿಂದ ಸುಮಾರು 29 ಕೋಟಿ ಕಿಲೊ ಮೀಟರ್ ದೂರದಲ್ಲಿರುವ ಕುತೂಹಲಕಾರಿ ಲೋಕವಾದ ಮಂಗಳ ಗ್ರಹದ ಮೇಲೆ. ಇನ್‌ಜೆನ್ಯೂಯಿಟಿಯ ಹಾರಾಟ ಬೇರೊಂದು ಲೋಕದ ಮೇಲೆ ಯಾಂತ್ರಿಕ ಸಾಧನವೊಂದನ್ನು ಹಾರಿಸುವ ಮಾನವನ ಮೊದಲ ಯಶಸ್ವಿ ಪ್ರಯತ್ನವಾಗಿದೆ.

ಇನ್‌ಜೆನ್ಯೂಯಿಟಿ, ಈಗ ಮದುವೆ ಸಮಾರಂಭವೊಂದರ ವಿಡಿಯೊ ತೆಗೆಯಲು ಬಳಸುವ ‘ಡ್ರೋನ್‌’ಗಳಿಗಿಂತ ಸುಮಾರು ಮೂರ್ನಾಲ್ಕು ಪಟ್ಟು ದೊಡ್ಡದಾಗಿದೆ ಅಷ್ಟೆ. ಭೂಮಿಯ ಮೇಲಿನ ಇದರ ತೂಕ ಸುಮಾರು 1.8 ಕಿಲೊಗ್ರಾಂಗಳು. ಇದರ ನಿರ್ಮಾಣ ಹಾಗೂ ಹಾರಾಟದ ಸಂಬಂಧದಲ್ಲಿ ಅಗತ್ಯವಾಗುವ ಹಣ 80 ಮಿಲಿಯನ್ ಅಮೆರಿಕದ ಡಾಲರ್‌ಗಳು(ಸುಮಾರು ₹ 600 ಕೋಟಿ).

ಕುತೂಹಲವೆಂದರೆ ಮಂಗಳ ಗ್ರಹದ ಮೇಲೆ ಇದರ ತೂಕ ಸುಮಾರು 700 ಗ್ರಾಂಗಳು, ಅಷ್ಟೆ. ಏಕೆಂದರೆ ಭೂಮಿಗಿಂತ ಚಿಕ್ಕದಾದ ಮಂಗಳಗ್ರಹದ ಗುರುತ್ವಾಕರ್ಷಣಾ ಶಕ್ತಿ ಭೂಮಿಯದರ ಶೇಕಡ 38ರಷ್ಟಿದೆ. ಹಾಗಾದರೆ ಮಂಗಳಗ್ರಹದ ಮೇಲೆ ರೋಬಾಟ್ ಹೆಲಿಕಾಪ್ಟರ್ ಒಂದನ್ನು ಹಾರಿಸುವುದೇನು ಮಹಾ ಎಂದೆನಿಸುತ್ತದೆಯೇ?

ಸ್ವಾರಸ್ಯವಿರುವುದು ಅಲ್ಲೇ!

ಮಂಗಳಗ್ರಹದ ಗುರುತ್ವಾಕರ್ಷಣಾ ಶಕ್ತಿ ಕಡಿಮೆ ಇರುವಂತೆಯೇ ಅದನ್ನು ಆವರಿಸಿರುವ ವಾತಾವರಣವೂ ಭೂಮಿಯದಕ್ಕೆ ಹೋಲಿಸಿದಲ್ಲಿ ಅತ್ಯಂತ, ಅಂದರೆ 99 ಪಟ್ಟು ತೆಳುವಾದುದಾಗಿದೆ. ಇಷ್ಟು ತೆಳುವಾದ ವಾತಾವರಣವು ವೇಗವಾಗಿ ತಿರುಗುತ್ತಿರುವ ತನ್ನ ‘ಬ್ಲೇಡ್’ಗಳ (ರೆಕ್ಕೆ) ನೆರವಿನೊಡನೆ ಮೇಲೇರುವುದು, ಕೆಳಗಿಳಿಯುವುದು, ವಿವಿಧ ದಿಕ್ಕುಗಳಲ್ಲಿ ಚಲಿಸುವುದು ಈ ರೀತಿ ಮಾಡುವ ಹೆಲಿಕಾಪ್ಟರ್‌ನಂತಹ ವಾಹನಗಳನ್ನು ಸುಲಭವಾಗಿ ಬೆಂಬಲಿಸಲಾರದು.

ಇದರಿಂದಾಗಿ ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾದ ವಿಜ್ಞಾನಿಗಳು ಇನ್‌ಜೆನ್ಯೂಯಿಟಿಯ ಬ್ಲೇಡ್‌ಗಳು ನಿಮಿಷಕ್ಕೆ 2500ಕ್ಕೂ ಹೆಚ್ಚು ಬಾರಿ ಸುತ್ತುವಂತೆ ಅದನ್ನು ನಿರ್ಮಿಸಲು ತೀರ್ಮಾನಿಸಿದರು. ಇದು ಭೂಮಿಯ ಮೇಲಿನ ಹೆಲಿಕಾಪ್ಟರ್‌ಗಳ ಬ್ಲೇಡ್‌ಗಳು ತಿರುಗುವುದಕ್ಕಿಂತ ಐದು ಪಟ್ಟು ಹೆಚ್ಚು!

ಇದರೊಂದಿಗೇ ಹಗುರವಾಗಿದ್ದರೂ ದೃಢವಾಗಿರುವ ಕಂಪಾಸಿಟ್ಸ್ ಎಂಬ ವಿಶೇಷವಾದ ವಸ್ತುಗಳ ಬಳಕೆಯೊಂದಿಗೆ ಇನ್‌ಜೆನ್ಯೂಯಿಟಿಯ ನಾಲ್ಕು ಬ್ಲೇಡ್‌ಗಳನ್ನು ನಿರ್ಮಿಸಲಾಯಿತು. ಇನ್‌ಜೆನ್ಯೂಯಿಟಿಯನ್ನು ಭೂಮಿಯ ಮೇಲಿಂದ ಆ ಕ್ಷಣದಲ್ಲೇ ನಿಯಂತ್ರಿಸುವುದು ಅಸಾಧ್ಯ. ಏಕೆಂದರೆ ಅದರ ಪೈಲಟ್ ಭೂಮಿಯ ಮೇಲಿನಿಂದ ರವಾನಿಸುವ ರೇಡಿಯೊ ಆಜ್ಞೆಗಳು ಮಂಗಳ ಗ್ರಹದ ಮೇಲಿರುವ ಆ ರೋಬಾಟ್ ಹೆಲಿಕಾಪ್ಟರ್‌ಅನ್ನು ತಲುಪಲು ಅನೇಕ ನಿಮಿಷಗಳ ಕಾಲ ತೆಗೆದುಕೊಳ್ಳುತ್ತವೆ.

ಈ ಕಾರಣದಿಂದಾಗಿ ಇನ್‌ಜೆನ್ಯೂಯಿಟಿಯ ಅತ್ಯಾಧುನಿಕ ಎಲೆಕ್ಟ್ರಾನಿಕ್ ಮೆದುಳು ತಾನು ಗ್ರಹಿಸಿದ ಮಾಹಿತಿಯನ್ನು ಆಧರಿಸಿ ಸ್ವತಃ ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸ್ವತಂತ್ರವಾಗಿ ಹಾರಾಟ ನಡೆಸಲು ಸಮರ್ಥವಾಗಿದೆ.

ಕನ್ನಡಿಗರ ಕೊಡುಗೆ ಆ ವೇಳೆಯಲ್ಲಿ ಯಾನದ ‘ಕಾಮೆಂಟರಿ’ ನೀಡುತ್ತಿದ್ದ ಪರ್ಸಿವೆರೆನ್ಸ್ ತಂಡದ ಹಿರಿಯ ಇಂಜಿನಿಯರ್ ಹಾಗೂ ಮೂಲತಃ ಕನ್ನಡಿಗರಾದ ಸ್ವಾತಿ ಮೋಹನ್ ಜಗತ್ತಿನಾದ್ಯಂತ ಖ್ಯಾತಿಯನ್ನು ಪಡೆದಿದ್ದರು. ಇಂದು ಇನ್‌ಜೆನ್ಯೂಯಿಟಿಯ ಯಶಸ್ವಿ ಹಾರಾಟದ ಹಿನ್ನೆಲೆಯಲ್ಲಿ ಆ ವಾಹನದ ಮುಖ್ಯ ಎಂಜಿನಿಯರ್ ಆಗಿರುವ ಬಾಬ್ ಬಲರಾಂ ಸಹ ಅಚ್ಚ ಕನ್ನಡಿಗರು ಎಂಬುದು ನಮ್ಮ ಹರ್ಷ ಇಮ್ಮಡಿಯಾಗುವಂತೆ ಮಾಡಿದೆ.

ಬಲರಾಂ ಅವರು ಮೈಸೂರು ಸಂಸ್ಥಾನದ ಮಂತ್ರಿಮಂಡಲದ ಸದಸ್ಯರಾಗಿದ್ದ ಹಾಗೂ ಕೆಲಕಾಲ ದಿವಾನರಾಗಿಯೂ ಕಾರ್ಯನಿರ್ವಹಿಸಿದ ಸರ್ ಎಂ.ಎನ್. ಕೃಷ್ಣರಾವ್ (ಇವರ ಹೆಸರಿನ ಪಾರ್ಕ್ ಬೆಂಗಳೂರಿಗರಿಗೆ, ಅದರಲ್ಲೂ ದಕ್ಷಿಣ ಬೆಂಗಳೂರಿಗರಿಗೆ ಚಿರಪರಿಚಿತ) ಅವರ ವಂಶಜರು.

ಮಂಗಳಗ್ರಹದ ಮೇಲ್ಮೈಯನ್ನು ತಲುಪಿದ ಸುಮಾರು ಒಂದೂವರೆ ತಿಂಗಳ ನಂತರ ನಾಸಾ ವಿಜ್ಞಾನಿಗಳು ಇನ್‌ಜೆನ್ಯೂಯಿಟಿಯನ್ನು ಅದರ ‘ಏರ್ ಫೀಲ್ಡ್‌’ನಲ್ಲಿ (ಏರಿಳಿಯುವ ಪ್ರದೇಶ) ಪರ್ಸಿವೆರೆನ್ಸ್‌ನಿಂದ ಸುರಕ್ಷಿತವಾಗಿ ಕೆಳಗಿಳಿಸಿ ಬಳಿಕ ಪರ್ಸಿವೆರೆನ್ಸ್ ಅದರಿಂದ ಸಾಕಷ್ಟು ದೂರ ಸರಿಯುವಂತೆ ಮಾಡಿದರು.

ಇದಾದ ನಂತರ ಇನ್‌ಜೆನ್ಯೂಯಿಟಿಯನ್ನು ಹಾರಿಸುವ ಪ್ರಥಮ ಪ್ರಯತ್ನವು ತಾಂತ್ರಿಕ ತೊಂದರೆಯೊಂದರಿಂದಾಗಿ ಮುಂದೆ ಹಾಕಲ್ಪಟ್ಟಿತು. ಈ ಅನುಭವದಿಂದಾಗಿ ಆ ಪುಟ್ಟ ಹೆಲಿಕಾಪ್ಟರ್‌ನ ಎಲೆಕ್ಟ್ರಾನಿಕ್ ಮೆದುಳಿಗೆ ಹೊಸ ಸೂಚನೆಗಳನ್ನು ರೇಡಿಯೊ ತರಂಗಗಳ ಮೂಲಕ ರವಾನಿಸಲಾಯಿತು.

ಇದೀಗ ಇನ್‌ಜೆನ್ಯೂಯಿಟಿ ತನ್ನ ಮೊದಲ ಯಶಸ್ವಿ ಹಾರಾಟವನ್ನು ಸುರಕ್ಷಿತವಾಗಿ, ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಪೂರೈಸಿದೆ. ಇದರ ಹಾರಾಟದ ಅವಧಿ ಹೆಚ್ಚೇನಿರಲಿಲ್ಲ. ಕೇವಲ 30 ಸೆಕೆಂಡುಗಳು ಅಷ್ಟೆ. ಅಷ್ಟು ಕಾಲದಲ್ಲಿ ಅದು ಮಂಗಳ ಗ್ರಹದ ಮೇಲ್ಮೈಯಿಂದ ಸುಮಾರು ಹತ್ತು ಅಡಿಗಳಷ್ಟು ಮೇಲೇರಿ ಅಲ್ಲೇ ಒಮ್ಮೆ ತಿರುಗಿ, ತೇಲಾಡಿ ಕೆಳಗಿಳಿಯಿತಷ್ಟೆ.ಆದರೆ ವಿಲ್ಬರ್ ಮತ್ತು ಆರ್ವಿಲ್ ರೈಟ್ ಸಹೋದರರು ಡಿಸೆಂಬರ್ 17, 1903ರಂದು ನಡೆಸಿದ ಮೊದಲ ವಿಮಾನ ಹಾರಾಟವೂ ಕೇವಲ 12 ಸೆಕೆಂಡುಗಳಷ್ಟು ಆವಧಿಯದಾಗಿತ್ತಷ್ಟೆ. ಅವರ ಆ ಆವಿಷ್ಕಾರದ ಫಲವಾದ ವಿಮಾನಗಳು ಇಂದು ಜಗತ್ತಿನ ಆರ್ಥಿಕತೆಯಲ್ಲಿ ಎಂತಹ ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ ಅಲ್ಲವೇ? ಹೀಗೆ ಒಂದು ಸಣ್ಣ ಪ್ರಮಾಣದಲ್ಲಿ ಜರುಗುವ ತಾಂತ್ರಿಕ ಮುನ್ನಡೆಯೊಂದು ಮುಂದೆ ಹೊಸ ಕ್ಷೇತ್ರವೊಂದರ ಆರಂಭಕ್ಕೆ ನಾಂದಿಯಾಗಬಹುದು.

ಇನ್‌ಜೆನ್ಯೂಯಿಟಿ ಹಾರಾಟ ನಡೆಸಿದ ಪ್ರದೇಶಕ್ಕೆ ‘ರೈಟ್ ಸಹೋದರರ ಪ್ರದೇಶ’ ಎಂದು ಕರೆಯಲಾಗಿದೆ. ಅವರು ಹಾರಿಸಿದ ಚಾರಿತ್ರಿಕ ವಿಮಾನವಾದ ಫ್ಲಯರ್‌ನ ರೆಕ್ಕೆಯ ಚೂರೊಂದನ್ನು ಇನ್‌ಜೆನ್ಯೂಯಿಟಿಗೆ ಅಂಟಿಸಲಾಗಿತ್ತು.

ಮುಂದಿನ ಒಂದು ತಿಂಗಳಲ್ಲಿ ಇನ್‌ಜೆನ್ಯೂಯಿಟಿ ಇನ್ನೂ ನಾಲ್ಕು ಹಾರಾಟಗಳನ್ನು ನಡೆಸಲಿದೆ. ಈಗಾಗಲೇ ವಿಜ್ಞಾನಿಗಳು ವೈಜ್ಞಾನಿಕವಾಗಿ ಕುತೂಹಲಕಾರಿ ಹೊಸ ಪ್ರದೇಶಗಳನ್ನು ಮಂಗಳಗ್ರಹದ ಹಾಗೂ ಇತರ ಕೆಲವು ಲೋಕಗಳಲ್ಲಿ ಗುರುತಿಸಲು ಇನ್‌ಜೆನ್ಯೂಯಿಟಿಯಂತಹ ರೋಬಾಟ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ.

ಇನ್‌ಜೆನ್ಯೂಯಿಟಿಯ ಹಾರಾಟ ಮಂಗಳಗ್ರಹದ ಅನ್ವೇಷಣೆಯಲ್ಲಿ ಮಾನವ ಕ್ರಮಬದ್ಧವಾಗಿ ಮುಂದೆ ಸಾಗುತ್ತಿರುವುದರ ಇತ್ತೀಚಿನ ಬೆಳವಣಿಗೆಯಾಗಿದೆ. ಇದಾದ ನಂತರ ಮಾನವ ಸ್ವತಃ ತಾನೇ ಮಂಗಳಗ್ರಹ ಯಾನವನ್ನು ಕೈಗೊಳ್ಳುವುದಕ್ಕೆ ಪೂರ್ವಭಾವಿಯಾಗಿ ಈ ನಿಟ್ಟಿನಲ್ಲಿ ಮತ್ತೇನು ಚಟುವಟಿಕೆಗಳು ನಡೆಯುತ್ತವೆಯೋ? ಕಾದು ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.